ಸಾರಾಂಶ
ಲೋಕಾಪುರ ಪಟ್ಟಣದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಎರಡನೇ ದಿನವಾದ ಶನಿವಾರ ಮರಳಿ ಲಕ್ಷ್ಮೀದೇವಿ ದೇವಸ್ಥಾನಕ್ಕೆ ರಥೋತ್ಸವ ಬಂದು ತಲುಪಿತು.
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದಲ್ಲಿ ಪ್ರತಿ ಏಳು ವರ್ಷಕ್ಕೊಮ್ಮೆ ಜರುಗುವ ದುರ್ಗಾದೇವಿ ಜಾತ್ರೆ ಎರಡನೇ ದಿವಸ ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಮರಳಿ ಲಕ್ಷ್ಮೀ ದೇವಸ್ಥಾನಕ್ಕೆ ಬಂದು ತಲುಪಿತು. ಊರ ಹಬ್ಬವೆಂದೇ ಕರೆಯಲಾಗುವ ದೇವಿಯರ ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣ ಕಳೆಗಟ್ಟಿದ್ದು, ಎಲ್ಲಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ದುರ್ಗಾದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಸತತ ೫ ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮಂಗಳ ಮುಖಿಯರು ತಾಯಿಯ ಮುಂದೆ ನೃತ್ಯ ನೋಡುಗರ ಗಮನ ಸೆಳೆಯಿತು. ಡಿಜೆ ಹಾಡಿನ ಕುಣಿತಕ್ಕೆ ಯುವಕರು ಕುಣಿದು ಕುಪ್ಪಳಿಸಿ, ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು.
ರಥೋತ್ಸವಕ್ಕೆ ವಿವಿಧ ಅಲಂಕಾರಗಳಿಂದ ಶೃಂಗರಿಸಲಾಗಿತ್ತು. ಡೊಳ್ಳು ಮತ್ತು ತಮಟೆ ಕರಡಿ ಮಜಲು, ಕುದರೆ ಸೇರಿ ವಿವಿಧ ವಾದ್ಯ ಮೇಳ ಮೆರವಣೆಗೆಯಲ್ಲಿದ್ದವು. ಮುತ್ತೈದೆಯರಿಗೆ ಕುಂಭಾರತಿಯೊಂದಿಗೆ ದುರ್ಗಾದೇವಿ ದೇವಸ್ಥಾನದಿಂದ ವಾಡೆ ಲಕ್ಷ್ಮೀ ದೇವಿ ದೇವಸ್ಥಾನವರೆಗೆ ಮೆರವಣಿಗೆ ಮುಖಾಂತರ ಅಪಾರ ಸಂಖ್ಯೆಯ ಭಕ್ತರ ನಡುವೆ ರಥೋತ್ಸವ ಜರುಗಿತು. ಸುತ್ತಮುತ್ತಲಿನ ಗ್ರಾಮಸ್ಥರು, ಹಿರಿಯರು, ಯುವಕರು ರಥೋತ್ಸವ ವೇಳೆ ಪಾಲ್ಗೊಂಡಿದ್ದರು.