ಬರದ ನೋವಿನಲ್ಲಿ ಭವಿಷ್ಯ ಭದ್ರವಾಗಿರಲಿ ಎನ್ನುವ ಭರವಸೆಯನ್ನಿಟ್ಟು ನಾಡಹಬ್ಬ ದಸರಾವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ನವರಾತ್ರಿಯ ಕೊನೆಯ ದಿನವಾದ ಮಂಗಳವಾರ ಆಯುಧ ಪೂಜೆ ಅದ್ಧೂರಿಯಾಗಿ ನಡೆದರೆ, ಬುಧವಾರ ವಿಜಯದಶಮಿ ದಿನ ಇಡೀ ಜಿಲ್ಲೆ ಭಕ್ತಿ ಸಾಗರದಲ್ಲಿ ಮುಳುಗಿತ್ತು.
ಕನ್ನಡಪ್ರಭ ವಾರ್ತೆ ರಾಯಚೂರು
ಬರದ ನೋವಿನಲ್ಲಿ ಭವಿಷ್ಯ ಭದ್ರವಾಗಿರಲಿ ಎನ್ನುವ ಭರವಸೆಯನ್ನಿಟ್ಟು ನಾಡಹಬ್ಬ ದಸರಾವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ನವರಾತ್ರಿಯ ಕೊನೆಯ ದಿನವಾದ ಮಂಗಳವಾರ ಆಯುಧ ಪೂಜೆ ಅದ್ಧೂರಿಯಾಗಿ ನಡೆದರೆ, ಬುಧವಾರ ವಿಜಯದಶಮಿ ದಿನ ಇಡೀ ಜಿಲ್ಲೆ ಭಕ್ತಿ ಸಾಗರದಲ್ಲಿ ಮುಳುಗಿತ್ತು.ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿತು. ಬೈಕ್, ಕಾರು, ಟ್ರ್ಯಾಕ್ಟರ್ ಸೇರಿದಂತೆ ವಾಹನಗಳು, ಕೃಷಿ ಉಪಕರಣಗಳು, ಕೈಗಾರಿಕಾ ಯಂತ್ರೋಪಕರಣಗಳಿಗೆ ಜನರು ಪೂಜೆ ಸಲ್ಲಿಸಿದರು. ಸರ್ಕಾರಿ-ಖಾಸಗಿ ಕಚೇರಿಗಳು, ಅಂಗಡಿ-ಮುಂಗಟ್ಟುಗಳು, ಮನೆಗಳಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿತ್ತು. ಜಿಲ್ಲಾಧಿಕಾರಿಗಳ ಕಚೇರಿ, ಜಿಪಂ ಸಿಇಒ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಇಲಾಖೆ ವಾಹನ, ಶಸ್ತ್ರಾಸ್ತ್ರಗಳಿಗೆ ಪೊಲೀಸರು ವಿಶೇಷ ಪೂಜೆ ಸಲ್ಲಿಸಿದರು.
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದಸರಾ ನಿಮಿತ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀಮಠದ ಆವರಣದಲ್ಲಿರುವ ಶಮಿ ವೃಕ್ಷಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶಮಿ ಪೂಜೆಯನ್ನು ನೆರವೇರಿಸಿದರು.ವಿಜಯದಶಮಿ ದಿನ ಬೆಳಗ್ಗೆ ಎಲ್ಲ ದೇವಸ್ಥಾನ, ಮಠ-ಮಾನ್ಯಗಳಲ್ಲಿ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಸೇವೆಗಳು ಜರುಗಿದವು. ಮನೆಗಳಲ್ಲಿ ಘಟಸ್ಥಾಪನೆ ಮಾಡಿದ್ದ ಭಕ್ತರು ಮಹಾಮಂಗಳಾರತಿಯೊಂದಿಗೆ ಹಬ್ಬಕ್ಕೆ ತೆರೆ ಎಳೆದರು.
ಶ್ರೀಮಠದ ಆವರಣದಲ್ಲಿರುವ ಶಮಿ ಮಂಟಪದಲ್ಲಿ ಪೀಠಾಧಿಪತಿಗಳು ಶಮಿ ಪೂಜೆಯನ್ನು ನೆರವೇರಿಸಿದರು. ರಜೆ ದಿನವಾದ್ದರಿಂದ ಸಹಸ್ರಾರು ಭಕ್ತರು ರಾಯರ ದರ್ಶನ ಪಡೆದರು. ಸ್ಥಳೀಯ ಉಪ್ಪಾರವಾಡಿ ಸೇರಿ ವಿವಿಧ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ದೇವರ ಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ನಂತರ ಶಮಿ ಪೂಜೆ ನೆರವೇರಿತು. ಜಿಲ್ಲೆಯ ಕಲ್ಲೂರು ಮಹಾಲಕ್ಷ್ಮೀ ದೇವಸ್ಥಾನ, ಸುಲ್ತಾನಪುರ ಮಠ, ನವಲಕಲ್ ಮಠ, ಮಾನ್ವಿಯ ಕರೆಗುಡ್ಡ ಮಠ, ಸೋಮಲಾಪುರದ ಅಂಬಾಮಠಗಳಲ್ಲಿ ಉತ್ತರಾದಿಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥರ ನೇತೃತ್ವದಲ್ಲಿ ನಡೆದ ದೇವಿ ಪುರಾಣ ಪ್ರವಚನಕ್ಕೆ ವಿಜಯದಶಮಿ ದಿನ ಮಂಗಲೋತ್ಸವ ನಡೆಯಿತು.ಮಾಜಿ ಸಚಿವ ಎನ್.ಎಸ್.ಬೋಸರಾಜು, ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ವಿವಿಧ ಮಠಗಳು, ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಯನ್ನು ನೆರವೇರಿಸಿದರು.
ಭುವನೇಶ್ವರಿ ದೇವಿ ಮೂರ್ತಿ ಮೆರವಣಿಗೆ ವೈಭವ: ವಿಜಯದಶಮಿ ನಿಮಿತ್ತ ಮಹಾನಗರ ಪಾಲಿಕೆ ಆವರಣದಿಂದ ಬನ್ನಿ ಮಂಟಪದವರೆಗೆ ನಡೆದ ನಾಡದೇವಿ ಭುವನೇಶ್ವರಿ ಮೂರ್ತಿ ಮೆರವಣಿಗೆ ಕಣ್ಮನ ಸೆಳೆಯಿತು. ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಪ್ರಯುಕ್ತ ಮೈಸೂರು ಮಾದರಿಯಲ್ಲಿ ನಗರದಲ್ಲಿ ನಡೆದ ಭುವನೇಶ್ವರಿ ಮೂರ್ತಿ ಹಾಗೂ ಕಲಾತಂಡಗಳ ಪ್ರದರ್ಶನದ ಮೆರವಣಿಗೆಯು ಅತ್ಯಂತ ಆಕರ್ಷಣೀಯವಾಗಿತ್ತು.ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಹಲಗೆ-ಡೊಳ್ಳು, ಕೋಲಾಟ, ಹುಲಿಕುಣಿತ, ತಮಟೆ ಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಕಲಾ ತಂಡಗಳ ಡೊಳ್ಳು ಕುಣಿತ ಗಮನ ಸೆಳೆಯಿತು. ನೂರಾರು ಮುತ್ತೈದೆಯರು ಪೂರ್ಣಕುಂಭ, ಕಳಸ ಹೊತ್ತು ಹೆಜ್ಜೆ ಹಾಕಿದರು. ಜಿಲ್ಲಾಧಿಕಾರಿ ಪೂವಿತಾ.ಎಸ್, ಆಯುಕ್ತ ಜುಬಿನ್ ಮೊಹಾಪಾತ್ರ, ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.