ಸರ್ಕಾರ 5 ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಬರಿದು ಮಾಡಿದೆ: ಎಚ್‌ಡಿಕೆ

| Published : Apr 22 2024, 02:02 AM IST

ಸರ್ಕಾರ 5 ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಬರಿದು ಮಾಡಿದೆ: ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಾಸರಹಳ್ಳಿ ಕ್ಷೇತ್ರದಲ್ಲಿ ಎಚ್‌ಡಿಕೆ, ಡಿವಿಎಸ್ ರೋಡ್ ಶೋ ಮಾಡಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದೆ ಕೇವಲ 5 ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ಸಂಪೂರ್ಣ ಬರಿದು ಮಾಡಿ ಮುಂದಿನ ದಿನಗಳಲ್ಲಿ ನಿಮ್ಮನ್ನ ಸಾಲಗಾರರನ್ನಾಗಿ ಮಾಡುವುದೇ ಸರ್ಕಾರದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಬಾಗಲಗುಂಟೆಯ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ದಾಸರಹಳ್ಳಿ, ಚೊಕ್ಕಸಂದ್ರ, ಪೀಣ್ಯ 2ನೇ ಹಂತ, ಹೆಗ್ಗನಹಳ್ಳಿ ಸುಂಕದಕಟ್ಟೆವರೆಗೂ ರೋಡ್ ಶೋ ಭಾಗವಹಿಸಿ ಮಾತನಾಡಿದರು.

ಐದು ಗ್ಯಾರಂಟಿ ಕಾರ್ಯಕ್ರಮಗಳ ಹೆಸರಿನಲ್ಲಿ ₹1.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಿಮಗೆ ಕೊಡುವ ₹2 ಸಾವಿರಕ್ಕೆ ಮಾಡಿರುವ ಸಾಲ ತೀರಿಸುವವರಾರು? ಅದನ್ನು ನೀವೇ ತೀರಿಸಬೇಕಾಗುತ್ತದೆ. ಇವತ್ತು ರಾಜ್ಯದಲ್ಲಿ ಒಬ್ಬೊಬ್ಬ ವ್ಯಕ್ತಿಯ ಮೇಲೆ ₹36ಸಾವಿರ ಸಾಲದ ಹೊರೆ ಹೊರಿಸಿದ್ದಾರೆ. 2 ಸಾವಿರ ಕೊಡುತ್ತಾರೆ ಎಂದು ಖುಷಿ ಪಟ್ಟರೆ ಮುಂದೆ ದೊಡ್ಡಬೆಲೆ ತೆರಬೇಕಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ತೀರ್ಮಾನ ಮಾಡಿ ಮತನೀಡಿ ಎಂದರು.

ಕಾಂಗ್ರೆಸ್ ಹಲವಾರು ರೀತಿಯ ಆಮಿಷಗಳನ್ನು ಒಡ್ದುತ್ತಿದೆ. ಅದು ವೈಯಕ್ತಿಕವಾಗಿ ಸರ್ಕಾರದ ತೆರಿಗೆ ಹಣವನ್ನು ದುರುಪಯೋಗ ಮಾಡಿ ಎರಡು ದಿನಗಳಿಂದ ಪತ್ರಿಕೆಗಳಲ್ಲಿ ಕೊಡುತ್ತಿರುವ ಜಾಹೀರಾತು ಈ ನಾಡಿನ ಜನತೆಯ ತೆರಿಗೆ ಹಣ. ಅದನ್ನು ಲೂಟಿ ಮಾಡಿ ಇವತ್ತು ಖಾಲಿ ಚೊಂಬನ್ನು ಪ್ರದರ್ಶಿಸಿದ್ದೇವೆ ಎಂಬುದನ್ನು ತೋರಿಸಿದ್ದಾರೆ. ಈ ದೇಶ, ರಾಜ್ಯವನ್ನು ಯಾವ ಮಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆಂದು ನೀವು ಆಲೋಚಿಸಬೇಕು ಎಂದು ತಿಳಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಕೊಟ್ಟ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಬಹುಶಃ ಬಿಜೆಪಿ ಹಾಗೂ ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ ಹಲವಾರು ರೀತಿಯ ತೀರ್ಮಾನ ತೆಗೆದುಕೊಂಡಿದ್ದು ದೇವೇಗೌಡರು. ಅವರು ಕಾವೇರಿಯ ಒಂಬತ್ತು ಟಿಎಂಸಿ ನೀರನ್ನು ಬೆಂಗಳೂರು ನಗರಕ್ಕೆ ಕೊಡುವ ನಿರ್ಧಾರ ಮಾಡಿದ್ದರಿಂದ ಅಲ್ಲಲ್ಲಿ ಸ್ವಲ್ಪ ನೀರು ದೊರಕುತ್ತಿದೆ ಎಂದರು.

ಇದೇ ಕಾಂಗ್ರೆಸ್ ಪಕ್ಷ ‘ನಮ್ಮ ನೀರು ನಮ್ಮ ಹಕ್ಕು’ ಅಂತ ಹೇಳಿ ಮೇಕೆದಾಟುವರೆಗೂ ಪಾದಯಾತ್ರೆ ಮಾಡಿ ಈಗ ''''ನಮ್ಮ ನೀರು ತಮಿಳುನಾಡಿನ ಹಕ್ಕು'''' ಎಂದು ತಮಿಳುನಾಡಿಗೆ ಎತೇಚ್ಛವಾಗಿ ನೀರು ಬಿಡುವ ಮುಖಾಂತರ ನೀರಿನ ಹಾಹಾಕಾರ ಉಂಟಾಗಿದೆ ಎಂದರು.

ಸಂಸದ ಡಿ.ವಿ. ಸದಾನಂದಗೌಡ ಮಾತನಾಡಿ, ಕಳೆದ ಹಲವಾರು ಲೋಕಸಭೆಯಲ್ಲಿ ಗೆದ್ದಿದ್ದೇವೆ. ಇವತ್ತು ಒಂದು ಹೊಸ ಅಧ್ಯಾಯ ಏನೆಂದರೆ ಲೂಟಿ ಕೋರ ಕಾಂಗ್ರೆಸ್ ನಿರ್ಮೂಲನೆ ಮಾಡಬೇಕು. ರಾಜ್ಯಾದ್ಯಂತ ಮೈತ್ರಿ ಪಕ್ಷದಿಂದ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಈ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಅಧಿಕ ಅಂತರದಿಂದ ಶೋಭಾ ಕರಂದ್ಲಾಜೆ ಅವರು ಗೆಲ್ಲುತ್ತಾರೆ ಎಂದರು.

ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿದರು. ಶಾಸಕ ಎಸ್. ಮುನಿರಾಜು, ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಅಂದಾನಪ್ಪ, ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ. ಮುನಿಸ್ವಾಮಿ, ಟಿ.ಎಸ್. ಗಂಗರಾಜು , ಎಂ. ಮುನೇಗೌಡ, ಮಂಡಲ ಅಧ್ಯಕ್ಷ ಸೋಮಶೇಖರ್,ಶೆಟ್ಟಿಹಳ್ಳಿ ಸುರೇಶ್, ಬಾಗಲಗುಂಟೆ ವಾರ್ಡ್ ಜೆಡಿಎಸ್ ಅಧ್ಯಕ್ಷ ಹನುಮಂತ ರಾಯಪ್ಪ, ಪಿ.ಎಚ್. ರಾಜು, ಭರತ್ ಸೌಂದರ್ಯ, ಬಿ.ಎಂ. ಕೃಷ್ಣ, ಭರತ್ ಗುಂಡಪ್ಪ ,ಸುಜಾತ ಮುನಿರಾಜು, ಗುರುನಿಶ್ಚಲ್, ಅನಿಲ್ ಕುಮಾರ್, ಸತೀಶ್.ಬಿ.ಅರ್. ಮುಂತಾದವರಿದ್ದರು.