ಹುಕ್ಕೇರಿಯಲ್ಲಿ ದಸರಾ ಉತ್ಸವಕ್ಕೆ ಸಂಭ್ರಮದ ಚಾಲನೆ

| Published : Oct 04 2024, 01:18 AM IST

ಹುಕ್ಕೇರಿಯಲ್ಲಿ ದಸರಾ ಉತ್ಸವಕ್ಕೆ ಸಂಭ್ರಮದ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿಸೊಬಗಿನ ವೈಭವದ ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಗುರುವಾರ ಗೋಕಾಕದ ಕೊಣ್ಣೂರು ಮರಡಿಮಠದ ಡಾ.ಪವಾಡೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸೊಬಗಿನ ವೈಭವದ ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಗುರುವಾರ ಗೋಕಾಕದ ಕೊಣ್ಣೂರು ಮರಡಿಮಠದ ಡಾ.ಪವಾಡೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಎಂದರೆ ಎಲ್ಲರಿಗೂ ಮಾದರಿಯಾಗಿರುವ ದಸರಾ. ಈ 9 ದಿನಗಳ ಕಾಲ ನಡೆಯುವ ವಿಶಿಷ್ಟ ಕಾರ್ಯಕ್ರಮಗಳನ್ನು ಚಂದ್ರಶೇಖರ ಶ್ರೀಗಳು ಹಮ್ಮಿಕೊಂಡಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದು ಹೇಳಿದರು.

ಸಾನಿಧ್ಯವನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ತಹಸೀಲ್ದಾರ್‌ ಮಂಜುಳಾ ನಾಯಕ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಅಧ್ಯಕ್ಷ ಇಮ್ರಾನ್‌ ಮೋಮಿನ್‌ ಅಧ್ಯಕ್ಷತೆ ವಹಿಸಿದ್ದರು.

ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ದಸರಾ ಉತ್ಸವದಲ್ಲಿ ಮಠದಿಂದ 9 ದಿನಗಳ ಕಾಲ ಲಕ್ಷಾಂತರ ಜನರಿಗೆ ಹೋಳಿಗೆ ನೀಡುತ್ತಿರುವ ಏಕೈಕ ಮಠ ಹುಕ್ಕೇರಿ ಹಿರೇಮಠ. ನ.‌ 1ರಂದು ಬೆಳಗಾವಿಯಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ಹೋಳಿಗೆ ನೀಡಿ ದಾಖಲೆ ಹಿರೇಮಠ ಮಾಡುತ್ತಿದೆ ಎಂದು ಹೇಳಿದರು.

ಡಾ.ರವಿ ಪಾಟೀಲ, ಪರಗೌಡ ಪಾಟೀಲ, ಅನಿಲ ಶೆಟ್ಟಿ, ಸುಭಾಸ ನಾಯಿಕ, ಸುರೇಶ ಜನರಾಳೆ, ಚನ್ನಪ್ಪ ಗಜಬರ, ಸಂಪತ್ತಕುಮಾರ ಶಾಸ್ತ್ರಿ, ದೀವಾಕರ ಭಟ್ ಇತರರು ಇದ್ದರು.

ಈ ಬಾರಿ ಹೋಳಿಗೆ ದಸರಾ:

ನಾಡಿನಾದ್ಯಂತ ಇಂದಿನಿಂದ ದಸರಾ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಮೈಸೂರು ದಸರಾ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಜನರು ಆಗಮಿಸಿದರೆ, ಉತ್ತರ ಕರ್ನಾಟಕದ ಸುಪ್ರಸಿದ್ಧ ಈ ಮಠದಲ್ಲಿ ನಡೆಯಲಿರುವ 9 ದಿನಗಳ ಕಾಲ ದಸರಾದಲ್ಲಿ ಲಕ್ಷಾಂತರ ಜನರು ಹೋಳಿಗೆ ಸವಿಯಲು ಆಗಮಿಸಲಿದ್ದಾರೆ.

ಪಟ್ಟಣದಲ್ಲಿರುವ ಹುಕ್ಕೇರಿ ಹಿರೇಮಠದ ದಸರಾ ಹಬ್ಬ ಸಂಭ್ರಮದಿಂದ ಜರುಗುತ್ತದೆ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ದಸರಾ ಹಬ್ಬವನ್ನು ಪ್ರತಿವರ್ಷ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಈ ಬಾರಿಯ ದಸರಾ ಹಬ್ಬವನ್ನು ಹುಕ್ಕೇರಿ ಹಿರೇಮಠದಿಂದ ಹೋಳಿಗೆ ದಸರಾ ಎಂದು ಆಚರಣೆ ಮಾಡುತ್ತಿದ್ದು, ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವ ಜನರಿಗೆ 9 ದಿ‌ನಗಳ ಕಾಲ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹೋಳಿಗೆ ದಸರಾ ಜೊತೆಗೆ ಅರ್ಥಪೂರ್ಣವಾಗಿ ದಸರಾ ಹಬ್ಬವನ್ನು ಹಿರೇಮಠದಿಂದ ಶುದ್ಧ ಗಾಳಿ, ಶುದ್ಧ ಆಹಾರ, ಶುದ್ಧ ನೀರು ಎನ್ನುವ ವಿಚಾರದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಜನರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಜಾಗೃತಿಯನ್ನು ದಸರಾ ಹಬ್ಬದಲ್ಲಿ ಜನರಲ್ಲಿ ಮೂಡಿಸಲಾಗುತ್ತಿದೆ‌. ತಾಮ್ರದ ಪಾತ್ರೆಗಳಲ್ಲಿ ನೀರು ಕುಡಿದರೆ ಆಗುವ ಲಾಭಗಳನ್ನು ದಸರಾ ಉತ್ಸವದಲ್ಲಿ ತಾಮ್ರದ ಪಾತ್ರೆಗಳನ್ನಿಟ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ 9 ದಿನಗಳ ಕಾಲ ಪ್ರವಚನ, ದೇವಿ ಪಾರಾಯಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.