ದಸರಾ ಮಹೋತ್ಸವದ 3ನೇ ದಿನವಾದ ಮಂಗಳವಾರ ಪ್ರಮುಖ ಆಕರ್ಷಣೆಯಾದ ಯುವದಸರಾ, ಕವಿಗೋಷ್ಠಿ, ಮಹಿಳಾ ದಸರಾ, ರಂಗೋಲಿ ಸ್ಪರ್ಧೆಗಳು ಆರಂಭವಾದವು.

ಕನ್ನಡಪ್ರಭ ವಾರ್ತೆ ಮೈಸೂರು:

ದಸರಾ ಮಹೋತ್ಸವದ 3ನೇ ದಿನವಾದ ಮಂಗಳವಾರ ಪ್ರಮುಖ ಆಕರ್ಷಣೆಯಾದ ಯುವದಸರಾ, ಕವಿಗೋಷ್ಠಿ, ಮಹಿಳಾ ದಸರಾ, ರಂಗೋಲಿ ಸ್ಪರ್ಧೆಗಳು ಆರಂಭವಾದವು.

ದಸರಾ ಅಂಗವಾಗಿ ಉತ್ತನಹಳ್ಳಿ ಸಮೀಪ ಆರಂಭವಾದ ಯುವ ದಸರಾ ಮಹೋತ್ಸವಕ್ಕೆ ಖ್ಯಾತ ಚಲನಚಿತ್ರ ನಟ ಪ್ರಭುದೇವ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಯುವ ದಸರಾ ವೀಕ್ಷಿಸಲು ನೆರೆದಿದ್ದರು.

ಅರಮನೆ ಆವರಣದಲ್ಲಿ ಮಂಗಳವಾರ ಬೆಳಗ್ಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು, ಆಕರ್ಷಕ ರಂಗೋಲಿ ಬಿಡಿಸಿದರು.

ಇದೇ ವೇಳೆ ವಿಂಟೇಜ್‌ ಕಾರುಗಳ ಪ್ರದರ್ಶನವು ಆಕರ್ಷಕವಾಗಿತ್ತು. ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕವಿಗೋಷ್ಠಿಗೆ ಖ್ಯಾತ ಕವಯತ್ರಿ ವೈದೇಹಿ ಚಾಲನೆ ನೀಡಿದರು. ಬಹುರೂಪಿ ಕವಿಗೋಷ್ಠಿ ಹೆಸರಿನ ಈ ಕವಿಗೋಷ್ಠಿಯಲ್ಲಿ ಗಾರೆ ಕೆಲಸ ಮಾಡುವ ಎಸ್‌.ಟಿ. ಮಹದೇವ ಕವನ ವಾಚಿಸಿ ಗಮನ ಸೆಳೆದರು.

ಬಳಿಕ ಪುಸ್ತಕ ಮೇಳದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಬಳಿಕ ಮಹಿಳಾ ದಸರಾ ಕಾರ್ಯಕ್ರಮವು ಜೆ.ಕೆ. ಮೈದಾನದಲ್ಲಿ ನಡೆಯಿತು. ಅಲ್ಲದೇ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿತ್ತು.

ದಸರಾ ಕ್ರೀಡಾಕೂಟದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ವಿಜೇತರಿಗೆ ಸ್ವತಃ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಪದಕ ಪ್ರದಾನಿಸಿ ಶುಭ ಕೋರಿದರು.

ಕಲಾಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಅರಮನೆ ಆವರಣದಲ್ಲಿ ಗಾಯಕಿ ಅನುರಾಧ ಭಟ್‌ ಅವರ ಗಾಯನ ಕಾರ್ಯಕ್ರಮವು ಎಲ್ಲರನ್ನು ಮೋಡಿ ಮಾಡಿತು.