ಕುದೂರು ಮುಖ್ಯರಸ್ತೆ ಬದಿ ವ್ಯಾಪಾರಸ್ಥರಿಗೆ ಧೂಳಿನ ಭಾಗ್ಯ

| Published : Dec 30 2023, 01:15 AM IST

ಸಾರಾಂಶ

ಕುದೂರು: ಕುದೂರು ಗ್ರಾಮದ ಮುಖ್ಯರಸ್ತೆಯಲ್ಲಿರುವ ವ್ಯಾಪಾರಸ್ಥರು ನಾವು ಯಾವ ಶಾಪ ಮಾಡಿದ್ದೇವೆಯೋ ಒಂದು ವರ್ಷದಿಂದ ಉಚಿತವಾಗಿ ಧೂಳು ಭಾಗ್ಯವನ್ನು ಪಡೆಯುತ್ತಿದ್ದೇವೆ. ನಮ್ಮೆಲ್ಲರ ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕುದೂರು: ಕುದೂರು ಗ್ರಾಮದ ಮುಖ್ಯರಸ್ತೆಯಲ್ಲಿರುವ ವ್ಯಾಪಾರಸ್ಥರು ನಾವು ಯಾವ ಶಾಪ ಮಾಡಿದ್ದೇವೆಯೋ ಒಂದು ವರ್ಷದಿಂದ ಉಚಿತವಾಗಿ ಧೂಳು ಭಾಗ್ಯವನ್ನು ಪಡೆಯುತ್ತಿದ್ದೇವೆ. ನಮ್ಮೆಲ್ಲರ ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದು ಕುದೂರು ಮುಖ್ಯರಸ್ತೆಯನ್ನು ವಿಸ್ತರಿಸುವ ಸಲುವಾಗಿ ರಸ್ತೆ ಮಾಲೆ ಕಾಂಕ್ರೀಟ್ ಹಾಕಿ ಆ ಕೆಲಸವನ್ನು ಪೂರ್ಣಗೊಳಿಸದೆ ನಿತ್ಯ ಧೂಳು ಹಾಗೂ ಟ್ರಾಫಿಕ್ ಸಮಸ್ಯೆ ಅನುಭವಿಸುವಂತಾಗಿದೆ. 2023 ವರ್ಷದ ಪ್ರಾರಂಭದಲ್ಲಿ ಇಲ್ಲಿನ ಕಾಮಗಾರಿ ಆರಂಭವಾಯಿತು. ತಿಂಗಳುಗಟ್ಟಲೆ ರಸ್ತೆ ಅಗೆದು ವಾಹನ ಸಂಚಾರ ಮಾಡಲಾಗದೆ, ಓಡಾಡಲಾಗದಂತೆ ಮಾಡಿ ಬೀದಿ ಬದಿ ವ್ಯಾಪಾರಿಗಳು ಕಷ್ಟ ಪಡುವಂತಾಯಿತು. ಕೆಲಸವಾದರೂ ಚುರುಕಿನಿಂದ ನಡೆಯುತ್ತಿದೆಯೇ ಎಂದರೆ ಅದೂ ಕೂಡಾ ಇಲ್ಲ. ವಾರದಲ್ಲಿ ಒಂದು ದಿನ ಎಂ ಸ್ಯಾಂಡ್ ಹಾಕುತ್ತಾರೆ. ಇನ್ನೊಂದು ವಾರ ಹತ್ತಾರು ಇಟ್ಟಿಗೆ ಜೋಡಿಸಿ ಹೋಗುತ್ತಾರೆ. ಹೀಗೆ ತಿಂಗಳುಗಳು ಉರುಳಿದರು ಕೆಲಸ ಮಾತ್ರ ಆಗುತ್ತಿಲ್ಲದಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ.

ಮೂರು ಕೋಟಿ ವೆಚ್ಚದ ರಸ್ತೆ :

ಹಿಂದಿನ ಸರ್ಕಾರದಲ್ಲಿ 3 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ ಆಗಬೇಕೆಂದು ಹಣ ಬಿಡುಗಡೆ ಮಾಡಿ 2023 ಫೆಬ್ರವರಿಯಲ್ಲಿ ಕಾಮಗಾರಿ ಆರಂಭ ಮಾಡಿದ್ದರು. ಅತ್ಯಂತ ಚಿಕ್ಕದಾದ ಚರಂಡಿ ವ್ಯವಸ್ಥೆ ಮಾಡಿ ಮತ್ತು ಈಗ ನಿರ್ಮಾಣ ಮಾಡಿರುವ ರಸ್ತೆ ಸಂತೇ ವೃತ್ತದಲ್ಲಿ ಮುಕ್ತಾಯವಾಗುತ್ತದೆ. ಸಂತೇ ವೃತ್ತದ ರಸ್ತೆಗಿಂತ ಮೂರು ಅಡಿ ನೂತನ ರಸ್ತೆ ಎತ್ತರದಲ್ಲಿದೆ. ಒಂದು ಮಳೆ ಸುರಿದರೆ ಸಂತೆ ವೃತ್ತ ಸಂಪೂರ್ಣವಾಗಿ ಕರೆಯಂತೆ ಬದಲಾಗುತ್ತದೆ. ಸಂತೇ ವೃತ್ತದಿಂದ ಮುಂದೆ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ನೂತನವಾಗಿ ನಿರ್ಮಾಣ ಮಾಡಿರುವ ರಸ್ತೆ ಮತ್ತು ಚರಂಡಿ ನೀರು ತುಮಕೂರು ವೃತ್ತದವರೆಗೆ ರಸ್ತೆಯಲ್ಲಿಯೇ ಹರಿಯುತ್ತದೆ.

ಟ್ರಾಫಿಕ್ ಸಮಸ್ಯೆ:

ಫುಟ್ ಪಾತ್ ಕಾಮಗಾರಿ ಆಗದೆ ಇರುವುದರಿಂದ ರಸ್ತೆಯಲ್ಲೇ ವಾಹನಗಳನ್ನು ಜನರು ನಿಲ್ಲಿಸಿರುತ್ತಾರೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ರಸ್ತೆಯಲ್ಲಿಯೇ ವಾಹನ ನಿಲ್ಲಿಸುವುದರಿಂದ ಬಸ್ಸು ಲಾರಿಗಳಂತಹ ದೊಡ್ಡ ವಾಹನಗಳಿಗೆ ಓಡಾಡಲು ತುಂಬಾ ತೊಂದರೆ ಆಗುತ್ತಿದೆ. ಇದರ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಶಾಸಕರು ಹಾಗೂ ಸಂಸದರ ಮೇಲೆ ಒತ್ತಡ ಹಾಕಿ ಕಾಮಗಾರಿಯನ್ನು ಚುರುಕುಗೊಳಿಸುವ ಕೆಲಸ ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಪಾದಚಾರಿ ರಸ್ತೆಗೆಂದು ಅಗೆದಿರುವ ಹಳ್ಳದಂತಹ ಜಾಗದಲ್ಲಿ ವೃದ್ಧರು ದಾಟಲಾರದೆ ಬಿದ್ದು ಏಟು ಮಾಡಿಕೊಂಡಿದ್ದಾರೆ. ನಿತ್ಯವೂ ಶಾಲೆ ಕಾಲೇಜಿಗೆಂದು ನೂರಾರು ಮಕ್ಕಳು ಇಲ್ಲಿ ಸಂಚರಿಸುತ್ತಾರೆ. ಎದ್ದು ಬಿದ್ದು ಹೋಗುವ ಸ್ಥಿತಿಯಾಗಿ ಕುದೂರು ಗ್ರಾಮದ ಮುಖ್ಯ ಬೀದಿ ರೂಪುಗೊಂಡಿದೆ ಎಂದು ಊರ ಹೊರಗಿನಿಂದ ವ್ಯಾಪಾರಕ್ಕೆಂದು ಬಂದ ಜನರು ಗ್ರಾಮದ ಆಡಳಿತಕ್ಕೆ ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ.ಕೋಟ್ ..........................

ಆಮೆ ಗತಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ವಿಪರೀತ ಧೂಳು ಹಾಗು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ. ಕೆಲಸ ಚುರುಕಾಗಿ ಇಂತಿಷ್ಟು ದಿನದೊಳಗೆ ಮುಗಿಸಬೇಕು ಎಂದು ನಿಗದಿಪಡಿಸಬೇಕು. ವರ್ಷವಾಗ್ತಾ ಬಂದರೂ ಕಾಮಗಾರಿ ಪೂರ್ಣಗೊಳಿಸಿಲ್ಲ.

- ಕೃಷ್ಣಪ್ರಸಾದ್, ಅಧ್ಯಕ್ಷರು, ವರ್ತಕರ ಸಂಘಕೋಟ್ .....................

ಚುನಾವಣೆ ಬಂದಾಗ ಕೊಡುವ ಆಶ್ವಾಸನೆಯನ್ನೇ ಜನರು ಸತ್ಯ ಎಂದುಕೊಳ್ಳಬಾರದು. ಮಾಡುವ ಕೆಲಸದ ಆಧಾರದ ಮೇಲೆ ಅಭಿವೃದ್ಧಿ ಅಳೆಯಬೇಕು. ಇಷ್ಟು ಚಿಕ್ಕ ರಸ್ತೆ ಕಾಮಗಾರಿ ವರ್ಷವಾದರೂ ಮುಗಿದಿಲ್ಲ. ದಿನವೂ ಇಲ್ಲಿನ ಜನರು ಧೂಳು ಕುಡಿದು ಬದುಕುತ್ತಿದ್ದಾರೆ.

- ಕೆ.ಆರ್.ಯತಿರಾಜು. ಮಾಜಿ ಅಧ್ಯಕ್ಷರು, ತಾಪಂ(ಫೋಟೋ ಕ್ಯಾಫ್ಷನ್‌)

ಕುದೂರು ಗ್ರಾಮದ ಮುಖ್ಯರಸ್ತೆಯಲ್ಲಿ ಬೆಳಗಿನ ಹೊತ್ತು ರಸ್ತೆಮೇಲೆ ದ್ವಿಚಕ್ರ ವಾಹನ.