ಸಾರಾಂಶ
ಕೊಪ್ಪಳ: ಕೊಪ್ಪಳ, ಗಂಗಾವತಿ ತಾಲೂಕಿನ ಕೆಲಭಾಗ ಹಾಗೂ ಕುಕನೂರು ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಸಾಧಾರಣ ಮಳೆಯಾಗಿದ್ದರೆ, ಗಂಗಾವತಿ ತಾಲೂಕಿನ ನವಲಿ ತಾಂಡದ ಶ್ರೀ ದುರಗಮ್ಮ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದು, ದೇವಸ್ಥಾನ ಶಿಥಿಲಗೊಂಡಿದೆ.
ನವಲಿ ಸುತ್ತಮುತ್ತಲು ಪ್ರದೇಶದಲ್ಲಿ ಸುಮಾರು 30 ನಿಮಿಷಕ್ಕೂ ಅಧಿಕ ಮಳೆಯಾಗಿದ್ದು, ಇದೇ ವೇಳೆಯಲ್ಲಿ ದೇವಸ್ಥಾನಕ್ಕೆ ಬಹುದೊಡ್ಡ ಸಿಡಿಲೊಂದು ಅಪ್ಪಳಿಸಿತು. ಇದರಿಂದ ದೇವಸ್ಥಾನದ ಗೋಪುರ ಭಾಗ ಮತ್ತು ದೇವಸ್ಥಾನ ಕೆಲಭಾಗ ಶಿಥಲಗೊಂಡಿದೆ. ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಆದರೆ, ಯಾವುದೇ ಜೀವ ಹಾನಿಯಾಗಿಲ್ಲ. ಅಷ್ಟೇ ಅಲ್ಲ, ಈ ಭಾಗದಲ್ಲಿ ಮೊಬೈಲ್‌ಗಳು ಸಹ ಸಿಡಿದು ಹೋಗಿದ್ದು, ಜನರ ಆತಂಕಗೊಂಡಿದ್ದಾರೆ.ಕೊಪ್ಪಳ ನಗರದಲ್ಲಿ ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಮಳೆಯಾಗಿದ್ದರೆ ಕುಕನೂರು ವ್ಯಾಪ್ತಿಯಲ್ಲಿ ಅಲ್ಪಮಳೆಯಾಗಿದೆ. ಯಲಬುರ್ಗಾದಲ್ಲಿಯೂ ಗುಡುಗು, ಸಿಡಿಲುಗಳ ಆರ್ಭಟ ಜೋರಾಗಿದ್ದರು ಅಷ್ಟಾಗಿ ಮಳೆಯಾಗಿಲ್ಲ.
ಹನುಮಸಾಗರ ಸಮೀಪದ ಕುಂಬಳಾವತಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಮಳೆಯೊಂದಿಗೆ ಸಿಡಿಲು ಬಡಿದು ಒಂದು ಆಡು, ಮೂರು ಕುರಿಗಳು ಬಲಿಯಾಗಿದೆ.ಬಿರುಗಾಳಿಗೆ ನೆಲಕಚ್ಚಿದ ಎಲೆಬಳ್ಳಿ, ಬಾಳೆ: ಕಂಗಾಲಾದ ರೈತರು
ಶುಕ್ರವಾರ ಸಂಜೆ ಬೀಸಿದ ಭಾರೀ ಬಿರುಗಾಳಿಗೆ ಹನುಮಸಾಗರ ಸಮೀಪದ ತುಗ್ಗಲಡೋಣಿ, ಯರಗೇರಾ, ಕುಂಬಳಾವತಿ, ಹನುಮಸಾಗರ ಸೇರಿದಂತೆ ವಿವಿಧೆಡೆ ಜಮೀನುಗಳಲ್ಲಿ ಬೆಳೆದಿರುವ ಎಲೆಬಳ್ಳಿ, ಬಾಳೆ, ನುಗ್ಗೆ ಮುಂತಾದ ಬೆಳೆಗಳು ನೆಲಕಚ್ಚಿ ಲಕ್ಷಾಂತರ ರು. ನಷ್ಟವಾಗಿದೆ.ತುಗ್ಗಲಡೋಣಿ ಗ್ರಾಮದ ರೈತರ ದ್ಯಾಮಣ್ಣ ಭೀಮಪ್ಪ ಬಾವಂಜಿ, ಹನುಮಪ್ಪ ಭೀಮಪ್ಪ ಭಾವಂಜಿ ಎಂಬವವರಿಗೆ ಸೇರಿದ ತಲಾ ಒಂದು ಜಮೀನಿನಲ್ಲಿ ಬೆಳೆದುನಿಂತ ಎಲೆಬಳ್ಳಿ, ಬಾಳೆ ಬಿರುಗಾಳಿ, ಮಳೆಗೆ ತುತ್ತಾಗಿವೆ. ಲಕ್ಷಗಟ್ಟಲೆ ಖರ್ಚು ಮಾಡಿ ಬೆಳೆಯಲಾಗಿದ್ದ ಎಲೆಬಳ್ಳಿಗಳು ಕಟಾವು ಮಾಡುವ ಹಂತದಲ್ಲಿಯೇ ಬೆಳೆ ನೆಲಸಮವಾಗಿದ್ದು, ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದ ಇಂತಹ ದಿನಗಳಲ್ಲಿ ಮೊದಲೇ ಕಂಗೆಟ್ಟಿರುವ ರೈತರಿಗೆ ಗಾಯದ ಮೇಲೆ ಬರೆ ಎಂಬಂತೆ ಇಂತಹ ಘಟನೆಗಳಿಂದ ಮತ್ತಷ್ಟು ಕಂಗಾಲಾಗುವಂತಾಗಿದೆ. ಪರಿಹಾರಕ್ಕಾಗಿ ತೋಟಗಾರಿಕೆ ಇಲಾಖೆಗಳಿಗೆ ಮೊರೆ ಹೋಗಿದ್ದಾರೆ.
ಸಿಡಿಲಿಗೆ ಎತ್ತು ಬಲಿಕುಷ್ಟಗಿ ತಾಲೂಕಿನ ಹುಲಿಯಾಪುರ ತಾಂಡಾದಲ್ಲಿ ಶನಿವಾರ ಮಧ್ಯಾಹ್ನ ಬಡಿದ ಸಿಡಿಲಿನಿಂದ ಬುಡ್ಲೆಪ್ಪ ಕೃಷ್ಣಪ್ಪ ಲಮಾಣಿ ಅವರಿಗೆ ಸೇರಿದ ಎತ್ತು ಮೃತಪಟ್ಟಿದೆ.
ಗಂಗಾವತಿಯಲ್ಲಿ ಸಿಡಿಲಿನ ಆರ್ಭಟ, ಎಲೆಕ್ಟ್ರಾನಿಕ್ ಉಪಕರಣಕ್ಕೆ ಹಾನಿಗಂಗಾವತಿ ತಾಲೂಕಿನಲ್ಲಿ ಗುಡುಗು-ಸಿಡಿಲಿನ ಆರ್ಭಟಕ್ಕೆ 10ಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ ಮತ್ತು ಮೊಬೈಲ್‌ಗಳಿಗೆ ಹಾನಿಯಾಗಿವೆ.
ಗಂಗಾವತಿ ನಗರ ಸೇರಿದಂತೆ ಹಲವೆಡೆ 30 ನಿಮಿಷ ಧಾರಾಕಾರ ಮಳೆ ಸುರಿಯಿತು. ಬಿಸಿಲಿನಿಂದ ತತ್ತರಿಸಿದ ಜನತೆಗೆ ಖುಷಿಯಾಯಿತು. ಆದರೆ ಸಿಡಿಲಿನ ಅಬ್ಬರಕ್ಕೆ ತತ್ತರಿಸಿದರು. ಹಲವು ಮನೆಗಳಲ್ಲಿರುವ ಟಿವಿಗಳು ಸುಟ್ಟಿವೆ.ಗಂಗಾವತಿ ಸಮೀಪದ ನವಲಿ-ತಾಂಡದಲ್ಲಿ ಸಿಡಿಲು ಬಡಿದು ಗೋಪುರಕ್ಕೆ ಹಾನಿಯಾಗಿದ್ದರೂ ಕನಕಗಿರಿ ತಹಸೀಲ್ದಾರ್ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಾಂಡಾ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗಷ್ಟೇ ದೇಗುಲದ ಗೋಪುರ ನಿರ್ಮಿಸಲಾಗಿತ್ತು. ಪ್ರಾಣಹಾನಿಯಾದರೆ ಮಾತ್ರ ಭೇಟಿ ನೀಡ ಬೇಕೇ ಎಂದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕುಕನೂರಲ್ಲಿ ತಂಪು ತಂದ ಮಳೆಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ನಾನಾ ಗ್ರಾಮದಲ್ಲಿ ಸಂಜೆ ಸಾಧಾರಣ ಮಳೆ ಸುರಿಯಿತು. ಬೇಸಿಗೆ ಬಿಸಲಿನಿಂದ ಬಸವಳಿದಿದ್ದ ಜನತೆಗೆ ಮಳೆ ಹನಿ ತಂಪು ತಂದಿತು. ಗುಡುಗು, ಮಿಂಚುಗಳೊಂದಿಗೆ ಮಳೆ ಆರಂಭವಾಯಿತು. ರಭಸ ಗಾಳಿಯೊಂದಿಗೆ ಚಲಿಸುತ್ತಿರುವ ಮೋಡಗಳು ಸುರಿಸಿದ ಮಳೆ ಹನಿಗಳು ಇಳೆಗೆ ತಂಪು ನೀಡಿದವು. ಬಿಸಿಲ ಝಳದಿಂದ ಇಳೆ ಸಹ ಬಿಸಿ ಆಗಿತ್ತು. ಬಿಸಿ ಗಾಳಿಗೆ ಜನ ಹೈರಾಣಾಗಿದ್ದರು. ಸಂಜೆ ಸುರಿದ ಮಳೆಯಿಂದ ಜನರ ಮೊಗದಲ್ಲಿ ಸಂತಸ ಕಂಡುಬಂತು.
ಸಿಡಿಲಿಗೆ ಒಂದು ಆಡು, ಮೂರು ಕುರಿ ಬಲಿಹನುಮಸಾಗರ ಸಮೀಪದ ಕುಂಬಳಾವತಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಮಳೆಯೊಂದಿಗೆ ಸಿಡಿಲು ಬಡಿದು ಒಂದು ಆಡು, ಮೂರು ಕುರಿಗಳು ಬಲಿಯಾದ ಘಟನೆ ನಡೆದಿದೆ.ಇವು ಕುಂಬಳಾವತಿ ಗ್ರಾಮದ ಕುರಿಗಾಯಿ ಶಿವಪ್ಪ ರಾಮಪ್ಪ ಕುಂಟೋಜಿ ಎಂಬವರಿಗೆ ಸೇರಿದ್ದಾಗಿದೆ. ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಸಂಜೆ ಬಿರುಗಾಳಿ, ಗುಡುಗು ಸಿಡಿಲಿನೊಂದು ಮಳೆ ಆರಂಭವಾಯಿತು. ಆಗ ಸಿಡಿಲಿನ ಹೊಡೆತಕ್ಕೆ ಒಂದು ಸ್ಥಳದಲ್ಲಿ ಮೃತಪಟ್ಟಿದೆ. ಎರಡು ಕುರಿ, ಒಂದು ಆಡು ಶನಿವಾರ ಬೆಳಗಿನ ಜಾವ ಮೃತಪಟ್ಟಿವೆ. ಅದೃಷ್ಟವಶಾತ್ ಕುರಿಗಾಹಿಗೆ ಯಾವುದೆ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ರಾತ್ರಿ ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.