೫೦ ವರ್ಷದಿಂದ ದಸರಾ ಬೊಂಬೆ ಪ್ರದರ್ಶನ
KannadaprabhaNewsNetwork | Published : Oct 18 2023, 01:00 AM IST
೫೦ ವರ್ಷದಿಂದ ದಸರಾ ಬೊಂಬೆ ಪ್ರದರ್ಶನ
ಸಾರಾಂಶ
೫೦ ವರ್ಷದಿಂದ ದಸರಾ ಬೊಂಬೆ ಪ್ರದರ್ಶನ, ೮೦ ವರ್ಷ ಹಳೆಯದಾದ ಬೊಂಬೆಗಳಿಗೆ ವರ್ಣಾಲಂಕಾರ, ಆಕರ್ಷಣೀಯ ಜೋಡಣೆಯಿಂದ ನವರಾತ್ರಿಗೆ ಮೆರುಗು
- ೮೦ ವರ್ಷ ಹಳೆಯದಾದ ಬೊಂಬೆಗಳಿಗೆ ವರ್ಣಾಲಂಕಾರ - ಆಕರ್ಷಣೀಯ ಜೋಡಣೆಯಿಂದ ನವರಾತ್ರಿಗೆ ಮೆರುಗು ಕನ್ನಡಪ್ರಭ ವಾರ್ತೆ ಮಂಡ್ಯ ಬೊಂಬೆ ಪ್ರದರ್ಶನ ನವರಾತ್ರಿಯ ವಿಶೇಷ ಆಕರ್ಷಣೆ. ದಸರಾ ಹಬ್ಬದ ಸಮಯದಲ್ಲಿ ವೈವಿಧ್ಯಮಯ ಬೊಂಬೆಗಳನ್ನು ಆಕರ್ಷಣೀಯವಾಗಿ ಜೋಡಿಸಿ, ಅಲಂಕಾರ ಮಾಡಿ ಪ್ರದರ್ಶನಕ್ಕಿಡುವುದನ್ನು ಹಲವಾರು ಮಂದಿ ರೂಢಿಸಿಕೊಂಡು ಬಂದಿದ್ದಾರೆ. ಅದೇ ಮಾದರಿಯಲ್ಲಿ ನಗರದ ದಂಪತಿಯೊಬ್ಬರು ಕಳೆದ ೫೦ ವರ್ಷಗಳಿಂದ ನಿರಂತರವಾಗಿ ಶರನ್ನವರಾತ್ರಿ ಸಮಯದಲ್ಲಿ ಬೊಂಬೆಗಳನ್ನು ಕೂರಿಸುವುದರೊಂದಿಗೆ ನೆಮ್ಮದಿ ಕಾಣುತ್ತಿದ್ದಾರೆ. ಇಲ್ಲಿನ ನೆಹರು ನಗರದ ಟಿ.ಎಸ್.ಸೀತಾರಾಮ್ ಮತ್ತು ಉಷಾರಾಮ್ ದಂಪತಿ ಬೊಂಬೆ ಪ್ರದರ್ಶಿಸುವುದನ್ನು ಹಲವು ದಶಕಗಳಿಂದ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಇವರ ಬಳಿ ೮೦ ವರ್ಷದಷ್ಟು ಹಳೆಯ ಬೊಂಬೆಗಳ ಸಂಗ್ರಹವಿದೆ. ಬಣ್ಣ ಕಳೆದುಕೊಂಡ, ಆಕರ್ಷಣೆ ಕಳೆದುಕೊಂಡ ಬೊಂಬೆಗಳನ್ನು ಚಿತ್ತಾಕರ್ಷಕಗೊಳಿಸುವುದರೊಂದಿಗೆ ವರ್ಣಾಲಂಕಾರ ಮಾಡುವುದು ಮತ್ತು ವಸ್ತ್ರಾಲಂಕಾರ ಮಾಡುವ ಕೌಶಲ್ಯವನ್ನು ಉಷಾರಾಮ್ ಕರಗತ ಮಾಡಿಕೊಂಡಿದ್ದಾರೆ. ಪತ್ನಿಯ ಬೊಂಬೆ ಪ್ರದರ್ಶನದ ಉತ್ಸಾಹಕ್ಕೆ ಪತಿ ಟಿ.ಎಸ್.ಸೀತಾರಾಮ್ ಕೂಡ ಪ್ರೇರಣೆಯಾಗಿ ನಿಂತು ನೆರವಾಗುತ್ತಿದ್ದಾರೆ. ಮನೆಯೊಳಗಿನನ ೧೦*೧೦ ಅಡಿ ಜಾಗದಲ್ಲಿ ಶಿಸ್ತುಬದ್ಧವಾಗಿ, ಕಣ್ಮನ ಸೆಳೆಯುವ ರೀತಿಯಲ್ಲಿ ಬೊಂಬೆಗಳನ್ನು ಜೋಡಿಸಿ ಪ್ರದರ್ಶನಕ್ಕಿಟ್ಟಿದ್ದಾರೆ. ಅದಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡುವುದರೊಂದಿಗೆ ಮೆರುಗನ್ನು ಹೆಚ್ಚಿಸಿದ್ದಾರೆ. ಐದು ಹಂತಗಳಲ್ಲಿ ನೂರಾರು ಬೊಂಬೆಗಳನ್ನು ವೈಶಿಷ್ಟ್ಯಪೂರ್ಣವಾಗಿ ಜೋಡಿಸಿಟ್ಟು ಅಂದಗೊಳಿಸಿರುವುದು ವಿಶೇಷವಾಗಿದೆ. ಶ್ರೀಕೃಷ್ಣನ ಬಾಲ್ಯದ ಲೀಲೆಗಳು, ವಾದ್ಯಸಂಗೀತದಲ್ಲಿ ಗಣಪತಿ, ಮಕ್ಕಳ ಗೊಂಬೆಗಳು, ಶ್ರೀಕೃಷ್ಣನಿಂದ ಕಾಳಿಂಗ ಮರ್ಧನ, ಕೈಲಾಸಪರ್ವತ ಸೃಷ್ಟಿಸಿ ಅದರಲ್ಲಿ ಶಿವ-ಪಾರ್ವತಿ, ಗಣಪತಿ, ಸುಬ್ರಹಣ್ಯ, ನಂದಿ, ನಾರದ ಮತ್ತು ಮಹರ್ಷಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಗಮನಸೆಳೆಯುವಂತೆ ಮಾಡಿದ್ದಾರೆ. ವಿಷ್ಣುವಿನ ದಶಾವತಾರ, ಅಷ್ಟಲಕ್ಷ್ಮಿಯವರು, ಸಪ್ತಮಾತೃಕೆಯರು, ಗೌರಿ, ಬನಶಂಕರಿ, ಸರಸ್ವತಿ, ಕಾಮಧೇನು, ರಾಜನ ಆಸ್ಥಾನ, ಶ್ರೀಮನ್ನಾರಾಯಣ, ಶ್ರೀ ದುರ್ಗಾಪರಮೇಶ್ವರಿ ಸೇರಿದಂತೆ ವಿಭಿನ್ನ ಮಾದರಿಯ ಬೊಂಬೆಗಳನ್ನು ಸಂಗ್ರಹಿಸಿ ನವರಾತ್ರಿ ಹಬ್ಬದ ಕಳೆಯನ್ನು ಹೆಚ್ಚಿಸಿದ್ದಾರೆ. ಹೆಣ್ಣು ದೇವರ ಬೊಂಬೆಗಳಿಗೆ ಅದ್ಭುತವಾಗಿ ವಸ್ತ್ರಾಲಂಕಾರ ಮಾಡಿ ಅದಕ್ಕೆ ತಕ್ಕಂತೆ ಆಭರಣಗಳನ್ನು ತೊಡಿಸುವುದರಲ್ಲಿ ಉಷಾರಾಮ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವುದು ಮತ್ತೊಂದು ವಿಶೇಷ. ಬೊಂಬೆ ಪ್ರದರ್ಶನಕ್ಕಷ್ಟೇ ಸೀಮಿತವಾಗದ ದಂಪತಿ ಪ್ರತಿ ದಿನವೂ ಲಲಿತಾ ಸಹಸ್ರನಾಮ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸುವುದು. ಮುತ್ತೈದೆಯರನ್ನು ಪೂಜೆಗೆ ಆಹ್ವಾನಿಸಿ ಸೀರೆ, ತಾಂಬೂಲ ನೀಡುವುದು. ಪ್ರಸಾದ ವಿತರಣೆ ಮಾಡುವುದರೊಂದಿಗೆ ಧನ್ಯತಾಭಾವ ಮೆರೆಯುತ್ತಿದ್ದಾರೆ. --------------------------- ನಾನು ಮೂರು ವರ್ಷ ಚಿಕ್ಕವನಿರುವಾಗಿನಿಂದ ನಮ್ಮ ಮನೆಯಲ್ಲಿ ಬೊಂಬೆ ಕೂರಿಸುತ್ತಿದ್ದರು. ಮದುವೆಯಾದ ನಂತರದಲ್ಲಿ ನನ್ನ ಪತ್ನಿ ಅದನ್ನು ಮುಂದುವರೆಸುತ್ತಿದ್ದಾಳೆ. ಬೊಂಬೆ ಕೂರಿಸುವುದರಲ್ಲಿ ಇಬ್ಬರಿಗೂ ವಿಶೇಷ ಆಸಕ್ತಿ. ನಮ್ಮಲ್ಲಿ ೮೦ ವರ್ಷದಷ್ಟು ಹಳೆಯ ಬೊಂಬೆಗಳಿವೆ. ಅಂದ, ಬಣ್ಣ ಕಳೆದುಕೊಂಡ ಬೊಂಬೆಗಳನ್ನು ತೆಗೆಯದೆ ಅವುಗಳಿಗೆ ಮತ್ತೆ ಆಕರ್ಷಣೆ ಹೆಚ್ಚಿಸಿ ಪ್ರದರ್ಶನಕ್ಕಿಡುತ್ತೇವೆ. ಬೊಂಬೆ ಕೂರಿಸುವುದರಿಂದ ಒಂದು ರೀತಿ ಸಂತೃಪ್ತ ಭಾವವಿದೆ. - ಟಿ.ಎಸ್.ಸೀತಾರಾಮ್, ನೆಹರುನಗರ, ಮಂಡ್ಯ