ಇಂದಿನಿಂದ ದ್ಯಾಮವ್ವ ದೇವಿಯ ಜಾತ್ರಾ ವೈಭವ ಆರಂಭ

| Published : Apr 09 2024, 12:46 AM IST

ಸಾರಾಂಶ

ಆರೂವರೆ ದಶಕಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ವೈಭವ ಇಂದಿನಿಂದ ಮರುಕಳಿಸಲಿದ್ದು, ಅದ್ಧೂರಿ ಜಾತ್ರೆಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ.

65 ವರ್ಷಗಳ ಬಳಿಕ ನಡೆಯುತ್ತಿರುವ ಜಾತ್ರೆ । ಅದ್ಧೂರಿ ಆಚರಣೆಗೆ ಎಲ್ಲ ಸಿದ್ಧತೆ ಪೂರ್ಣಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಆರೂವರೆ ದಶಕಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ವೈಭವ ಇಂದಿನಿಂದ ಮರುಕಳಿಸಲಿದ್ದು, ಅದ್ಧೂರಿ ಜಾತ್ರೆಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ.

65 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಜಾತ್ರೆಯನ್ನು ಪುನಃ ಆರಂಭ ಮಾಡಬೇಕೆಂದುಕೊಂಡ ಭಕ್ತರು ಏ.9 ರಿಂದ ಏ.20 ರವರೆಗೆ 11 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಈಗ ಜಾತ್ರೆ ಆಚರಣೆಗೆ ಪಟ್ಟಣ ಸಜ್ಜುಗೊಂಡಿದೆ.

ಬೆಳ್ಳಿಮೂರ್ತಿ ಪ್ರತಿಷ್ಠಾಪನೆ:

ಈಗಾಗಲೇ ವಿವಿಧ ಗ್ರಾಮಗಳ ಭಕ್ತರು ನೂರಕ್ಕೂ ಅಧಿಕ ಎತ್ತಿನ ಬಂಡಿಗಳಲ್ಲಿ ಹಂದರ ತಪ್ಪಲುವನ್ನು ತಂದಿದ್ದು, ದೇವಸ್ಥಾನದ ಆವರಣವನ್ನು ಅಲಂಕರಿಸಲಾಗಿದೆ. ಜಾತ್ರಾ ಮಹೋತ್ಸವ ಹಿನ್ನೆಲೆ ಸುಮಾರು ₹7.50 ಲಕ್ಷ ವೆಚ್ಚದಲ್ಲಿ ತಯಾರಿಸಲಾಗಿರುವ ದ್ಯಾಮವ್ವ ದೇವಿಯ ಬೆಳ್ಳಿಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಪೂರ್ಣಾಹುತಿ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದಿವೆ.

ಕಾರ್ಯಕ್ರಮಗಳ ವಿವರ:

ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ. ಏ.9 ರಿಂದ 20ರವರೆಗೆ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳು ನಡೆಯಲಿದ್ದು, ಏ.9ರ ಬೆಳಗಿನ ಜಾವದ 4 ಗಂಟೆಯ ಸಮಯದಲ್ಲಿ ಕುಷ್ಟಗಿಯ ಪಟ್ಟಣದ ಸುತ್ತ ಈಗಾಗಲೇ ಗುರುತಿಸಲಾಗಿರುವ ಸುಮಾರು 28 ಕಿಮೀ ಸೀಮೆಯ ಸುತ್ತಲೂ ಹಾಲು ತುಪ್ಪ ಎರೆಯಲಾಗುತ್ತದೆ. ಇದಕ್ಕಾಗಿ ನಾಲ್ಕು ದೊಡ್ಡ ಟ್ಯಾಂಕರ್‌ಗಳಲ್ಲಿ ಹಾಲು ಮತ್ತು ತುಪ್ಪವನ್ನು ಸಿದ್ಧಪಡಿಸಲಾಗಿದೆ. ಕುಷ್ಟಗಿ ಪಟ್ಟಣದ ಸೀಮೆಯ ಸುತ್ತಲಿನ ರಸ್ತೆಗಳನ್ನೆಲ್ಲ ಸ್ವಚ್ಛಗೊಳಿಸಲಾಗಿದೆ.

ದೇವಿಯ ಪೂಜೆ ನಂತರ ಕಂಕಣ ಧಾರಣೆ ಮಾಡುವುದು, ನಂತರ ಪಟ್ಟಣದ ಎಲ್ಲ ದೇವಸ್ಥಾನಗಳಲ್ಲಿಯೂ ನಂದಾದೀಪ ಬೆಳಗಿಸಲಾಗುತ್ತದೆ. ನಂತರ ದ್ಯಾಮವ್ವ ದೇವಿಯ ಕಳಸ ಸೇರಿ ಒಟ್ಟು ಆರು ಕಳಸಗಳನ್ನು ಮೆರವಣಿಗೆ ಮೂಲಕ ತರಲಾಗುತ್ತದೆ. ಏ.10 ರಂದು ಬ್ರಾಹ್ಮಿ ಮಹೂರ್ತದಲ್ಲಿ ಸಪ್ತ ಭಜನೆ ಪ್ರಾರಂಭವಾಗಿ ಏಳು ದಿನಗಳವರೆಗೆ ಅಹೋರಾತ್ರಿ ಸಪ್ತಭಜನೆ ನಡೆಯಲಿದೆ. ಏ. 16ರಂದು ದ್ಯಾಮವ್ವ ದೇವಿಯನ್ನು ಗಂಗಾಸ್ನಾನಕ್ಕೆ ಕರೆದೊಯ್ಯುವುದು, ಪುರಪ್ರವೇಶ, ವಿವಿಧ ಮನೆಗಳಲ್ಲಿ ಉಡಿ ತುಂಬುವುದು ನಂತರ ದೇವಿಯು ಗುಡಿಯಿಂದ ಪೂಜೆಗೊಂಡು ದ್ಯಾಮವ್ವ ದೇವಿಯ ಕಟ್ಟೆಗೆ ತಲುಪುವುದು ನಂತರ ಇತರೆ ಧಾರ್ಮಿಕ ಹಾಗೂ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಿಯಮಗಳು:

ಎಲ್ಲ ದೇವಸ್ಥಾನಗಳಲ್ಲಿ ನಂದಾದೀಪ ಹಾಕುವ ಪೂರ್ವದಲ್ಲಿ ಭಕ್ತರು ಕಾಯಿ ಒಡೆಸುವ ಕಾರ್ಯ ಮುಗಿಸಬೇಕು. ಏ. 9ರಿಂದ ಏ. 20ರವರೆಗೆ ಕಾಯಿ ಒಡೆಸುವಂತಿಲ್ಲ, ಕುಟ್ಟುವುದು, ಬೀಸುವುದು, ರೊಟ್ಟಿ ಬಡಿಯಬಾರದು, ಕೆಲವು ಮಿಷನ್‌ ಬಂದ್ ಮಾಡಬೇಕು ಸೇರಿದಂತೆ ವಿವಿಧ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ದೇವಸ್ಥಾನ ಸಮಿತಿ ಪ್ರಕಟಣೆ ಹೊರಡಿಸಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಹಾಗೂ ದೇವಸ್ಥಾನದ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು, ಪಟ್ಟಣವು ಅತ್ಯಂತ ವೈಭವದಿಂದ ಕಾಣುತ್ತಿದೆ.