ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವಿಶೇಷಚೇತನ ಮಕ್ಕಳು ಸಾಮಾನ್ಯ ಮಕ್ಕಳಿಕ್ಕಿಂತ ಯಾವುದೇ ವಿಭಾಗದಲ್ಲೂ ಕಡಿಮೆ ಇರುವುದಿಲ್ಲ. ಅವರ ಪ್ರತಿಭೆಯನ್ನು ಪ್ರೋತ್ಸಾಹಿ ಹೊರತರಲು ಅವರನ್ನು ಪೋಷಕರು ಹಾಗೂ ಶಿಕ್ಷಕರು ಸಹಾನುಭೂತಿಯಿಂದ ಸಹಕರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ತಿಳಿಸಿದರು.ನಗರದ ದಸರಾ ವಸ್ತುಪ್ರದರ್ಶನ ಆವರಣದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಶೇಷ ಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ವಿಶ್ವ ವಿಶೇಷಚೇತನರ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಪ್ರಪಂಚದಲ್ಲಿನ ಎಲ್ಲಾ ದೇಶಗಳಲ್ಲಿಯೂ, ಎಲ್ಲಾ ಸ್ಥಳಗಳಲ್ಲಿಯೂ ವಿಶೇಷಚೇತನ ವ್ಯಕ್ತಿಗಳಿದ್ದಾರೆ. ಅಂತಹ ವ್ಯಕ್ತಿಗಳ ಪ್ರತಿಭೆ ಹಾಗೂ ಸಾಧನೆಗಳನ್ನು ಅನಾವರಣಗೊಳಿಸಲು ಮತ್ತು ಜನ ಸಾಮಾನ್ಯರಿಗೆ ತಿಳಿಸಲು, ಆಚರಿಸುವಂತಹ ಸರ್ವಕಾಲಿಕ ಹಬ್ಬವೇ ವಿಶೇಷಚೇತನ ದಿನಾಚರಣೆ ಎಂದರು.ವಿಶೇಷಚೇತನರು ಮತ್ತು ಸಾಮಾನ್ಯರಿಗೆ ಬಹಳ ವ್ಯತ್ಯಾಸ ಇರುವುದಿಲ್ಲ. ಅವರಿಗೆ ಅವಕಾಶಗಳು ಕಡಿಮೆ. ಹೀಗಾಗಿ, ನಾವು ಅವರಿಗೆ ಹೆಚ್ಚಿನ ಅವಕಾಶ, ಪ್ರೋತ್ಸಾಹವನ್ನು ನೀಡಿದರೆ ಅವರು ಸಮಾಜದ ಮುಖ್ಯವಾಹಿನಿಗೆ ಬಂದು, ನಮ್ಮಂತೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ ಎಂದು ಅವರು ಹೇಳಿದರು.ನ್ಯೂನತೆ ಮರೆತು ಸಾಧಿಸಿಮಹಾರಾಣಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ನಾಗರಾಜು ಮಾತನಾಡಿ, ವಿಶ್ವ ವಿಶೇಷಚೇತನ ದಿನಾಚರಣೆ ಯಶಸ್ವಿ ಆಗಬೇಕಾದರೆ ನಾವು ಸರ್ಕಾರವು ನೀಡಿರುವಂತಹ ಸೌಲಭ್ಯಗಳನ್ನು ಬಳಸಿಕೊಂಡು, ನಮ್ಮ ನ್ಯೂನತೆಗಳನ್ನು ಮರೆತು ಸಾಧಿಸಿ, ಸಮಾಜದ ಮುಖ್ಯ ವಾಹಿನಿಯಲ್ಲಿ ನೆಲೆಸಬೇಕು ಎಂದು ತಿಳಿಸಿದರು.ಇಂದು ಸಮಾಜದಲ್ಲಿ ನಮಗೆ ಅವಕಾಶಗಳು ಹೇರಳವಾಗಿವೆ. ನಮಗಾಗಿ ಶ್ರಮಿಸುವ ಹಲವಾರು ಸಂಘ ಸಂಸ್ಥೆಗಳಿವೆ, ನಮಗಾಗಿಯೇ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಹೀಗಾಗಿ, ನಾವು ಸಮಾಜವನ್ನು ದೂಷಿಸದೆ, ಅವುಗಳನ್ನು ಮೊದಲು ಅರಿತುಕೊಂಡು, ನಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಿ, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಹೇಳಿದರು. ಬ್ರೈಲ್ ಕ್ಯಾಲೆಂಡರ್, ಪುಸ್ತಕ ಬಿಡುಗಡೆಇದೇ ವೇಳೆ ವಿಶೇಷಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಬ್ರೈಲ್ ಮುದ್ರಣಾಲಯವು ಸಿದ್ಧಪಡಿಸಿರುವ 2025ನೇ ಸಾಲಿನ ಬ್ರೈಲ್ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು. ನಂತರ ಮಹಾರಾಣಿ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ನಾಗರಾಜು ಅವರ "ಗುರುವೇ ನಮನ " ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.ಸರ್ಕಾರಿ ದೃಶ್ಯ ದೋಷವುಳ್ಳ ಮಕ್ಕಳ ಶಾಲೆ ಅಧೀಕ್ಷಕ ಸತೀಶ್, ಶ್ರವಣ ದೋಷವುಳ್ಳ ಮಕ್ಕಳ ಪಾಠಶಾಲೆಯ ಅಧೀಕ್ಷಕ ಉದಯ್ ಶಂಕರ್, ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಜಿಲ್ಲಾ ಅಧಿಕಾರಿ ಉಷಾ, ಛಾಯಗಂಗಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಘುನಾಥ್ ಗೌಡ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ಸ್ ನಿರ್ದೇಶಕ ರಮೇಶ್, ಶ್ರವಣ ದೋಷವುಳ್ಳ ಒಕ್ಕೂಟದ ಅಧ್ಯಕ್ಷ ಶ್ರೀಧರ, ಸಜ್ಜನ ಸಂಸ್ಥೆಯ ಕಾರ್ಯದರ್ಶಿ ಕುಮಾರ್, ಸರ್ಕಾರಿ ಪ್ರಯಾಗ್ ಮುದ್ರಣಾಲಯದ ವ್ಯವಸ್ಥಾಪಕ ಜಿ. ಮೋಹನ್, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ವಿಶೇಷ ಶಿಕ್ಷಕರು ಮೊದಲಾದವರು ಇದ್ದರು.----ಕೋಟ್...ಎಲ್ಲವೂ ಸರಿ ಇರುವ ವ್ಯಕ್ತಿಯು ಸಮಾಜಕ್ಕೆ ಯಾವುದೇ ಕೊಡುಗೆಯನ್ನು ನೀಡದೆ ಇದ್ದಲ್ಲಿ ಆತನು ಒಬ್ಬ ವಿಕಲಚೇತನ ಆಗಿರುತ್ತಾನೆ. ಹೀಗಿರುವಾಗ ನಮ್ಮಲ್ಲಿರುವ ನ್ಯೂನತೆಗಳ ಬಗ್ಗೆ ಯೋಚಿಸದೆ, ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಎಲ್ಲವೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮಲಿರುವ ಪ್ರತಿಭೆಯನ್ನು ಅರಿತುಕೊಂಡು, ಯಾವುದಾದರೂ ಒಂದು ಒಳ್ಳೆ ಮಾರ್ಗದಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡಲು ಮುಂದಾಗಬೇಕು.- ಡಾ.ಪಿ. ಶಿವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ