ಯಲಬುರ್ಗಾ: ಕನ್ನಡದ ಖ್ಯಾತ ಚಿಂತಕ,ಹಿರಿಯ ಸಾಹಿತಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಡಿವಿಜಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಿದೆ ಎಂದು ತಾಳಿಕೋಟಿ ವಿಭೂತಿಮಠದ ಶ್ರೀ ಮಹಾಂತ ದೇವರು ಹೇಳಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯ ಸಾಹಿತಿ ಹಾಗೂ ಕಕಾನಿ ಪತ್ರಕರ್ತರ ಸಂಘ ಸಂಸ್ಥಾಪಕ ಅಧ್ಯಕ್ಷ ಡಿ.ವಿ.ಗುಂಡಪ್ಪ ಜನ್ಮದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಡಿವಿಜಿ ಪತ್ರಿಕೋದ್ಯಮವನ್ನು ಕೇವಲ ವೃತ್ತಿಯೆಂದು ನೋಡದೇ,ಸಮಾಜದ ಹಿತಾಸಕ್ತಿ ಕಾಪಾಡುವ ಮಹತ್ತರ ಸೇವೆಯೆಂದು ಪರಿಗಣಿಸಿದರು.ಪತ್ರಕರ್ತರು ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂಬ ತತ್ವ ಪ್ರತಿಪಾದಿಸಿದರು. ಸಮಾಜದ ಸಮಸ್ಯೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರವಹಿಸುತ್ತಾರೆ ಎಂಬುದನ್ನು ತಮ್ಮ ಬರಹಗಳು ಮತ್ತು ಚಿಂತನೆಗಳ ಮೂಲಕ ಸ್ಪಷ್ಟಪಡಿಸಿದರು.

ಪತ್ರಕರ್ತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದಲೇ ಪತ್ರಕರ್ತರ ಸಂಘಟನೆ ಸ್ಥಾಪನೆಗೆ ಮುಂದಾಗಿ, ನಂತರದಲ್ಲಿ ರಾಜ್ಯ ಮಟ್ಟದಲ್ಲಿ ಬೆಳೆಯುವಂತೆ ಮಾಡಿದ್ದು ಅವರ ದೂರದೃಷ್ಟಿ ತೋರಿಸುತ್ತದೆ.ಇದರ ಫಲವಾಗಿ ಇಂದು ಸಾವಿರಾರು ಪತ್ರಕರ್ತರು ಸಂಘಟಿತವಾಗಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳುವಂತಾಗಿದೆ. ಡಿವಿಜಿ ಪತ್ರಿಕೋದ್ಯಮದಲ್ಲಿ ನೈತಿಕತೆ, ಸತ್ಯನಿಷ್ಠೆ ಮತ್ತು ಸಾರ್ವಜನಿಕ ಹೊಣೆಗಾರಿಕೆಗೆ ಆದ್ಯತೆ ನೀಡಿದರು. ಅವರ ಆದರ್ಶ ಇಂದಿಗೂ ಪತ್ರಕರ್ತರಿಗೆ ಮಾರ್ಗದರ್ಶಕವಾಗಿದ್ದು, ಪತ್ರಿಕೋದ್ಯಮದ ಗೌರವ ಉಳಿಸಲು ಪ್ರೇರಣೆಯಾಗಿವೆ. ಕನ್ನಡ ಸಾಹಿತ್ಯ, ಸಮಾಜ ಚಿಂತನೆ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಚಿಂತನೆ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದರು.

ಸಂಘದ ಗೌರವಾಧ್ಯಕ್ಷ ಇಮಾಮ್ ಸಂಕನೂರು ಮಾತನಾಡಿದರು.ಸಂಘದ ತಾಲೂಕಾಧ್ಯಕ್ಷ ಮಲ್ಲು ಮಾಟರಂಗಿ ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರಶೇಖರ ಮರದಡ್ಡಿ, ಉಮಾಶಂಕರ ಹಿರೇಮಠ, ಪ್ರ. ಕಾರ್ಯದರ್ಶಿ ಸಂತೋಷ ಬಂಡ್ರಿ, ಜಿಲ್ಲಾ ಕಾರ್ಯಕರಾಣಿ ಸದಸ್ಯ ಮಹಾಂತೇಶ ಛಲವಾದಿ, ಶರಣು ಗುಮಗೇರಿ, ದೊಡ್ಡಬಸಪ್ಪ ಹಕಾರಿ, ಅನಿಲಕುಮಾರ ಕಲಭಾವಿ, ತಾಲೂಕು ಕಾರ್ಯಕಾರಿಣಿ ಸದಸ್ಯ ಫಾಲಾಕ್ಷಪ್ಪ ತಿಪ್ಪಳ್ಳಿ, ಶಿವಪುತ್ರಯ್ಯ ಹಿತ್ತಲಮನಿ, ಬಾಳನಗೌಡ ಪಾಟೀಲ, ಮಂಜು ರಾಜೋಳ್ಳಿ, ಮಾನವ ಬಂಧುತ್ವ ವೇದಿಕೆಯ ಭೀಮಣ್ಣ ಹವಳಿ, ಹನುಮಂತ ಭಜೆಂತ್ರಿ ಹಾಗೂ ನಿವೃತ್ತ ನೌಕರರು ಇದ್ದರು.