ಅಲ್ಲಮಪ್ರಭುಗಳ ಶೂನ್ಯ ಸಿಂಹಾಸನವೆಂದರೆ ಎರಡು ಪದಗಳಿಂದ ಕೂಡಿದ ಶೂನ್ಯ ನಿರಾಕಾರವಾಗಿದೆ

ಕುಕನೂರು: ಸಾಹಿತಿ ಡಿವಿಜಿ ಅವರ ಕಗ್ಗ ಜೀವನದ ದಾರಿದೀಪ ಎಂದು ಇಟಗಿ ಮಹೇಶ್ವರ ಕಾಲೇಜಿನ ನಿವೃತ್ತ ಉಪನ್ಯಾಸಕ ಎಸ್.ಎಂ. ಹಿರೇಮಠ ಹೇಳಿದರು.

ಪಟ್ಟಣದ ಇಟಗಿ ಶ್ರೀ ಭೀಮಾಂಭೀಕಾ ದೇವಸ್ಥಾನ ಆವರಣದಲ್ಲಿ ಗುರುವಾರ ಸಂಜೆ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಯುಗಾದಿ ಸಂಭ್ರಮ ಮತ್ತು ಸಾಹಿತ್ಯ ದಿಗ್ಗಜ ಡಿವಿಜಿ, ವಚನಕಾರ ಅಲ್ಲಮಪ್ರಭು ಜಯಂತಿ ನಿಮಿತ್ತ ಜರುಗಿದ ಉಪನ್ಯಾಸ ಮತ್ತು ಗಾಯನೋತ್ಸವದ ಕಾಯ೯ಕ್ರಮದಲ್ಲಿ ಡಿವಿಜಿ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಂಕು ತಿಮ್ಮನ ಕಗ್ಗದ ಹೆಸರಿನಲ್ಲಿ ಸುಮಾರು 945 ಕಗ್ಗಗಳನ್ನು ವಿವಿಧ ಆಯಾಮಗಳ ಮೂಲಕ ಬರೆದು ಜನ ಮನ್ನಣೆ ಗಳಿಸಿದ್ದಾರೆ. ಓದುಗರ ಮನಕ್ಕೆ ಧೈಯ೯ ತುಂಬುವ ಕಗ್ಗ ಬರೆದಿದ್ದು, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕ್ಲಾಸಿಕ್ ಶೈಲಿಯ ಕಗ್ಗಗಳು ಪ್ರಮುಖವಾಗಿವೆ, ಎಸ್ಸೆಸ್ಸೆಲ್ಸಿವರೆಗೆ ಓದಿರುವ ಸಾಮಾನ್ಯ ವ್ಯಕ್ತಿಯಾಗಿದ್ದ ಡಿವಿಜಿ ಆಳವಾದ ಸಾಹಿತ್ಯಕ್ಕೆ ಜ್ಞಾನಪೀಠ ಸಹ ಸಲ್ಲಬೇಕಿದೆ ಎಂದರು.

ಅನುಭವ ಮಂಟಪದ ಪೀಠಾಧ್ಯಕ್ಷ ಹಾಗೂ ವಚನಕಾರ ಅಲ್ಲಮಪ್ರಭು ಕುರಿತು ಅಧ್ಯಕ್ಷತೆ ವಹಿಸಿದ್ದ ತತ್ವಪದಕಾರ ಆರ್. ಪಿ. ರಾಜೂರ ಮಾತನಾಡಿ, ಅಲ್ಲಮಪ್ರಭುಗಳ ಶೂನ್ಯ ಸಿಂಹಾಸನವೆಂದರೆ ಎರಡು ಪದಗಳಿಂದ ಕೂಡಿದ ಶೂನ್ಯ ನಿರಾಕಾರವಾಗಿದೆ. ಯಾವುದು ಇಲ್ಲದ್ದು ಶರೀರದಲ್ಲಿ ಒಳಗೊಂಡಿರುವುದೋ ಅದು ಜಡ ವಸ್ತು. ಸಿಂಹಾಸನ ನಶಿಸಿ ಶರೀರ ಸಿಂಹಾಸನವೇ ಶಾಶ್ವತ ಎಂಬುದು ಅಲ್ಲಮಪ್ರಭುಗಳ ಧ್ಯೇಯ. ಡಿ.ವಿ.ಗುಂಡಪ್ಪ ಹಾಗೂ ಅಲ್ಲಮಪ್ರಭುಗಳು ಇಬ್ಬರೂ ಪಾರಮಾಥಿ೯ಕವಾಗಿ ಬಾಳಿ ಬದುಕಿದ ಧೀಮಂತ ಮಹಾತ್ಮರು ಎಂದು ಸ್ಮರಿಸಿದರು.

ಹಿರಿಯ ರಂಗ ಭೂಮಿ ಕಲಾವಿದ ಸಿದ್ಧಲಿಂಗಯ್ಯ ಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಂಥ ವೇದಿಕೆಗಳ ಮೂಲಕ ಸಮಾಜಕ್ಕೆ ಹೊಸ ಸಂದೇಶ ನೀಡಲು ಕಾರ್ಯಕ್ರಮ ಸಹಕಾರಿಯಾಗುತ್ತವೆ. ಎಲ್ಲ ಮನಸು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸಬೇಕು ಎಂದರು.

ಹಿರಿಯ ಸಾಹಿತಿ ವೀರಣ್ಣ ವಾಲಿ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಳಕಪ್ಪ ಕುಂಬಾರ ಮಾತನಾಡಿದರು.

ಭೂ ನ್ಯಾಯ ಮಂಡಳಿ ಸದಸ್ಯ, ವಕೀಲ ಬಸವರಾಜ ಜಂಗಲಿ, ನಿವೃತ್ತ ಉಪನ್ಯಾಸಕ ಲಕ್ಷ್ಮಣ ಬೇದವಟ್ಟಿ, ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕ ಕನಕರಾಯ ಭಜಂತ್ರಿ , ವಕೀಲ ಅಡಿವೆಪ್ಪ ಬೋರಣ್ಣವರ, ರಮೇಶ ಗಜಕೋಶ ಇತರರಿದ್ದರು.

ಗಾಯಕ ಮೇಘರಾಜ ಜಿಡಗಿ,ವೀರಪ್ಪ ನವಲಗುಂದ ಗಾಯನ ಪ್ರಸ್ತುತ ಪಡಿಸಿದರು. ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಬಸವರಾಜ್ ಉಪ್ಪಿನ ಸ್ವಾಗತಿಸಿ ನಿರೂಪಿಸಿದರು.