ಹಂಪಿಯಲ್ಲಿ ಧೂಳಿನ ಸಿಂಚನ

| Published : Oct 23 2023, 12:15 AM IST

ಸಾರಾಂಶ

ವಿಶ್ವವಿಖ್ಯಾತ ಹಂಪಿಯಲ್ಲೀಗ ಧೂಳು ಏಳಲಾರಂಭಿಸಿದೆ. ದೇಶ- ವಿದೇಶಿ ಪ್ರವಾಸಿಗರು ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು, ಹಂಪಿಯಲ್ಲಿ ಓಡಾಡಲು ಸಾಧ್ಯವಾಗದೆ ಸುಸ್ತಾಗುತ್ತಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವವಿಖ್ಯಾತ ಹಂಪಿಯಲ್ಲೀಗ ಧೂಳು ಏಳಲಾರಂಭಿಸಿದೆ. ದೇಶ- ವಿದೇಶಿ ಪ್ರವಾಸಿಗರು ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು, ಹಂಪಿಯಲ್ಲಿ ಓಡಾಡಲು ಸಾಧ್ಯವಾಗದೆ ಸುಸ್ತಾಗುತ್ತಿದ್ದಾರೆ.

ಹಂಪಿಯಲ್ಲಿ ಗ್ರ್ಯಾವೆಲ್‌ ಹಾಕಿ ರಸ್ತೆಗಳನ್ನು ಪ್ರವಾಸಿಗರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾದ ಭಾರತೀಯ ಪುರಾತತ್ವ, ರಾಜ್ಯ ಪುರಾತತ್ವ, ಪ್ರವಾಸೋದ್ಯಮ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಈಗ ಸುಮ್ಮನಾಗಿವೆ. ರಸ್ತೆಗಳಲ್ಲಿ ಧೂಳು ಏಳುತ್ತಿದ್ದರೂ ಪ್ರವಾಸಿಗರ ಗೋಳು ಕೇಳುವವರಿಲ್ಲದಂತಾಗಿದೆ.

ಹಂಪಿಯಲ್ಲಿ ಬಸ್, ಕಾರು, ಬೈಕ್‌ಗಳಲ್ಲಿ ಪ್ರವಾಸಿಗರು ಬರುತ್ತಾರೆ. ಇನ್ನೂ ಕೆಲವರು ನಡೆದೇ ಹಂಪಿ ವೀಕ್ಷಣೆ ಮಾಡುತ್ತಾರೆ. ವಾಹನಗಳು ಎಬ್ಬಿಸುವ ಧೂಳಿನ ಹೊಡೆತಕ್ಕೆ ತತ್ತರಿಸುತ್ತಿರುವ ಪ್ರವಾಸಿಗರು, ಹಂಪಿ ಸ್ಮಾರಕಗಳನ್ನು ಸರಿಯಾಗಿ ನೋಡಲು ಆಗದೇ ತಮ್ಮ ಊರುಗಳತ್ತ ತೆರಳುವಂತಾಗಿದೆ.

ನಿಷ್ಕ್ರಿಯ ಪ್ರವಾಸೋದ್ಯಮ ಇಲಾಖೆ:

ಹಂಪಿಯಲ್ಲೇ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕಚೇರಿ ಇದೆ. ಆದರೆ, ಈ ಕಚೇರಿ ಬಳಿ ನೆಟ್ಟಗೆ ಪ್ರವಾಸಿಗರ ಮಾಹಿತಿಯೂ ಇಲ್ಲ. ವಾರ್ಷಿಕ ಎಷ್ಟು ದೇಶ- ವಿದೇಶಿ ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಾರೆ ಎಂಬ ನಿಖರ ಮಾಹಿತಿಯೂ ಈ ಇಲಾಖೆ ನೀಡುವುದಿಲ್ಲ. ಅಲ್ಲದೇ ಪ್ರವಾಸಿಗರಿಗೆ ಅಗತ್ಯ ಮಾಹಿತಿಯೂ ಇಲಾಖೆಯಿಂದ ಲಭ್ಯವಾಗುತ್ತಿಲ್ಲ. ಹಂಪಿ ಸೇರಿದಂತೆ ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಬೇಕಾದ ಇಲಾಖೆ ನಿಷ್ಕ್ರಿಯಗೊಂಡಿದೆ. ಹಂಪಿಗೆ ಆಗಮಿಸುವ ದೇಶ- ವಿದೇಶಿ ಪ್ರವಾಸಿಗರು ಕನಿಷ್ಠ ಮೂಲ ಸೌಕರ್ಯ ಇಲ್ಲದೇ ಪರದಾಡುತ್ತಿದ್ದರೂ ಇಲಾಖೆ ಮಾತ್ರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ.

ಹಂಪಿಯ ರಸ್ತೆಗಳಲ್ಲಿ ಧೂಳು ಏಳುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಮಾತ್ರ ತನ್ನ ಕರ್ತವ್ಯದಿಂದ ವಿಮುಖವಾಗುತ್ತಿದೆ. ಸಂಬಂಧಿಸಿದ ಇಲಾಖೆಗಳ ಜತೆಗೆ ಪತ್ರ ವ್ಯವಹಾರ ಮಾಡಿ, ಪ್ರವಾಸಿಗರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಾದ ಇಲಾಖೆಯೇ ನಿಷ್ಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ಈಗ ಹಂಪಿ ಪ್ರವಾಸಿಗರು ಧೂಳಿನಲ್ಲೇ ಸ್ಮಾರಕಗಳನ್ನು ವೀಕ್ಷಣೆ ಮಾಡಲು ತೆರಳುವ ಸ್ಥಿತಿ ನಿರ್ಮಾಣಗೊಂಡಿದೆ.

ಎಲ್ಲೆಲ್ಲಿ ಧೂಳಿನ ಸಿಂಚನ?:

ಹಂಪಿಯ ರಾಣಿಯರ ಸ್ನಾನಗೃಹದಿಂದ ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯ, ಪ್ರವಾಸೋದ್ಯಮ ಇಲಾಖೆ ಕಚೇರಿ, ನೆಲಸ್ತರದ ಶಿವಾಲಯದ ವರೆಗೂ ರಸ್ತೆಯಲ್ಲಿ ಧೂಳು ಏಳುತ್ತಿದೆ. ಜಿ- 20 ಶೃಂಗಸಭೆ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ತರಾತುರಿಯಲ್ಲಿ ದುರಸ್ತಿಗೊಳಿಸಲು ಹೋಗಿ ಪುರಾತತ್ವ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಗುತ್ತಿಗೆದಾರರು ಗ್ರ್ಯಾವೆಲ್‌ ಹಾಕದೇ ಬರೀ ಮಣ್ಣು ಹಾಕಿದ್ದರ ಫಲ, ಈಗ ಧೂಳು ಏಳಲಾರಂಭಿಸಿದೆ. ಧೂಳಿನ ಹೊಡೆತಕ್ಕೆ ದೇಶ- ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಆರೋಗ್ಯ ಹದಗೆಡಿಸಿಕೊಳ್ಳುವ ಸ್ಥಿತಿ ಬಂದೊದಗಿದೆ.

ಹಂಪಿಯ ಗೆಜ್ಜಲ ಮಂಟಪದಿಂದ ವಿಜಯ ವಿಠ್ಠಲ ದೇವಾಲಯದ ರಸ್ತೆಯಲ್ಲೂ ಧೂಳು ಏಳುತ್ತಿದೆ. ಈ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳು ಓಡಾಡುತ್ತವೆ. ಹಲವು ಪ್ರವಾಸಿಗರು ನಡೆದುಕೊಂಡೇ ಸ್ಮಾರಕಗಳನ್ನು ನೋಡಲು ಇಷ್ಟಪಡುತ್ತಾರೆ. ಈ ಧೂಳಿನ ಹೊಡೆತಕ್ಕೆ ಪ್ರವಾಸಿಗರು ಕಂಗಾಲಾಗುತ್ತಿದ್ದಾರೆ.

ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಕನಿಷ್ಠ ಉತ್ತಮವಾದ ರಸ್ತೆ ನಿರ್ಮಿಸಿಕೊಡಬೇಕೆಂಬ ವ್ಯವಧಾನ ಕೂಡ ಸಂಬಂಧಿಸಿದ ಇಲಾಖೆಗೆ ಇಲ್ಲದಂತಾಗಿದೆ. ಈ ರಸ್ತೆಗಳನ್ನು ಪಾರಂಪರಿಕ ಶೈಲಿಯಲ್ಲೇ ಉಳಿಸಿಕೊಂಡರೂ ಗ್ರ್ಯಾವೆಲ್‌ ಹಾಕಿ, ರಸ್ತೆಯನ್ನು ಒಪ್ಪವಾಗಿಟ್ಟರೆ ಉತ್ತಮ ಎಂಬುದು ಪ್ರವಾಸಿಗರ ಆಗ್ರಹವಾಗಿದೆ.ನೀರು ಸಿಂಪರಣೆ ಮಾಡಲಿ:

ಹಂಪಿಯ ರಾಣಿ ಸ್ನಾನಗೃಹದಿಂದ ನೆಲಸ್ತರದ ಶಿವಾಲಯ ಮತ್ತು ಗೆಜ್ಜಲ ಮಂಟಪದಿಂದ ವಿಜಯ ವಿಠ್ಠಲ ದೇವಾಲಯದವರೆಗೆ ನಿತ್ಯ ಎರಡು ಬಾರಿ ನೀರು ಸಿಂಪರಣೆ ಮಾಡಿದರೆ, ಅನುಕೂಲವಾಗಲಿದೆ ಎಂಬುದು ಪ್ರವಾಸಿಗರ ಒತ್ತಾಯವಾಗಿದೆ. ಧೂಳು ಏಳಲಾರದಂತೆ ನೀರು ಸಿಂಪರಣೆ ಮಾಡಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಹಂಪಿಯ ರಸ್ತೆಗಳಲ್ಲಿ ಧೂಳು ಏಳಲಾರಂಭಿಸಿದೆ. ಪ್ರಮುಖ ಸ್ಮಾರಕಗಳಿರುವ ಮಾರ್ಗದಲ್ಲೇ ಧೂಳು ಏಳುತ್ತಿದೆ. ಕಾರು. ಬೈಕ್‌, ಬಸ್‌ಗಳು ಹಾಗೂ ಬ್ಯಾಟರಿ ಚಾಲಿತ ವಾಹನಗಳ ಓಡಾಟದಿಂದ ಧೂಳು ಏಳುತ್ತಿದೆ. ನಡೆದುಕೊಂಡು ತೆರಳುವ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಧೂಳಿನಲ್ಲೇ ಸ್ಮಾರಕಗಳನ್ನು ವೀಕ್ಷಿಸುವ ಸ್ಥಿತಿ ಇದೆ ಎನ್ನುತ್ತಾರೆ ಪ್ರವಾಸಿಗರಾದ ರಾಮಕಿಶೋರ್‌, ಮೋಹನ್‌ರಾಜ್‌.