ಕನ್ನಡಪ್ರಭ ವಾರ್ತೆ ಮೈಸೂರು
ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.ಜಿಪಂ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಸೋಮವಾರ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾವನ್ನು ವ್ಯವಸ್ಥಿತವಾಗಿ ನಡೆಸಲು 17 ಉಪಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಸಮಿತಿಗೆ ಕಾರ್ಯಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಾಗುವುದು ಎಂದರು.
ಈ ಬಾರಿಯ ದಸರಾದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆಯಾದ ಕಂಬಳವನ್ನು ಆಯೋಜಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಕಂಬಳ ಆಯೋಜನೆ ಖಚಿತವಾದರೆ ಅದಕ್ಕಾಗಿ 18ನೇ ಉಪ ಸಮಿತಿಯನ್ನು ರಚಿಸಲಾಗುವುದು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸೈಕ್ಲಿಂಗ್ ವೆಲೋಡ್ರೋಮ್ ಪ್ರದೇಶವನ್ನು ಕಂಬಳಕ್ಕಾಗಿ ಪರಿಶೀಲಿಸಲಾಗಿದ್ದು, ಮುಖ್ಯಮಂತ್ರಿಗಳ ಅಂತಿಮ ಸೂಚನೆಯ ನಂತರ ನಿರ್ಧಾರ ಹೊರಬೀಳಲಿದೆ ಎಂದು ಅವರು ಹೇಳಿದರು.ದಸರಾ ಉದ್ಘಾಟನೆಗೆ ಹಲವು ಗಣ್ಯರ ಹೆಸರುಗಳು ಶಾಸಕರಿಂದ ಬಂದಿವೆ. ಆದರೆ, ಅಂತಿಮವಾಗಿ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದರು.
ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಫ್ಲೈಓವರ್, ವೈಟ್ ಟಾಪಿಂಗ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪೈಕಿ ದಸರಾಗೂ ಮುನ್ನ ಮುಗಿಯುವ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಲು ಸೂಚಿಸಲಾಗಿದೆ. ದಸರಾ ವೇಳೆಗೆ ಮುಗಿಯದ ದೀರ್ಘಾವಧಿಯ ಕಾಮಗಾರಿಗಳನ್ನು ಹಬ್ಬದ ದಿನಗಳಲ್ಲಿ ನಿಲ್ಲಿಸಿ, ಸಾರ್ವಜನಿಕರ ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ಈ ಬಾರಿ ಡ್ರೋನ್ ಶೋ ಅನ್ನು ಮತ್ತಷ್ಟು ವಿನೂತನವಾಗಿ ಆಯೋಜಿಸಲಾಗುವುದು. ಜೊತೆಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಏರ್ ಶೋ ಕೂಡ ನಡೆಸಲಾಗುವುದು ಎಂದು ಅವರು ಹೇಳಿದರು.
ದಸರಾ ನಮ್ಮ ರಾಜ್ಯದ ಹೆಮ್ಮೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ನೀಡಿದ ನೈರ್ಮಲ್ಯ, ಮಹಿಳೆಯರ ಸುರಕ್ಷತೆ, ತಾಲೂಕು ಮಟ್ಟದ ಕ್ರೀಡೋತ್ಸವಗಳಂತಹ ಉತ್ತಮ ಸಲಹೆಗಳನ್ನು ಪರಿಗಣಿಸಿ ಈ ಬಾರಿಯ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.ಅಧಿಕಾರಿಗಳು ದಸರಾ ಮತ್ತು ಎಸ್‌ಐಆರ್ ಕೆಲಸಗಳಲ್ಲಿ ನಿರತರಾಗಿದ್ದರೂ, ದಿನನಿತ್ಯದ ಸಾರ್ವಜನಿಕ ಕೆಲಸ- ಕಾರ್ಯಗಳಿಗೆ ಯಾವುದೇ ರೀತಿಯ ಭಂಗ ಬರಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಕೆ. ಹರೀಶ್ ಗೌಡ, ಜಿ.ಡಿ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ರಮೇಶ್ ಬಂಡೀಸಿದ್ದೇಗೌಡ, ಡಿ. ರವಿಶಂಕರ್, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಆರ್. ರಘು ಕೌಟಿಲ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಮೊದಲಾದವರು ಇದ್ದರು.----
ಬಾಕ್ಸ್...ವಿಐಪಿಗಳಿಗೆ ಉಚಿತ ಗೋಲ್ಡ್ ಪಾಸ್ ಇಲ್ಲ: ಯತೀಂದ್ರ
ಗೋಲ್ಡ್ ಕಾರ್ಡ್ ಜನರಿಗೆ ಮಾತ್ರ ಲಭ್ಯವಾಗಲಿದೆ. ಈ ಬಾರಿ ಗೋಲ್ಡ್ ಆಸನಗಳು ಎಷ್ಟಿರುತ್ತದೆ ಅಷ್ಟೇ ಆಸನಗಳ ವ್ಯವಸ್ಥೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ದಸರಾ ವೀಕ್ಷಣೆಯ ಗೋಲ್ಡ್ ಪಾಸ್ ಗೊಂದಲಗಳಿಗೆ ತೆರೆ ಎಳೆಯಲು, ಆಸನಗಳ ಸಂಖ್ಯೆಗೆ ತಕ್ಕಂತೆ ಮಾತ್ರ ಪಾಸ್ ಗಳನ್ನು ಮುದ್ರಿಸಿ, ಹಣ ನೀಡಿ ಖರೀದಿಸುವ ಸಾರ್ವಜನಿಕರಿಗೆ ಮಾತ್ರ ನೀಡಲಾಗುವುದು. ವಿಐಪಿಗಳಿಗೆ ಉಚಿತ ಗೋಲ್ಡ್ ಪಾಸ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ದಸರಾ ಪಾಸ್ ವಿಚಾರವಾಗಿ ಕಳೆದ ಬಾರಿ ಗೊಂದಲ ಇತ್ತು. ಈ ಬಾರಿ ಯಾವುದೇ ಗೊಂದಲ ಆಗಬಾರದು ಅಂತ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಈ ಬಾರಿ ಪಾಸ್ ವಿಚಾರದಲ್ಲಿ ಸಮಸ್ಯೆ ಆಗದಂತೆ ಕ್ರಮ ಆಗುತ್ತದೆ, ಪಾಸ್ ಬೇಡ ಎಂದು ಶಾಸಕರು ಹೇಳಿದ್ದಾರೆ. ಸಿಎಂಗೆ ವಿಚಾರವನ್ನು ತಿಳಿಸಿದ್ದೇನೆ. ಆ ಬಗ್ಗೆ ಸೂಕ್ತ ತೀರ್ಮಾನ ಆಗುತ್ತದೆ ಎಂದರು.----
ಕೋಟ್...ಪ್ಲೆಕ್ಸ್ ಮುಕ್ತ ಮಾಡಬೇಕು ಎಂಬ ಸಲಹೆಗಳು ಬಂದಿದೆ. ಫ್ಲೆಕ್ಸ್ ಹಾಕೋದರಿಂದ ಪಾಲಿಕೆಗೆ ಆದಾಯ ಬರುತ್ತದೆ. ನಿಗದಿತ ಸ್ಥಳದಲ್ಲಿ ಮಾತ್ರ ಫ್ಲೆಕ್ಸ್ ಗೆ ಅವಕಾಶ. ಈ ಬಗ್ಗೆ ಪ್ಲೆಕ್ಸ್ ಕಂಟ್ರೋಲ್ ಮಾಡಲು ಬೇಕಾದ ನಿರ್ಧಾರ ಮಾಡುತ್ತೇವೆ. ಪುಟ್ ಪಾತ್ ಒತ್ತುವರಿ ಶೀಘ್ರವೇ ಆಗುತ್ತದೆ. ಈಗಾಗಲೇ ನಗರದಲ್ಲಿ ಒತ್ತುವರಿ ತೆರವು ಕಾರ್ಯ ಆಗುತ್ತಿದೆ. ದಸರಾ ಒಳಗಾಗಿ ಎಲ್ಲವೂ ಪೂರ್ಣ ಆಗುತ್ತದೆ.
- ಡಾ. ಯತೀಂದ್ರ ಸಿದ್ಧರಾಮಯ್ಯ, ನಗರಾಭಿವೃದ್ಧಿ ಸಚಿವರು