ಸಾರಾಂಶ
ಸಂಡೂರು : ಪಡಿತರ ಚೀಟಿ (ರೇಷನ್ ಕಾರ್ಡ್)ಗೆ ಅರ್ಜಿ ಸಲ್ಲಿಕೆಗೆ ಅರ್ಧ ದಿನ, ಎರಡು ದಿನ ಎಂದು ಕಾಲಮಿತಿಯನ್ನು ನಿಗದಿಗೊಳಿಸದೆ ನಿರಂತರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿವೈಎಫ್‌ಐ ಸಂಘಟನೆಯ ಮುಖಂಡರು ಸೋಮವಾರ ತೋರಣಗಲ್ಲಿನಲ್ಲಿ ಕಂದಾಯ ನಿರೀಕ್ಷಕ ಗಣೇಶ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ತಾಲೂಕು ಕಾರ್ಯದರ್ಶಿ ನಾಗಭೂಷಣ, ಪಡಿತರ ಚೀಟಿಗಾಗಿ ಅರ್ಜಿ ಕರೆದಿರುವುದು ಸ್ವಾಗತಾರ್ಹ ಕ್ರಮ. ಆದರೆ, ಇದಕ್ಕೆ ಕಾಲಮಿತಿ ನಿಗದಿ ಪಡಿಸುತ್ತಿರುವುದು ಸಾರ್ವಜನಿಕರಿಗೆ ಉಪಯೋಗವಾಗುತ್ತಿಲ್ಲ. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೂ ಇರುವ ಕಾಲಮಿತಿ ರದ್ದುಪಡಿಸಬೇಕು. ಸರ್ವರ್ ಸಮಸ್ಯೆ ಸರಿಪಡಿಸಬೇಕು. ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡಿಗೆ 25935 ಬಿಪಿಎಲ್ ಕಾರ್ಡಿಗೆ 273306 ಹಾಗೂ ಎಪಿಎಲ್ ಕಾರ್ಡಿಗೆ 43768 ಸೇರಿ ಒಟ್ಟು 343009 ಪಡಿತರ ಚೀಟಿಗಾಗಿ ಅರ್ಜಿಯನ್ನು ಹಾಕಿ ಎರಡು ವರ್ಷ ಕಳೆದಿದ್ದರೂ, ಇವರಿಗೆ ಪಡಿತರ ಚೀಟಿ ವಿತರಣೆಯಾಗಿಲ್ಲ ಎಂದು ದೂರಿದರು.
ಈ ಎಲ್ಲ ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿದ್ದು, ಹಲವು ವರ್ಷಗಳಿಂದ ಪಡಿತರ ಚೀಟಿ ಇಲ್ಲದೆ, ಸರ್ಕಾರದ ಎಲ್ಲಾ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇವರು ತಮ್ಮ ಜೀವನ ನಿರ್ವಹಣೆಗಾಗಿ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಹೊಸ ರೇಷನ್ ಕಾರ್ಡ್‌ಗಳನ್ನು ವಿತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎ. ಸ್ವಾಮಿ ಮಾತನಾಡಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎಸ್. ಕಾಲುಬಾ, ಕುರೆಕುಪ್ಪದ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಹೊನ್ನೂರ, ತೋರಣಗಲ್ಲು ಸಮಿತಿ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಪುರುಷೋತ್ತಮ, ಮಂಜು, ಫಕ್ಕೀರ, ಉಮಾದೇವಿ, ಹನುಮಕ್ಕ, ಹುಲಿಗೆಮ್ಮ, ವಿಜಯ, ನಾಗರಾಜ ಮುಂತಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))