ಈದ್‌ ಮಿಲಾದ್‌ ಮೆರವಣಿಗೆ ವೇಳೆ ಡಿ.ಜೆ. ಸೌಂಡ್‌ಗೆ ನಿರ್ಬಂಧ

| Published : Sep 14 2024, 01:49 AM IST

ಈದ್‌ ಮಿಲಾದ್‌ ಮೆರವಣಿಗೆ ವೇಳೆ ಡಿ.ಜೆ. ಸೌಂಡ್‌ಗೆ ನಿರ್ಬಂಧ
Share this Article
  • FB
  • TW
  • Linkdin
  • Email

ಸಾರಾಂಶ

ಈದ್‌ ಮಿಲಾದ್‌ ಮೆರವಣಿಗೆ ವೇಳೆ ನಗರದಲ್ಲಿ ಡಿಜೆ ಸೌಂಡ್ಸ್‌ ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಪೊಲೀಸ್‌ ಆಯುಕ್ತ ದಯಾನಂದ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಾದ್ಯಂತ ಸೆ.16ರಂದು ಈದ್‌ ಮಿಲಾದ್‌ ಹಬ್ಬ ಆಚರಣೆ ವೇಳೆ ಸ್ಥಳೀಯ ಪೊಲೀಸರ ಅನುಮತಿ ಪಡೆದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಧ್ವನಿವರ್ಧಕ ಬಳಸಬೇಕು. ಮೆರವಣಿಯಲ್ಲಿ ಡಿ.ಜೆ. ಸೌಂಡ್‌ ಸಿಸ್ಟಂ ಅಳವಡಿಕೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.16ರಂದು ನಗರದಾದ್ಯಂತ ಮುಸ್ಲಿಮರು ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳು, ಧ್ವನಿವರ್ಧಕಗಳನ್ನು ಬಳಸಿಕೊಂಡು ನಡಿಗೆಯಲ್ಲಿ ವೈಎಂಸಿಎ ಮೈದಾನ, ಮಿಲ್ಲರ್‌ ರಸ್ತೆಯ ಖುದ್ದುಸಾಬ್‌ ಈದ್ಗಾ ಮೈದಾನ, ಶಿವಾಜಿನಗರದ ಚೋಟಾ ಮೈದಾನ, ಭಾರತಿನಗರದ ಸುಲ್ತಾನ್‌ ಗುಂಟಾ ಮೈದಾನ ಸೇರಿದಂತೆ ಇತರೆಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಹಬ್ಬ ಆಚರಣೆ ವೇಳೆ ಕೆಲವೊಂದು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಶಾಂತ ರೀತಿ ಮೆರವಣಿಗೆ:

ಮೆರವಣಿಗೆ ಸಾಗುವ ಹಾದಿಯಲ್ಲಿ ಸಾರ್ವಜನಿಕರಿಗೆ ಆಡಚಣೆಯಾಗದಂತೆ ಸ್ವಯಂ ಸೇವಕರು ಹಾಗೂ ಆಯೋಜಕರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಮೆರವಣಿಗೆಗೆ ಸೂಕ್ತ ನಿರ್ದೇಶನ ನೀಡಬೇಕು. ಈ ಮೂಲಕ ಮೆರವಣಿಗೆ ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸಬೇಕು. ಜತೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.

ದೇವಸ್ಥಾನ-ಚರ್ಚ್‌ಗಳ ಎದುರು ಘೋಷಣೆ ಕೂಗುವಂತಿಲ್ಲ:

ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಹರಿತ ವಸ್ತುಗಳನ್ನು ಹೊಂದಿರಬಾರದು. ಮೆರವಣಿಗೆ ವೇಳೆ ಡಿ.ಜೆ.ಸಿಸ್ಟಂ ಬಳಸಬಾರದು. ಸ್ತಬ್ಧ ಚಿತ್ರಗಳು ಯಾವುದೇ ಪ್ರಚೋದಾನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು. ಯಾವುದೇ ಪೂಜಾ ಸ್ಥಳ(ದೇವಸ್ಥಾನ/ಚರ್ಚ್‌) ಎದುರು ಘೋಷಣೆಗಳನ್ನು ಕೂಗಬಾರದು. ಆಯೋಜಕರು ಮೆರವಣಿಗೆ ವೇಳೆ ವಿದ್ಯುತ್‌ ಇಲಾಖೆ ಸಿಬ್ಬಂದಿ ನೆರವು ಪಡೆದು ಯಾವುದೇ ವಿದ್ಯುತ್‌ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಬೆಳಗ್ಗೆ 6ರಿಂದ ರಾತ್ರಿ 10ರ

ವರೆಗೆ ಧ್ವನಿವರ್ಧಕ ಬಳಕೆ

ಮೆರವಣಿಗೆ ವೇಳೆ ಆಯೋಜಕರು ಬೆಂಕಿ ನಂದಿಸುವ ಸಾಮಾಗ್ರಿಗಳನ್ನು ಇರಿಸಿಕೊಳ್ಳಬೇಕು. ರಾತ್ರಿ ಮೆರವಣಿಗೆ ಮುಗಿದ ಬಳಿಕ ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚಿನವರು ತೆರಳಬಾರದು. ಹಿರಿಯ ನಾಗರಿಕರು, ಶಾಲಾ ಮಕ್ಕಳು ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಬಳಸಬೇಕು. ಇದಕ್ಕೆ ಸ್ಥಳೀಯ ಪೊಲೀಸರ ಅನುಮತಿ ಪಡೆಯಬೇಕು. ಧ್ವನಿ ವರ್ಧಕಗಳಿಂದ ಹೊರಡುವ ಶಬ್ಧದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಇರಿಸಿಕೊಳ್ಳಬೇಕು. ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.