15ರಿಂದ ಲಿಂಗಸುಗೂರಿನಲ್ಲಿ ರಂಭಾಪುರಿ ಶ್ರೀಗಳ ದಸರಾ ಧರ್ಮ ಸಮ್ಮೇಳನ
KannadaprabhaNewsNetwork | Published : Oct 09 2023, 12:45 AM IST
15ರಿಂದ ಲಿಂಗಸುಗೂರಿನಲ್ಲಿ ರಂಭಾಪುರಿ ಶ್ರೀಗಳ ದಸರಾ ಧರ್ಮ ಸಮ್ಮೇಳನ
ಸಾರಾಂಶ
15ರಿಂದ ಲಿಂಗಸುಗೂರಿನಲ್ಲಿ ರಂಭಾಪುರಿ ಶ್ರೀಗಳ ದಸರಾ ಧರ್ಮ ಸಮ್ಮೇಳನದಸರಾ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು
ದಸರಾ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು ರಾಯಚೂರು ಜಿಲ್ಲೆ ಲಿಂಗಸುಗೂರು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ 32ನೇ ವರ್ಷದ ದಸರಾ ಧರ್ಮ ಸಮ್ಮೇಳನ ಅ.15ರಿಂದ 24ರವರೆಗೆ ನಡೆಯಲಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು. ರಂಭಾಪುರಿ ಪೀಠದಲ್ಲಿ ಭಾನುವಾರ ದಸರಾ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಅ. 15ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಸಚಿವ ಈಶ್ವರ ಖಂಡ್ರೆ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಮಾನಪ್ಪ ವಜ್ಜಲ, ಡಾ. ಶಿವರಾಜ ಪಾಟೀಲ, ಹಂಪನಗೌಡ ಬಾದರ್ಲಿ ಭಾಗವಹಿಸಲಿದ್ದಾರೆ. ಅ. 24ರವರೆಗೆ ನಡೆಯುವ ದಸರಾ ಧರ್ಮ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಶಿವರಾಜ ತಂಗಡಗಿ, ಕೆ.ಎನ್. ರಾಜಣ್ಣ, ಬಿ.ನಾಗೇಂದ್ರ, ಎಂ.ಬಿ.ಪಾಟೀಲ್, ಎನ್.ಎಸ್. ಭೋಸರಾಜ, ಡಾ.ಶರಣ ಪ್ರಕಾಶ ಪಾಟೀಲ, ಎಚ್.ಕೆ. ಪಾಟೀಲ, ರಹೀಂಖಾನ್, ಪ್ರಿಯಾಂಕ ಖರ್ಗೆ, ಶರಣಬಸಪ್ಪ ದರ್ಶನಾಪುರ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಯಿ ಸೇರಿದಂತೆ ಸಂಸದರು, ಶಾಸಕರು ರಾಜಕೀಯ ಧುರೀಣರು ಹಾಗೂ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪ್ರಶಸ್ತಿ: ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ಯುವ ಸಿರಿ ಪ್ರಶಸ್ತಿಯನ್ನು ಸಿಂಧನೂರಿನ ವೀರೇಶ್ ಪಾಟೀಲ್‌ಗೆ, ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಲಿಂಗಸುಗೂರಿನ ಮಲ್ಲಣ್ಣ ವಾರದವರಿಗೆ, ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶಿವಾಚಾರ್ಯ ಸ್ವಾಮಿಗಳಿಗೆ ಸಾಧನ ಸಿರಿ, ಮಾಗಣಗೇರಿ ಬೃಹನ್ಮಠದ ಡಾ. ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಶಿವಾಚಾರ್ಯ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಉಪನ್ಯಾಸ: ಸಮಾರಂಭದಲ್ಲಿ ವಿವಿಧ ಶಾಖಾ ಮಠಗಳ ಶಿವಾಚಾರ್ಯರು ಸೇರಿದಂತೆ ಲಕ್ಷ್ಮೇಶ್ವರದ ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ, ತುಮಕೂರು ವಿಶ್ವ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಾ. ಮೀನಾಕ್ಷಿ ಖಂಡಿಮಠ, ಸಂಶೋಧಕ ಡಾ. ಎ.ಸಿ.ವಾಲಿ ಸೇರಿದಂತೆ ಗಣ್ಯರು ಉಪನ್ಯಾಸ ನೀಡುವರು. ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ವಿವಿಧ ಶಾಖಾ ಮಠಗಳ ಮಠಾಧೀಶರು ಭಾಗವಹಿಸುವರು. ಇಷ್ಟಲಿಂಗ ಮಹಾಪೂಜೆ: ಲಿಂಗಸುಗೂರು ಈಶ್ವರ ದೇವಸ್ಥಾನದ ಆವರಣದಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅ. 15ರಿಂದ 24ರವರೆಗೆ ಲೋಕಕಲ್ಯಾಣಕ್ಕಾಗಿ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನಡೆಸುವರು. 24ರಂದು ಬೆಳಗ್ಗೆ ಇಷ್ಟಲಿಂಗ ಪೂಜೆಗೆ ರಂಭಾಪುರಿ ಜಗದ್ಗುರುಗಳು ಸ್ವತಃ ಕುಂಭ ಹೊತ್ತು ಅಗ್ರೋದಕ ತರುವರು. ೨೪ರ ಸಂಜೆ ರಂಭಾಪುರಿ ಜಗದ್ಗುರುಗಳು ಅಡ್ಡಪಲ್ಲಕ್ಕಿ ಮೂಲಕ ಆಗಮಿಸಿ ಶಮಿ ಸೀಮೋಲ್ಲಂಘನ ಪೂಜೆ ನೆರವೇರಿಸಿ ಮಾನವ ಧರ್ಮ ಮಂಟಪದಲ್ಲಿ ಶಾಂತಿ ಸಂದೇಶ ಅನುಗ್ರಹಿಸುವರು. ಅ.14ರ ಶನಿವಾರ ಸಂಜೆ 5 ಗಂಟೆಗೆ ಅಲಂಕೃತ ಸಾರೋಟ ಮೂಲಕ ರಂಭಾಪುರಿ ಜಗದ್ಗುರುಗಳ ಶುಭಾಗಮನವಾಗಲಿದ್ದು, ಸ್ವಾಗತ ಸಮಾರಂಭ ಇರುತ್ತದೆ. ಸಮಾರಂಭದ ಯಶಸ್ಸಿಗಾಗಿ ದಸರಾ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಸೇವಾ ಸಮಿತಿ ಗೌರವಾಧ್ಯಕ್ಷ ದೇವರಭೂಪುರ ಕ್ಷೇತ್ರ ಬೃಹನ್ಮಠದ ಅಭಿನವ ಗಜದಂಡ ಶಿವಾಚಾರ್ಯ ಸ್ವಾಮಿ, ಅಧ್ಯಕ್ಷ ಮಾನಪ್ಪ ವಜ್ಜಲ, ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಶ್ರೀಪೀಠದ ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪ, ಚಂದ್ರಶೇಖರ, ವಿಶ್ವನಾಥ ಹಾಗೂ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರು ಇದ್ದರು. - - - ೦೮ಬಿಹೆಚ್‌ಆರ್ ೩: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ದಸರಾ ಧರ್ಮ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು. ಪ್ರಭುದೇವ ಕಲ್ಮಠ, ಸಂಕಪ್ಪ, ಚಂದ್ರಶೇಖರ, ವಿಶ್ವನಾಥ ಇದ್ದರು.