ಜಾತಿ ಗಣತಿ ವೇಳೆ ಕಡ್ಡಾಯಾಗಿ ಮಾದಿಗ ಎಂದೇ ಬರೆಯಿಸಿ

| Published : Apr 28 2025, 12:49 AM IST

ಜಾತಿ ಗಣತಿ ವೇಳೆ ಕಡ್ಡಾಯಾಗಿ ಮಾದಿಗ ಎಂದೇ ಬರೆಯಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಾತಿಗಣತಿ ವೇಳೆ ಮಾದಿಗರ ಪಾತ್ರವೇನು ವಿಷಯ ಕುರಿತ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸಿದರು.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಸೂಚಕ ಬೇಡ । ಬೆಂಗಳೂರಿನಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿ ಸಭೆ ನಿರ್ಣಯ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಮೇ 5 ರಿಂದ 17ರವರೆಗೆ ರಾಜ್ಯ ಸರ್ಕಾರ ಜಾತಿಗಣತಿ ಕಾರ್ಯಕ್ಕೆ ಮುಂದಾಗಿದ್ದು ಈ ಅವಧಿಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಮಾದಿಗ ಸಮುದಾಯದವರು ಕಡ್ಡಾಯವಾಗಿ ಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸುವಂತೆ ಮಾಜಿ ಸಚಿವ ಎಚ್.ಆಂಜನೇಯ ಕರೆ ನೀಡಿದರು.

ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಾತಿಗಣತಿ ವೇಳೆ ಮಾದಿಗರ ಪಾತ್ರವೇನು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಕೆಲವರು ನಾವು ಹೆಚ್ಚು ಸಂಖ್ಯೆಯಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದ್ದು, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಹೆಸರಿನಲ್ಲಿ ಗುರುತಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಗೊಂದಲ ನಿವಾರಣೆಗೆ ಮಾದಿಗ ಎಂದು ಬರೆಸುವುದೇ ಸೂಕ್ತವೆಂದರು.

ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಮಹತ್ವದ ತೀರ್ಪು ನೀಡಿದ ಹಿನ್ನಲೆ ಈಗಾಗಲೇ ತೆಲಂಗಾಣ ಸೇರಿ ಕೆಲವೆಡೆ ಒಳಮೀಸಲಾತಿ ಜಾರಿಗೆ ಅಲ್ಲಿನ ಸರ್ಕಾರಗಳು ಕ್ರಮಕೈಗೊಂಡಿವೆ. ಅದೇ ರೀತಿ ಸಮಸಮಾಜದ ಕಲ್ಪನೆಯ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿಯೂ ಒಳಮೀಸಲಾತಿ ಜಾರಿಗೊಳಿಸಲು ದಿಟ್ಟ ಕ್ರಮಕೈಗೊಂಡಿದ್ದಾರೆ. ಒಳ ಮೀಸಲು ಜಾರಿಯಾಗುವ ತನಕ ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ತಡೆ ನೀಡಿದ್ದಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ದತ್ತಾಂಶ (ಎಂಪೋರಿಯಲ್ ಡಾಟಾ) ಸಂಗ್ರಹ ಕಾರ್ಯ ನಡೆಯುವ ವೇಳೆ ಮಾದಿಗ ಸಮುದಾಯದವರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿ ಮುಳುಗುವ ಮುಗ್ದ ಮಾದಿಗ ಸಮುದಾಯ ಜಾತಿಗಣತಿ ಕಾರ್ಯ ಮುಗಿಯುವವರೆಗೂ ಆಚರಿಸಬಾರದು. ನಮ್ಮ ಗುರಿ ಜಾತಿಗಣತಿಯತ್ತ ಇರಬೇಕು. ಹೋರಾಟ, ಚಳವಳಿ, ಜಯಂತಿ ಇತರೆ ನೆಪದಲ್ಲಿ ಗುಂಪು ಗುಂಪಾಗಿ ಸೇರುವುದು, ಹಬ್ಬ ಆಚರಿಸುವುದು ಎಲ್ಲವನ್ನು ಕೈಬಿಡಬೇಕು. ಜಾತಿಗಣತಿ ಕಾರ್ಯ ಪೂರ್ಣಗೊಂಡು ಒಳಮೀಸಲಾತಿ ಜಾರಿಗೊಳ್ಳುವವರೆಗೂ ನಾವೆಲ್ಲರೂ ಕಾಲೋನಿ, ಹಟ್ಟಿ, ಬಡಾವಣೆಗಳ ನಮ್ಮ ನಮ್ಮ ಮನೆಗಳಲ್ಲಿ ಇದ್ದು, ಜಾತಿಗಣತಿದಾರರು ಬಂದಾಗ ಅವರೊಂದಿಗೆ ಸೇರಿ ಬಡಾವಣೆ ಸುತ್ತಬೇಕು. ಸಮುದಾಯದವರಲ್ಲಿ ಮಾದಿಗ ಎಂದು ಕಡ್ಡಾಯವಾಗಿ ಬರೆಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಸೂಚಕವನ್ನು ಬರೆಸಲೇಬಾರದು. ಮಾದಿಗ ಎಂದೇ ನಾವೆಲ್ಲರೂ ಬರೆಸಬೇಕು. ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ದತ್ತಾಂಶ ಸಂಗ್ರಹ ಮಾಡುವುದು ಸವಾಲು ಆಗಿತ್ತು. ನಾವು ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡ ತಕ್ಷಣವೇ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯಕ್ಕೆ ಮುಂದಾಗಿದೆ ಎಂದು ಆಂಜನೇಯ ಹೇಳಿದರು.

ಆಂಧ್ರದ ಮಂದಕೃಷ್ಣ ಮಾದಿಗ ಒಳಮೀಸಲಾತಿಯ ಜನಕನಾಗಿದ್ದು, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಮೊದಲ ಬಾರಿಗೆ ಒಳಮೀಸಲಾತಿ ಜಾರಿಗೊಳಿಸಿದರು. ಆದರೆ, ನಮ್ಮ ಪ್ರಗತಿ ಸಹಿಸಿದ ಕೆಲವರು ಕೋರ್ಟ್ ಮೊರೆ ಹೋಗಿದ್ದರಿಂದ ಒಳಮೀಸಲಾತಿ ಜಾರಿಗೆ 25 ವರ್ಷ ಬೇಕಾಯಿತು. ಈಗ ಸುಪ್ರೀಂ ಕೋರ್ಟ್ ಅಸ್ಪೃಶ್ಯ ಸಮಾಜಕ್ಕೆ ಉಸಿರು ಕೊಟ್ಟಿದ್ದು, ಅದನ್ನು ಗಟ್ಟಿಗೊಳಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ನಿವೃತ್ತ ಐಎಎಸ್ ಅಧಿಕಾರಿ ಡಾ.ಬಾಬುರಾವ್ ಮುಡಬಿ, ಮೈಸೂರ್ ಮಾಜಿ ಮೇಯರ್ ನಾರಾಯಣ್, ಸಮುದಾಯದ ಮುಖಂಡ ಆರ್.ಲೋಕೇಶ್, ಸಮಗಾರ ಸಮಾಜದ ಮುಖಂಡ ವೈ.ಸಿ.ಕಾಂಬ್ಳೆ, ನಿವೃತ್ತ ಐಆರ್‌ಸ್ ಅಧಿಕಾರಿ ಭೀಮಾಶಂಕರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮಾಯಕೊಂಡ ಶಾಸಕ ಬಸವಂತಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಆರ್.ಧರ್ಮಸೇನ, ಸಮತಾ ಜೀವನ್ ಸಂಸ್ಥೆಯ ಅಧ್ಯಕ್ಷ ಹೆಚ್.ಆರ್.ತೇಗನೂರ್, ಕೆಪಿಎಸ್‌ಸಿ ಮಾಜಿ ಸದಸ್ಯ ಎಚ್.ಎನ್.ದುಗ್ಗಪ್ಪ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಡೋರ್ ಸಮಾಜದ ಅಧ್ಯಕ್ಷ, ಸಂತೊಷ್ ಸವಣೂರ್, ಕೋಡಿಹಳ್ಳಿ ಸಂತೋಷ್ ಇದ್ದರು.