ಸಾರಾಂಶ
ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 4 ಗಂಟೆಗೆ ದೇವಿಗೆ ವಿಶೇಷ ಮಹಾ ಅಭಿಷೇಕ, ಕರ್ಪೂರದಾರತಿ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನೆರವೇರಿದವು.
ಹುಬ್ಬಳ್ಳಿ:
ಆಷಾಢ ಮಾಸದಲ್ಲಿ ನಡೆಯುವ ಹೊಸೂರ ವೃತ್ತದ ಶ್ರೀ ಗಾಳಿ ದುರ್ಗಾದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ, ಸಂಭ್ರಮದಿಂದ ನೆರವೇರಿತು. ಬೆಳ್ಳಂಬೆಳಿಗ್ಗೆಯೇ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದೇವಿ ದರ್ಶನ ಪಡೆದರು.ಬೆಳಗ್ಗೆಯಿಂದ ರಾತ್ರಿಯ ವರೆಗೂ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಭಕ್ತರು ದೇವಿಗೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೊತ್ತಿದ್ದ ಹರಕೆ ತೀರಿಸಿ, ವಿಶೇಷ ಪ್ರಾರ್ಥನೆ ಮಾಡಿ ಭಕ್ತಿ-ಭಾವ ಮೆರೆದರು.
ಪ್ರತಿ ವರ್ಷ ಆಷಾಢ ಮಾಸದ ಮೂರನೇ ವಾರ ಇಲ್ಲಿ ಜಾತ್ರೆ ನಡೆಯುವುದು ವಾಡಿಕೆ. ಆಷಾಢ ಆರಂಭವಾದ ನಂತರ ಎರಡು ಮಂಗಳವಾರ ಮತ್ತು ಮೂರು ಶುಕ್ರವಾರ ಕಳೆದ ನಂತರ ಬರುವ ಮಂಗಳವಾರ ಜಾತ್ರೆಯ ದಿನ. ಶುಕ್ರವಾರ ಹಾಗೂ ಮಂಗಳವಾರ ವಿಶೇಷ ವಾರ ಮಾಡಿದ ಭಕ್ತರು ಗುಡಿಗೆ ಬಂದು ವಿಶೇಷ ಪೂಜೆ ಸಲ್ಲಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 4 ಗಂಟೆಗೆ ದೇವಿಗೆ ವಿಶೇಷ ಮಹಾ ಅಭಿಷೇಕ, ಕರ್ಪೂರದಾರತಿ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನೆರವೇರಿದವು. ನಂತರ ಹೊಸೂರಿನ ಗೋಕುಲ ರಸ್ತೆಯ ಆಂಜನೇಯ ದೇವಸ್ಥಾನದಿಂದ ಸಕಲ ಕಲಾ-ವಾದ್ಯ ಮೇಳದೊಂದಿಗೆ ಆರಂಭವಾದ ಪಲ್ಲಕ್ಕಿ ಉತ್ಸವ ಮೆರವಣಿಗೆ ಪ್ರಮುಖ ರಸ್ತೆಯಲ್ಲಿ ಸಾಗಿ ನಂತರ ಹೊಸೂರು ವೃತ್ತದಲ್ಲಿರುವ ಗಾಳಿ ದುರ್ಗಾದೇವಿ ದೇವಸ್ಥಾನಕ್ಕೆ ಬಂದು ಸಮಾರೋಪಗೊಂಡಿತು. ಉತ್ಸವದ ಅಂಗವಾಗಿ ನೂರಾರು ಮಹಿಳೆಯರು ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಡೊಳ್ಳು-ವಾದ್ಯಗಳು ಮೆರವಣಿಗೆಗೆ ಕಳೆ ತುಂಬಿದವು.
ಧಾರವಾಡ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ದೇವಿಗೆ ಉಡಿ ತುಂಬುವ ಕಾರ್ಯದಲ್ಲಿ ವಿದ್ಯಾನಗರ, ದೇಶಪಾಂಡೆ ನಗರ, ಜಯ ನಗರ, ತೊರವಿಹಕ್ಕಲ, ತಿಮ್ಮಸಾಗರ ಗುಡಿ, ವಿಕಾಸ ನಗರ ಮುಂತಾದ ಪ್ರದೇಶಗಳ ಸಾವಿರಾರು ಜನರು ಭಾಗವಹಿಸಿದ್ದರು.ಅನ್ನ ಸಂತರ್ಪಣೆ:
ಶ್ರೀಗಾಳಿ ದುರ್ಗಾದೇವಿ ಸೇವಾ ಸಮಿತಿಯ ವತಿಯಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ ವಿಶೇಷ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.ಬಿಗಿ ಭದ್ರತೆ;
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಸುತ್ತಲೂ 50ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ದೇವಸ್ಥಾನದ ಪಕ್ಕದ ರಸ್ತೆಯನ್ನು ಜಾತ್ರೆ ನಿಮಿತ್ತ ಬಂದ್ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳು, ಕಾಯಿ, ಕುಂಕುಮ-ಭಂಡಾರ, ವಿಭೂತಿ ಹಾಗೂ ಬಳೆಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು.