ಸಾರಾಂಶ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅತಿ ಹೆಚ್ಚು ದ್ರೋಹವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಕುಡಚಿ ಗಂಭೀರ ಆರೋಪ ಮಾಡಿದರು.
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅತಿ ಹೆಚ್ಚು ದ್ರೋಹವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಕುಡಚಿ ಗಂಭೀರ ಆರೋಪ ಮಾಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ತಾವು ಅಹಿಂದ ನಾಯಕರೆಂದುಕೊಂಡೇ ಅಧಿಕಾರದ ಚುಕ್ಕಾಣಿ ಹಿಡಿದವರು. ಆದರೆ ಹಿಂದುಳಿದವರಿಗೆ ಮೀಸಲಿಟ್ಟ 39 ಸಾವಿರ ಕೋಟಿ ರುಪಾಯಿ ಹಣವನ್ನು ನೀಡುವುದಾಗಿ ಆಯವ್ಯಯದಲ್ಲಿ ಭರವಸೆ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ, ಈಗ ಆ ಹಣವನ್ನು ಬೇರೆ ಕಡೆ ವರ್ಗಾಯಿಸಿ ಹಿಂದುಳಿದ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಕಿಡಿಕಾರಿದರು.ಎಸ್ಸಿ, ಎಸ್ಟಿ ಅಭಿವೃದ್ಧಿಗೆ 2023ರಲ್ಲಿ 11,144 ಸಾವಿರ ಕೋಟಿ, 2024ರಲ್ಲಿ 14,282 ಸಾವಿರ ಕೋಟಿ, 2025ರಲ್ಲಿ 14,488 ಸಾವಿರ ಕೋಟಿ ರು. ಹಣವನ್ನು ಈಗಿನ ಕಾಂಗ್ರೆಸ್ ಸರ್ಕಾರ ಗುಳುಂ ಮಾಡಿದೆ. ಹಿಂದುಳಿದವರ ಪ್ರಬಲ ನಾಯಕರೆಂದು ಹೇಳಿಕೊಳ್ಳುವ ಸಚಿವ ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ ಅವರು ವರ್ಗಾವಣೆ ಆದ ಹಣದ ಬಗ್ಗೆ ಮಾಧ್ಯಮದವರ ಮುಂದೆ ಹಾರಿಕೆ ಉತ್ತರ ನೀಡುತ್ತಾರೆ. ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿದ್ದರ ವಿರುದ್ಧ ಬಿಜೆಪಿ ಬೃಹತ್ ಆಂದೋಲನ ಹಮ್ಮಿಕೊಳ್ಳುವ ಮೂಲಕ ಇವರ ಕಿವಿ ಹಿಂಡುವ ಕೆಲಸಕ್ಕೆ ಮುಂದಾಗಿದೆ ಎಂದರು.1975-75ರಲ್ಲೇ ರಾಜ್ಯ ಯೋಜನಾ ಆಯೋಗ ಪ.ಜಾ.ಪಂ.ಗಳಿಗೆ ಯೋಜನೆ ರೂಪಿಸಬೇಕೆಂಬ ಆದೇಶ ನೀಡಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದಾಗ ಈ ಕುರಿತು ಕಾಯ್ದೆ ರಚಿಸುವ ಮೊದಲೇ ಎಸ್.ಸಿ.ಎಸ್.ಟಿ.ಪಿ ಮತ್ತು ಟಿ.ಎಸ್.ಪಿ.ಗೆ 9 ಸಾವಿರ ಕೋಟಿ ರು ನೀಡಿದ್ದರು. ಕಾಂಗ್ರೆಸ್ ಸರ್ಕಾರ ಎಸ್.ಸಿ.ಎಸ್.ಟಿ.ಪಿ ಮತ್ತು ಟಿ.ಎಸ್.ಪಿ. ಸಂಬಂಧ ಕಾಯ್ದೆ ಜಾರಿಗೆ ತಂದರೂ ಹಿಂದುಳಿದವರಿಗೆ ಕೇವಲ 6 ಸಾವಿರ ಕೋಟಿ ರು. ಹಣವನ್ನು ನೀಡಿದೆ ಎಂದು ದೂರಿದರು.ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ನೀಡಲಾದ ಲ್ಯಾಪ್ ಟಾಪ್, ವಿದ್ಯಾರ್ಥಿ ವೇತನ ಇತ್ಯಾದಿ ಹಣಕಾಸಿನ ಸೌಲಭ್ಯಗಳನ್ನು ಸರ್ಕಾರಕ್ಕೆ ವಾಪಸ್ ಮಾಡುವಂತೆ ಅಲ್ಲಿನ ಉಪಕುಲಪತಿಗೆ ಪತ್ರ ಬಂದಿದ್ದು, ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಟೀಕಿಸಿದರು.ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವರ್ಗದವರ ನಡುವೆ ಸಂಘರ್ಷ ಉಂಟುಮಾಡುವುದೇ ಕಾಂಗ್ರೆಸ್‌ನ ಕಾಯಕವಾಗಿದೆ. ಅರ್ಥಿಕವಾಗಿ ದಲಿತರು ಸಬಲರಾಗುವ ಯಾವ ಯೋಜನೆಗಳೂ ಕಾಂಗ್ರೆಸ್‍ನಲ್ಲಿ ಇಲ್ಲ. ರಾಜೀವ್ ಗಾಂಧಿ, ಡಾ.ಅಂಬೇಡ್ಕರ್ ಆವಾಸ್ ಯೋಜನೆಯಡಿಯಲ್ಲಿ ಕಳೆದ ಎರಡು ವರ್ಷದಲ್ಲಿ ಒಂದು ಮನೆಯನ್ನೂ ನೀಡದೆ ಹಿಂದುಳಿದವರಿಗೆ ಮೋಸ ಮಾಡುತ್ತಿದೆ ಎಂದರು.ಈ ಸರ್ಕಾರದ ಅವಧಿಯಲ್ಲಿ ನನ್ನ ಅವಧಿಯಲ್ಲಿ ಹಿಂದುಳಿದವರಿಗೆ 10 ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ ಅಂತಾ ಒಬ್ಬ ಶಾಸಕನಾದರೂ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಅಧ್ಯಕ್ಷ ಎಸ್.ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮುಖಂಡರಾದ ಬಂಗಾರು ಹನುಮಂತ, ಗಿರೀಶ್ ಭದ್ರಾಪುರ, ಮಾಲತೇಶ್, ಸಂತೋಷ್, ಸಿ.ಮೂರ್ತಿ, ಲಿಂಗರಜು, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್, ಗವಿಸಿದ್ದಪ್ಪ ದ್ಯಾಮಣ್ಣ ಇದ್ದರು.