ದಸರಾ ಹಿನ್ನೆಲೆ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು!

| Published : Oct 13 2024, 01:12 AM IST

ದಸರಾ ಹಿನ್ನೆಲೆ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು!
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರ ದಸರಾ ಹಿನ್ನೆಲೆ ಪ್ರವಾಸಿಗರು ಬಂಡೀಪುರ ಸುತ್ತಮುತ್ತಲಿನ ಖಾಸಗಿ ರೆಸಾರ್ಟ್, ಹೋಟೆಲ್, ಹೋಂ ಸ್ಟೇಗಳಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಿದ್ದ ಕಾರಣ ಎಲ್ಲೆಡೆ ತುಂಬಿ ತುಳುಕುತ್ತಿದ್ದರು.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ನವರಾತ್ರಿ ಹಾಗೂ ದಸರಾ ರಜೆ ಹಿನ್ನೆಲೆ ಶನಿವಾರ ಬಂಡೀಪುರ ಸಫಾರೀಲಿ ದಂಡು ಕಂಡರೆ, ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತರು ದಂಡೇ ನೆರೆದಿತ್ತು.

ಅ.11 ರಂದು ಆಯುಧ ಪೂಜೆ, ಅ.12 ರಂದು ವಿಜಯ ದಶಮಿ ರಜೆಯಿದ್ದ ಕಾರಣ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇತರೆ ಜಿಲ್ಲೆ ಹಾಗೂ ಕೇರಳ ಹಾಗೂ ತಮಿಳುನಾಡಿನ ಪ್ರವಾಸಿಗರು ಹರಿದು ಬಂದಿದ್ದರು.

ಶನಿವಾರ ಬೆಳಗ್ಗೆ ಹಾಗೂ ಸಂಜೆ ಬಂಡೀಪುರ ಸಫಾರಿಗೆ ಸಾವಿರಾರು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಫಾರಿ ಕೇಂದ್ರದ ಆವರಣದಲ್ಲಿ ಕಾರುಗಳು ಸಾಲುಗಟ್ಟಿ ನಿಂತಿದ್ದವು.

ಬೆಟ್ಟದಲ್ಲೂ ಭಕ್ತರು

ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟಕ್ಕೂ ದರ್ಶನ ಪಡೆಯಲು ಭಕ್ತರು ಮುಗಿ ಬಿದ್ದಿದ್ದರು. ಬೆಟ್ಟದ ತಪ್ಪಲಿನ ಗೇಟ್ ಬಳಿ ಭಕ್ತರು ಕಿಲೋಮೀಟರ್‌ ಗಟ್ಟಲೇ ಉರಿ ಬಿಸಿಲಿನಲ್ಲೂ ಸಾಲು ಗಟ್ಟಿ ನಿಂತು ಬಸ್ ಏರಿ ಬೆಟ್ಟಕ್ಕೆ ತೆರಳಿದರು.

ಬೆಟ್ಟದ ತಪ್ಪಲಿನ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಲು ಜಾಗವಿಲ್ಲದೆ ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿ ಸುಮಾರು ಎರಡು ಕಿಮೀ ದೂರು ಕಾರುಗಳು ನಿಂತಿದ್ದವು.ಬೆಟ್ಟದ ತಪ್ಪಲಿನಲ್ಲಿ ಭಕ್ತರು ಬಸ್‌ಗಾಗಿ ಕಾದು ಕಾದು ಬಿಸಿಲಿನ ಬೇಗೆಗೆ ಕನಲಿದ್ದರು.

ಗೋಪಾಲಸ್ವಾಮಿ ದೇವಸ್ಥಾನಕ್ಕೆ ಬೆಟ್ಟದ ತಪ್ಪಲಿನಿಂದ ೧೦ ಕೆಎಸ್‌ಆರ್‌ಟಿಸಿ ಬಸ್ ಬಿಡಲಾಗಿತ್ತು. ಬೆಳಗ್ಗೆ ಸಂಜೆಯ ತನಕ ಸುಮಾರು ೪ ಸಾವಿರಕ್ಕೂ ಹೆಚ್ಚು ಜನರು ಬೆಟ್ಟಕ್ಕೆ ತೆರಳಿದ್ದಾರೆ ಎನ್ನಬಹುದು.

ಗೋಪಾಲಸ್ವಾಮಿ ಬೆಟ್ಟಕ್ಕೆ ೧೦ ಸಾರಿಗೆ ಬಸ್‌ಗಳ ಓಡಾಟದ ಫಲವಾಗಿ ಶನಿವಾರ ನಾಲ್ಕು ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ ಎಂದು ಟ್ರಾಫಿಕ್ ಕಂಟ್ರೋಲರ್ ವಿಜಯಕುಮಾರ್ ತಿಳಿಸಿದರು.

----------------------

ರೆಸಾರ್ಟ್,ಹೋಟೆಲ್‌ನಲ್ಲೂ ಜನವೋ ಜನ!

ಗುಂಡ್ಲುಪೇಟೆ: ವಿಜಯದಶಮಿ ಹಿನ್ನೆಲೆ ಬಂಡೀಪುರ ಸುತ್ತಮುತ್ತಲಿನ ಖಾಸಗಿ ರೆಸಾರ್ಟ್, ಹೋಟೆಲ್ ಹಾಗೂ ಗುಂಡ್ಲುಪೇಟೆ ಹೋಟೆಲ್‌ಗಳಲ್ಲೂ ಶುಕ್ರವಾರ ರಾತ್ರಿ ಪ್ರವಾಸಿಗರು ಬೀಡು ಬಿಟ್ಟಿದ್ದರು.

ಶನಿವಾರ ದಸರಾ ಹಿನ್ನೆಲೆ ಪ್ರವಾಸಿಗರು ಬಂಡೀಪುರ ಸುತ್ತಮುತ್ತಲಿನ ಖಾಸಗಿ ರೆಸಾರ್ಟ್, ಹೋಟೆಲ್, ಹೋಂ ಸ್ಟೇಗಳಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಿದ್ದ ಕಾರಣ ಎಲ್ಲೆಡೆ ತುಂಬಿ ತುಳುಕುತ್ತಿದ್ದರು.

ಪಟ್ಟಣದ ಉದ್ಯಮ ಭವನ್, ಗುರುಪ್ರಸಾದ್, ಶಬರಿ, ಅನ್ನಪೂರ್ಣ, ಸಂತೋಷ್‌, ಶ್ರೀನಿಧಿ ಹೋಟೆಲ್‌ಗಳಲ್ಲಿ ಬೆಳಿಗ್ಗೆಯಿಂದ ರಾತ್ರಿ ತನಕ ತುಂಬಿ ತುಳುಕುತ್ತಿದ್ದರು.

ದಸರಾ ದಿನ ಗ್ರಾಹಕರು ಹೋಟೆಲ್ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಎಂದು ಹೋಟೆಲ್‌ ಮತ್ತು ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ರಾವ್‌ ಹಾಗೂ ಉದ್ಯಮ್ ಹೋಟೆಲ್ ಮಾಲೀಕ ಪ್ರದೀಪ್ ಹೇಳಿದರು.