ಕಾರಟಗಿ ಪಟ್ಟಣದ 11ನೇ ವಾರ್ಡ್‌ನ ಕೋಟೆ ಪ್ರದೇಶದಲ್ಲಿರುವ ಗ್ರಾಮದೇವತೆ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶುಕ್ರವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಕಾರಟಗಿ: ಪಟ್ಟಣದ 11ನೇ ವಾರ್ಡ್‌ನ ಕೋಟೆ ಪ್ರದೇಶದಲ್ಲಿರುವ ಗ್ರಾಮದೇವತೆ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶುಕ್ರವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಮಹಿಳೆಯರು ದೇವಿಗೆ ಉಡಿ ತುಂಬಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವಿವಿಧ ವಾದ್ಯಮೇಳಗಳೊಂದಿಗೆ ಗಂಗಾಪೂಜೆ, ಕುಂಭೋತ್ಸವ ಹಾಗೂ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ದೇವಸ್ಥಾನದಲ್ಲಿ ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಸಹಸ್ರನಾಮಾವಳಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಹಿರೇಮಠದ ಮರುಳಸಿದ್ಧಯ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಅರ್ಚಕ ವೀರಭದ್ರಪ್ಪ ಬಡಿಗೇರ ಅವರಿಂದ ನೆರವೇರಿದವು.

ಆನಂತರ ಮಹಿಳೆಯರು ಕುಂಭ-ಕಳಶಗಳನ್ನು ಹೊತ್ತು ವಿವಿಧ ವಾದ್ಯಮೇಳಗಳೊಂದಿಗೆ ತುಂಗಭದ್ರಾ 31ನೇ ವಿತರಣಾ ಕಾಲುವೆಯ ಗಂಗಾಸ್ಥಳಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಿದರು. ಅಲ್ಲಿಂದ ಕುಂಭೋತ್ಸವದ ಮೆರವಣಿಗೆ ಪಟ್ಟಣದ ಆರ್.ಜಿ. ರಸ್ತೆ, ಪುರಸಭೆ ಮಾರ್ಗವಾಗಿ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಕನಕದಾಸ ವೃತ್ತದ ಮೂಲಕ ಕೋಟೆ ಪ್ರದೇಶದ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನ ತಲುಪಿತು.

ಮಹಾಪ್ರಸಾದ ಸ್ವೀಕಾರ: ಅರ್ಚಕ ವೀರಭದ್ರಪ್ಪ ಬಡಿಗೇರ ಮಾತನಾಡಿ, ಪ್ರತಿವರ್ಷ ದಸರಾ ಹಬ್ಬದ ನಿಮಿತ್ತ ವಿಜಯದಶಮಿಯ ವರೆಗೆ ಪ್ರತಿದಿನ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಭಕ್ತರು ತನು-ಮನದಿಂದ ಸೇವೆ ಸಲ್ಲಿಸುತ್ತಿದ್ದು, ಶರನ್ನವರಾತ್ರಿಯ ಷಷ್ಟಿಯ ಅಂಗವಾಗಿ ದೇವಸ್ಥಾನದಲ್ಲಿ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದರು.

ಉತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ದೇವಿಗೆ ಹಣ್ಣು, ಕಾಯಿ, ಕರ್ಪೂರ ಸಮರ್ಪಿಸಿ ದರ್ಶನ ಪಡೆದರು. ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.

ಹಿರೇಮಠದ ವೇ.ಮೂ. ಮರುಳಸಿದ್ಧಯ್ಯ ಸ್ವಾಮಿ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ಪುರಸಭೆ ಸದಸ್ಯೆ ಸುಪ್ರಿಯಾ ಅರಳಿ, ಚಂದ್ರಶೇಖರ ಅರಳಿ, ದೇವಸ್ಥಾನದ ಸೇವಾಕರ್ತರಾದ ಹನುಮಂತಪ್ಪ ಸಿಂಗಾಪುರ, ಡಾ. ಹನುಮಂತಪ್ಪ ಗುರಿಕಾರ, ಸಂದೀಪ ಗೌಡ, ತಾಯಪ್ಪ ಕೋಟ್ಯಾಳ, ಕಾಶೀನಾಥ ಕಂಪ್ಲಿ, ದೊಡ್ಡ ತಾಯಪ್ಪ, ಬಸವರಾಜ ಕುಂಬಾರ, ಯೂಸುಫ್ ಸಾಬ್, ಅಶೋಕ ಚಿತ್ರಗಾರ, ಸತ್ಯನಾರಾಯಣ ಸಿಂಗ್, ಹನಮೇಶ ಸಿಂಗಾಪುರ, ಕರಿಯಣ್ಣ ಕೋಟ್ಯಾಳ, ಪ್ರಶಾಂತ ನಾಯಕ, ತುಳಜಾರಾಮ ಸಿಂಗ್, ಅಯ್ಯಪ್ಪ ಹಡಪದ, ಮೌನೇಶ, ನರಸಪ್ಪ ಸಿಂಗಾಪುರ, ಅಮರೇಶ ಕೋಟ್ಯಾಳ, ರಾಜುಗೌಡ, ಆರೇರ ನರಸಪ್ಪ, ಸುಧಾಕರ ಸಿಂಗಾಪುರ, ನೀಲೇಶ, ಶಾಮಸಿಂಗ್ ಉಪಸ್ಥಿತರಿದ್ದರು.