ಸಾರಾಂಶ
ದತ್ತ ಪಾದುಕೆಗಳಿಗೆ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ವೇದಮೂರ್ತಿ ಮಹೇಶ್‌ಭಟ್ಟ ಜೋಶಿ ಹಾಗೂ ತಂಡದವರಿಂದ ಸಂಕಲ್ಪ ಪಲ್ಲಕ್ಕಿ ಉತ್ಸವ, ತೊಟ್ಟಿಲು ಉತ್ಸವ, ಶ್ರೀಶಾರದಾ ಶಂಕರ ಭಕ್ತ ಭಜನಾ ಮಂಡಳಿಯವರಿಂದ ಭಜನೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು
ಗಂಗಾವತಿ: ದತ್ತ ನಾಮ ಸ್ಮರಣೆಯಿಂದ ಸಂಕಷ್ಟಗಳು ದೂರವಾಗಲಿವೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ಮಂಗಳವಾರ ನಗರದ ಶಾರದಾ ದೇವಸ್ಥಾನದಲ್ಲಿ 14ನೇ ವರ್ಷದ ಶ್ರೀದತ್ತ ಜಯಂತ್ಯುತ್ಸವ ಸಮಾರಂಭದ ಧರ್ಮಸಭೆ ಉದ್ದೇಶಿಸಿ ಮಾತನಾಡಿ, ಮಹಾಸತಿ ಅನುಸೂಯ ಹಾಗೂ ಅತ್ರಿಮುನಿ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀದತ್ತಾತ್ರೇಯ ಗುರುಗಳು ತ್ರಿಮೂರ್ತಿ ಅವತಾರಗಳಾಗಿ ಭಕ್ತರ ಸಂಕಷ್ಟ ದೂರ ಮಾಡಿದವರು. ಹುಟ್ಟಿದ ಜನ್ಮ ಸಾರ್ಥಕತೆಗೆ ಗುರುಚರಿತ್ರೆ ಪಾರಾಯಣ ಅವಶ್ಯವಾಗಿದ್ದು, ಇದರಿಂದ ಸುಖಿ ಸಮಾಜ ನಿರ್ಮಾಣ ಸಾಧ್ಯ. ಶ್ರೀಪಾದವಲ್ಲಭರಾಗಿ, ನರಸಿಂಹ ಸರಸ್ವತಿಯಾಗಿ, ನರಹರಿ ಅವತಾರಗಳಲ್ಲಿ ಇಂದಿಗೂ ಭಕ್ತ ಕೋಟೆಯನ್ನು ಅನುಗ್ರಹಿಸುತ್ತಾ ಬರುತ್ತಿದ್ದಾರೆ. ದತ್ತಾತ್ರೇಯ ಜನ್ಮದಿನ ಪ್ರತಿ ವರ್ಷ ಮಾರ್ಗಶಿರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಭಗವಾನ್ ದತ್ತಾತ್ರೇಯನನ್ನು ಗುರು ಸಂಪ್ರದಾಯದ ಆದಿಗುರು ಎಂದು ಪರಿಗಣಿಸಲಾಗುತ್ತದೆ. ಈ ಬಾರಿ ದತ್ತಾತ್ರೇಯನ ಜನ್ಮದಿನ ಡಿ. 26 ರಂದು ಮಂಗಳವಾರ ಆಚರಿಸಲಾಗುತ್ತದೆ. ನಾಳೆ ದತ್ತ ಜನ್ಮೋತ್ಸವ ಪ್ರಯುಕ್ತ ಎಂದಿನಂತೆ ಭಜನೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಸಿದ್ದಾಪುರ ಗ್ರಾಮದ ಸಿದ್ಧಿಪುರುಷ ಗೋಪಾಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಪೂರ್ವದಲ್ಲಿ ದತ್ತ ಪಾದುಕೆಗಳಿಗೆ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ವೇದಮೂರ್ತಿ ಮಹೇಶ್‌ಭಟ್ಟ ಜೋಶಿ ಹಾಗೂ ತಂಡದವರಿಂದ ಸಂಕಲ್ಪ ಪಲ್ಲಕ್ಕಿ ಉತ್ಸವ, ತೊಟ್ಟಿಲು ಉತ್ಸವ, ಶ್ರೀಶಾರದಾ ಶಂಕರ ಭಕ್ತ ಭಜನಾ ಮಂಡಳಿಯವರಿಂದ ಭಜನೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಜಗನ್ನಾಥರಾವ್ ಅಳವಂಡಿಕರ್, ರಾಘವೇಂದ್ರ ಅಳವಂಡಿಕರ್, ದತ್ತಾತ್ರೇಯ, ಶಂಕರ ಹೊಸಳ್ಳಿ, ಅಕ್ಷಯ ರಮೇಶ್ ಅಳವಂಡಿಕರ್, ಶ್ರೀನಿವಾಸ್ ಕರಮುಡಿ, ಬಾಲಕೃಷ್ಣ ದೇಸಾಯಿ, ಶ್ರೀಪಾದ ಮುಧೋಳಕರ್, ವೇಣು ಅಳವಂಡಿ, ಭಜನಾ ಮಂಡಳಿಯ ಸದಸ್ಯರುಗಳು ಪಾಲ್ಗೊಂಡಿದ್ದರು.