ಸಾರಾಂಶ
ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ನಿರಂತರವಾಗಿ ಕರ್ಕಾಟಕ ಮಾಸದ ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನಗೊಂಡಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕಳೆದ ಒಂದು ತಿಂಗಳಿನಿಂದ ಇಲ್ಲಿನ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ನಿರಂತರವಾಗಿ ನಡೆದ ಕರ‍್ಕಾಟಕ(ಆಟಿ) ಮಾಸದ ದುರ್ಗಾದೀಪ ನಮಸ್ಕಾರ ಪೂಜೆ ಶುಕ್ರವಾರ ಸಂಪನ್ನಗೊಂಡಿತು. ಜುಲೈ 17ರಂದು ಆರಂಭವಾದ ಪೂಜೆಯು ಆ.15ರ ಶುಕ್ರವಾರದಂದು ಅಶ್ವರೂಢ ಪಾರ್ವತಿ ಹೋಮದೊಂದಿಗೆ ಕೊನೆಗೊಂಡಿತು. ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಹಾಗೂ ಶ್ರೀಮಂಜುನಾಥಸ್ವಾಮಿ ದೇವಾಲಯದ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ದುರ್ಗಾದೀಪ ನಮಸ್ಕಾರ ಪೂಜೆಯು ನೆರವೇರಿತು. ಕರ‍್ಕಾಟಕ ಮಾಸದಲ್ಲಿ ಭಗವತಿದೇವಿಗೆ ನಿತ್ಯ ದುರ್ಗಾದೀಪ ನಮಸ್ಕಾರ ಪೂಜೆಯು ನೆರವೇರಿತು. ಅಲ್ಲದೇ ಶತ್ರು ಸಂಹಾರ ಪೂಜೆ, ನಾಗರಪಂಚಮಿ ವಿಶೇಷ ಪೂಜೆ, ಶ್ರೀಅಯ್ಯಪ್ಪಸ್ವಾಮಿಗೆ ನಿರಂಜನ ಸೇವೆ, ನಿತ್ಯ ಸಂಕಲ್ಪ ಸೇವೆ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು. ಪೂಜಾ ಕಾರ್ಯದಲ್ಲಿ ಅರ್ಚಕರಾದ ವಾದಿ ಭಟ್, ಪ್ರಸಾದ್ ಭಟ್, ವೆಂಕಟೇಶ್ ಅಯ್ಯರ್, ಶ್ರೀರಂಗ, ರಾಘವೇಂದ್ರ ಭಟ್ , ಬಜೆಗುಂಡಿ ಮಣಿ ಅವರುಗಳು ಸಹಕರಿಸಿದರು. ಕ್ಷೇತ್ರದಲ್ಲಿ ನಿರಂತರವಾಗಿ ಆಟಿ ಮಾಸದಲ್ಲಿ ಒಂದು ತಿಂಗಳು ದುರ್ಗಾದೀಪ ನಮಸ್ಕಾರ ಪೂಜೆಯನ್ನು ನಡೆಸುತ್ತಿದ್ದು, ಕ್ಷೇತ್ರದ ಭಕ್ತಾದಿಗಳ ಸಹಕಾರ, ಆಡಳಿತ ಮಂಡಳಿ ಹಾಗೂ ಅರ್ಚಕರ ಸಹಕಾರದೊಂದಿಗೆ ಪೂಜಾ ಕೈಂಕರ‍್ಯಗಳನ್ನು ನಡೆಸಲು ಸಾಧ್ಯವಾಗಿದೆ. ಒಂದು ತಿಂಗಳು ಜರುಗಿದ ಪೂಜಾ ಕಾರ‍್ಯದಲ್ಲಿ ಪಾಲ್ಗೊಂಡ ಭಕ್ತಾದಿಗಳು ನಿತ್ಯ ಭಜನೆಯೊಂದಿಗೆ ದೇವರ ಸೇವೆ ನಡೆಸಿದರು. ಅಲ್ಲದೇ ಪ್ರತಿನಿತ್ಯ ಅನ್ನದಾನವನ್ನೂ ಕೂಡ ಕ್ಷೇತ್ರದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು ಎಂದು ಶ್ರೀಮುತ್ತಪ್ಪಸ್ವಾಮಿ ಹಾಗೂ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಅಧ್ಯಕ್ಷ ಎನ್.ಡಿ.ವಿನೋದ್ ಕುಮಾರ್ ತಿಳಿಸಿದರು.