ಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ಮೂರು ದಿನಗಳ ಕಾಲ ಸಾತ್ವಿಕಾಭಿನಯ ಕಮ್ಮಟ
ಮೂಲ್ಕಿ: ಪಾತ್ರಗಳನ್ನು ಅಭಿನಯಿಸುವಾಗ ಇಡೀ ಪಾತ್ರದ ವ್ಯಕ್ತಿತ್ವ ತಿಳಿದಿರಬೇಕು. ಸಾವಿರ ಮಾತುಗಳಲ್ಲಿ ಹೇಳಲಿಕ್ಕೆ ಆಗದ್ದನ್ನು ಒಂದು ಕಣ್ಣೋಟ, ಒಂದು ಸನ್ನೆ ಇತ್ಯಾದಿಗಳಿಂದ ತೋರಿಸಬಹುದು. ಮಾತಿನಲ್ಲಿ ವ್ಯವಹರಿಸಲಾಗದ್ದು ಸಾತ್ವಿಕಾಭಿನಯ. ವಾಚಿಕವೂ ಅಭಿನಯ. ಸಾತ್ವಿಕಾಭಿನಯ ಪ್ರೇಕ್ಷಕನಿಗೆ ಪರಿಣಾಮ ಕೊಡಬೇಕು ಎಂದು ಶತಾವಧಾನಿ ಡಾ. ಆರ್. ಗಣೇಶ್ ಹೇಳಿದರು.ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯುವ ಸಾತ್ವಿಕಾಭಿನಯ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.ಹಿಂದೆ ಭರತನಾಟ್ಯ ಇತ್ಯಾದಿ ಕಲೆಗಳಲ್ಲಿ ಇದ್ದಂತೆ ಯಕ್ಷಗಾನದಲ್ಲಿ ಈಗ ಗುರುಕುಲ ಶಿಕ್ಷಣ ಪದ್ಧತಿ ಇಲ್ಲ. ಇಂದಿನವರಿಗೆ ಯಕ್ಷಗಾನ ಹೀಗೆಯೇ ಇದೆ ಎಂದು ತಿಳಿಸುವ ಅಗತ್ಯ ಇದೆ. ಸಾತ್ವಿಕಾಭಿನಯವನ್ನು ಯಕ್ಷಗಾನದಲ್ಲಿ ಪಾತ್ರ ಗೌರವ ಅಂತ ಕರೆಯುತ್ತಾರೆ. ಅದರ ಅರಿವನ್ನು ಮೂಡಿಸುವುದಕ್ಕಾಗಿ ಈ ಕಮ್ಮಟ ಆಯೋಜಿಸಲಾಗಿದೆ ಎಂದು ಕಮ್ಮಟದ ಸಂಘಟಕ, ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಆರ್. ಗಣೇಶರ ನಿರ್ದೇಶನದಲ್ಲಿ ಖ್ಯಾತ ಕಲಾವಿದೆ ಡಾ. ಶೋಭಾ ಶಶಿಕುಮಾರ್ ಹಾಗೂ ಸಂಗಡಿಗರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.ಕಟೀಲು ಕಾಲೇಜಿನ ಪ್ರಾಚಾರ್ಯ ಡಾ. ವಿಜಯ್ , ವಿದ್ವಾಂಸರಾದ ಬನ್ನಂಜೆ ಸಂಜೀವ ಸುವರ್ಣ, ಎಂ.ಎಲ್. ಸಾಮಗ, ಪ್ರತಿಭಾ ಸಾಮಗ, ಡಾ. ಎಂ. ಪ್ರಭಾಕರ ಜೋಷಿ, ಲಕ್ಷ್ಮೀನಾರಾಯಣ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಸರ್ಪಂಗಳ ಈಶ್ವರ ಭಟ್, ಅಂಡಾಲ ದೇವೀಪ್ರಸಾದ ಶೆಟ್ಟಿ, ಮೂರ್ತಿ ದೇರಾಜೆ, ಸುಮಂಗಲಾ ರತ್ನಾಕರ ರಾವ್, ಪಶುಪತಿ ಶಾಸ್ತ್ರಿ, ದುರ್ಗಾಪ್ರಸಾದ ದಿವಾಣ ಸಂವಾದದಲ್ಲಿ ಪಾಲ್ಗೊಂಡರು.