ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಮೈಸೂರು ವಿಭಾಗಿಯ ಕಚೇರಿ ವತಿಯಿಂದ ಕೊಡಗು ಜಿಲ್ಲಾಧಿಕಾರಿಯವರ ಕಚೇರಿ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ದಾಖಲೆಗಳ ಅಧಿನಿಯಮ-2010 ಮತ್ತು ನಿಯಮಗಳು-2013 ಹಾಗೂ ದಾಖಲೆಗಳ ನಿರ್ವಹಣೆ ಕುರಿತು ಕಾರ್ಯಾಗಾರ ನಡೆಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಉದ್ಘಾಟಿಸಿ ಮಾತನಾಡಿ ಸಕಾಲ, ಆರ್‌ಟಿಐ, ಸೇವಾಸಿಂಧು ಯೋಜನೆಗಳಿಂದ ಸಾರ್ವಜನಿಕರಿಗೆ ಸರ್ಕಾರಿ ಇಲಾಖೆಗಳ ಕಡತ/ ದಾಖಲೆಗಳನ್ನು ಸುಲಭವಾಗಿ ಪಡೆಯಲು ಮುಕ್ತ ಅವಕಾಶವಿದೆ. ಇಂತಹ ಸಂದರ್ಭದಲ್ಲಿ ದೈನಂದಿನ ಕಚೇರಿ ಕಡತಗಳ ನಿರ್ವಹಣೆ ಅಗತ್ಯವಾಗಿದೆ. ಸರ್ಕಾರಿ ಕಡತಗಳನ್ನು ಸಾರ್ವಜನಿಕ ಉದ್ದೇಶದಿಂದ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕರಾದ ಡಾ.ಗವಿಸಿದ್ದಯ್ಯ ಮಾತನಾಡಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ನಾಡು ನುಡಿಗೆ ಸಂಬಂಧಿಸಿದ ಐತಿಹಾಸಿಕ ಮಹತ್ವದ ದಾಖಲೆ ಸಂಗ್ರಹಿಸಿ ಸಂರಕ್ಷಣೆ ಮಾಡುತ್ತ ಬರುತ್ತಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಎಲ್ಲಾ ಇಲಾಖೆಯ ಕಚೇರಿಗಳ ಕಡತಗಳ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಾರ್ವಜನಿಕ ದಾಖಲೆಗಳ ಅಧಿನಿಯಮ-ಜಾರಿಗೊಳಿಸಲಾಗಿದೆ.ಈ ಅಧಿನಿಯಮ ಮತ್ತು ನಿಯಮವನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ರಾಜ್ಯ ಪತ್ರಾಗಾರ ಇಲಾಖೆ ಇಂತಹ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಶಿಬಿರಾರ್ಥಿಗಳು ತಮ್ಮ ದೈನಂದಿನ ಕರ್ತವ್ಯ ನಿರ್ವಹಣೆಯಲ್ಲಿ ಅಧಿನಿಯಮ ಮತ್ತು ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
ಉಪ ನಿರ್ದೇಶಕರಾದ ಡಾ.ನೆಲ್ಕುದ್ರಿ ಸದಾನಂದಪ್ಪ ಅವರು ಮಾತನಾಡಿ ಆರ್.ಟಿ.ಐ., ಸಕಾಲ ಯೋಜನೆಗಳ ನಿರ್ವಹಣೆಯಲ್ಲಿ ಎದುರಿಸುವ ಸವಾಲು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಂತಹ ತರಬೇತಿ ಕಾರ್ಯಕ್ರಮಗಳ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದರು.ಸಾರ್ವಜನಿಕರಿಗೆ ಹಾಗೂ ಮುಂದಿನ ಪೀಳಿಗೆಗೆ ಅವಶ್ಯವೆನಿಸುವ ದಾಖಲೆಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರಿ ನೌಕರರ ಕರ್ತವ್ಯವಾಗಿರುವುದರಿಂದ ಹಾಗೂ ಕಡತಗಳ ನಿರ್ವಹಣೆಗಾಗಿ ಸಾರ್ವಜನಿಕ ದಾಖಲೆಗಳ ಅಧಿನಿಯಮ ಜಾರಿಗೊಳಿಸಿರುವುದರಿಂದ ದೈನಂದಿನ ಕಚೇರಿ ಕಡತಗಳ ನಿರ್ವಹಣೆಯಲ್ಲಿ ನಿಯಮಗಳನ್ನು ಪಾಲಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಅವರು ವಿವರಿಸಿದರು.
ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಹೆಚ್.ಎಲ್ ಅವರು ಕಾರ್ಯಕ್ರಮದ ಆಯೋಜನೆಯ ಉದ್ದೇಶ ಹಾಗೂ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದ ಆಶಯ ಕುರಿತು ಮಾತನಾಡಿದರು.ರಾಜ್ಯ ಪತ್ರಾಗಾರ ಇಲಾಖೆ ಐತಿಹಾಸಿಕ ಮಹತ್ವದ ದಾಖಲೆಗಳ ನಿರ್ವಹಣೆ ಮಾಡುತ್ತಿದೆ. ಪತ್ರಾಗಾರ ಸಂಗ್ರಹದಲ್ಲಿರುವ ದಾಖಲೆಗಳು ಸಾರ್ವಜನಿಕರಿಗೆ, ಸರ್ಕಾರಿ ಇಲಾಖೆಯವರಿಗೆ ಹಾಗೂ ಸಂಶೋಧಕರುಗಳಿಗೆ ಉಪಯೋಗವಾಗುತ್ತಿದೆ. ಇಂದಿನ ಕಡತಗಳು ಮುಂದಿನ ಪೀಳಿಗೆಗೆ ಹಾಗೂ ಚರಿತ್ರೆಯ ಬರವಣಿಗೆಗೆ ಐತಿಹಾಸಿಕ ದಾಖಲೆಗಳಾಗಿ ಬಳಕೆಯಾಗುತ್ತವೆ. ಹಾಗಾಗಿ ನಾವು ಪ್ರತಿದಿನ ಆರಂಭಿಸುವ ಕಡತಗಳು ಮುಂದಿನ ತಲೆಮಾರಿಗೆ ಉಪಯುಕ್ತವಾಗಲಿವೆ. ಆ ಕಾರಣಕ್ಕಾಗಿ ಅವುಗಳ ನಿರ್ವಹಣೆಯ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಿದ್ದು ಇದರ ಸದುಪಯೋಗವನ್ನು ತಾವೆಲ್ಲ ಪಡೆಯಬೇಕು ಎಂದು ಕೋರಿದರು.
ಕೊಡಗು ಜಿಲ್ಲೆಯ ವಿವಿಧ ಇಲಾಖೆಗಳ 80 ಕ್ಕೂ ಹೆಚ್ಚು ಅಧಿಕಾರಿ/ನೌಕರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ರಾಜ್ಯ ಪತ್ರಾಗಾರ ಇಲಾಖೆಯ ಅಧಿಕಾರಿಗಳು ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದರು. ನಿರ್ದೇಶಕರಾದ ಡಾ. ಗವಿಸಿದ್ದಯ್ಯ ಅವರು ಸಾರ್ವಜನಿಕ ದಾಖಲೆಗಳ ಅಧಿನಿಯಮ ಮತ್ತು ದಾಖಲೆಗಳ ಪಟ್ಟಿಸೂಚಿ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು.ಪತ್ರಾಗಾರ ಇಲಾಖೆ ಉಪ ನಿರ್ದೇಶಕರಾದ ಡಾ.ನೆಲ್ಕುದ್ರಿ ಸದಾನಂದ ಅವರು ದಾಖಲೆಗಳ ವರ್ಗೀಕರಣ ಮತ್ತು ಅವಧಿ ಮೀರಿದ ಕಡತಗಳ ನಾಶಪಡಿಸುವಿಕೆಯ ನಿಯಮಗಳ ಕುರಿತು ವಿವರಿಸಿದರು.
ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಹೆಚ್.ಎಲ್.ಅವರು ದಾಖಲೆಗಳ ಸಂರಕ್ಷಣೆಯಲ್ಲಿ ದಾಖಲೆಗಳ ಡಿಜಿಟಲೀಕರಣ ಮತ್ತು ಟಿಷ್ಯೂ ಲ್ಯಾಮಿನೇಷನ್, ತಾಂತ್ರಿಕಾಧಿಕಾರಿ ಕೆ.ನಾರಾಯಣ ಬಾಬು ಅವರು ದಾಖಲೆಗಳ ಸಂರಕ್ಷಣೆಯಲ್ಲಿ ಸೂಕ್ಷ್ಮ ಚಿತ್ರೀಕರಣ ಹಾಗೂ ದಾಖಲೆ ಸಹಾಯಕರಾದ ಕೃಷ್ಣ ಪ್ರಸಾದ್ ಅವರು ದಾಖಲೆ ಕೊಠಡಿಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.