ಶಿಕ್ಷಕರ ವೃತ್ತಿಯೇ ಜಗತ್ತಿನ ಇತರೆ ಎಲ್ಲ ವೃತ್ತಿಗಳನ್ನು ಸೃಷ್ಟಿಸುವ ವೃತ್ತಿ. ಸ್ವಾತಂತ್ರ್ಯ ಹೋರಾಟಗಾರರು, ಪ್ರಾಧ್ಯಾಪಕರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಹಾಗೂ ಗುರುಗಳ ಕೊಡುಗೆ ಮಹತ್ವದ್ದಾಗಿದೆ.
ಧಾರವಾಡ:
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಶೇ.20ಕ್ಕಿಂತಲೂ ಕಡಿಮೆ ಇದ್ದು, ಇಂದು ಶೇ. 75ರಷ್ಟಾಗಿದೆ. ಆದರೆ, ದೇಶದ ವಿವಿಧ ವ್ಯವಸ್ಥೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ನಗರದ ವಿದ್ಯಾವರ್ದಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾ ಆಡಳಿತವು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಉದ್ಘಾಟಿಸಿದ ಅವರು, ಶಿಕ್ಷಕರ ವೃತ್ತಿಯೇ ಜಗತ್ತಿನ ಇತರೆ ಎಲ್ಲ ವೃತ್ತಿಗಳನ್ನು ಸೃಷ್ಟಿಸುವ ವೃತ್ತಿ. ಸ್ವಾತಂತ್ರ್ಯ ಹೋರಾಟಗಾರರು, ಪ್ರಾಧ್ಯಾಪಕರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಹಾಗೂ ಗುರುಗಳ ಕೊಡುಗೆ ಮಹತ್ವದ್ದಾಗಿದೆ ಎಂದರು.ಶಿಕ್ಷಣವೆಂದರೆ ಕೇವಲ ಪಾಠ ಬೋಧಿಸುವುದಲ್ಲ. ಮಕ್ಕಳಲ್ಲಿ ನೈತಿಕತೆ, ಕೃತಜ್ಞತೆ, ಮಾನವೀಯ ಮೌಲ್ಯ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು. ದೇಶದ ಸಂವಿಧಾನವನ್ನು ಗೌರವಿಸಿ, ಯಾವುದೇ ರಾಜಕೀಯ ಪಕ್ಷದ ಪರವಾಗಿ ನಿಲ್ಲದೆ ಆತ್ಮಸಾಕ್ಷಿಯಿಂದ ಮಕ್ಕಳಿಗೆ ದೇಶದ ಗೌರವ ಮತ್ತು ಇತಿಹಾಸವನ್ನು ಸರಿಯಾಗಿ ತಿಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶಿಕ್ಷಕರಿಗೆ ಯುವಪೀಳಿಗೆಯನ್ನು ಪ್ರಭಾವಿಸುವ, ಪ್ರೇರೇಪಿಸುವ ಹಾಗೂ ಸಮಾಜದಲ್ಲಿ ಉತ್ತಮ ಆಲೋಚನೆಗಳನ್ನು ರೂಪಿಸುವ ಶಕ್ತಿ ಇದೆ ಎಂದು ಹೇಳಿದರು.ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ. ಮಕ್ಕಳಿಗೆ ಕೇವಲ ವಿದ್ಯೆ ನೀಡಿ ಉದ್ಯೋಗಕ್ಕೆ ಸಿದ್ಧಪಡಿಸುವುದಷ್ಟೇ ಶಿಕ್ಷಣದ ಉದ್ದೇಶವಾಗಬಾರದು. ಮಕ್ಕಳಲ್ಲಿ ನೈತಿಕ ಮೌಲ್ಯಗಳು ಹಾಗೂ ಉತ್ತಮ ಸಂಸ್ಕಾರ ಬೆಳೆಸುವುದಕ್ಕೂ ಆದ್ಯತೆ ನೀಡಬೇಕು ಎಂದರು.ಜಿಲ್ಲಾಧಿಕಾರಿ ಸ್ನೇಹಲ್. ಆರ್ ಮಾತನಾಡಿದರು. ಡಿಡಿಪಿಐ ಉಮೇಶ ಬಮ್ಮಕ್ಕನವರ ಸ್ವಾಗತಿಸಿದರು. ಮಾಜಿ ಸಂಸದರು ಐ.ಜಿ. ಸನದಿ, ಪ್ರಕಾಶ ಹಳಿಯಾಳ, ಜಿಪಂ ಸಿಇಒ ಭುವನೇಶ ಪಾಟೀಲ್, ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ಎಂ.ಎಸ್. ಹುಡೆದಮನಿ ಇದ್ದರು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.