ಉಡುಪಿ ಜಿಲ್ಲೆಯಲ್ಲಿ ಮೆ.10ರ ವರೆಗೆ ಇ ಖಾತಾ ಅಭಿಯಾನ: ಡಿಸಿ

| Published : Feb 19 2025, 12:47 AM IST

ಸಾರಾಂಶ

ಅನಧಿಕೃತ ಲೇಔಟ್‌ಗಳಿಗೆ ಬಿ ಖಾತೆ ಕೊಡಲು ಸರ್ಕಾರ ನಿರ್ದೇಶನ ನೀಡಿದ್ದು, ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಮೇ 10ರ ವರೆಗೆ ಇ- ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 5849 ಅನಧಿಕೃತ ಆಸ್ತಿಗಳನ್ನು ಗುರುತಿಸಲಾಗಿದೆ. ಅವುಗಳ ಮಾಲಕರು ಈಗಾಗಲೇ ಈ ಸ್ವತ್ತುಗಳಿಗೆ ತೆರಿಗೆ ಪಾವತಿಸುತ್ತಿದ್ದಾರೆ. ಬಿ ಖಾತೆ ಪಡೆದವರಿಗೆ ಪಿಐಡಿ ಸಂಖ್ಯೆ ನೀಡಲಾಗುತ್ತಿದ್ದು, ನಿವೇಶನ ಮಾರಾಟ, ನೋಂದಣಿಗೆ ಅನುಕೂಲವಾಗಲಿದೆ. ಆಸ್ತಿಗಳಿಗೆ ಮೊದಲ ಬಾರಿಗೆ ಶೇ.200ರಷ್ಟು ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿಸಿ ದಾಖಲೆಗಳನ್ನು ಪಡೆಯಬಹುದು ಎಂದರು.

10 ಗಂಟೆ ವರೆಗೆ ಯಕ್ಷಗಾನ:

ಯಕ್ಷಗಾನ ಪ್ರದರ್ಶನ ಆಯೋಜಕರು ಸ್ಥಳೀಯ ಗ್ರಾಪಂನಿಂದ ಅನುಮತಿ ಪಡೆಯಬೇಕು. 10 ಗಂಟೆ ವರೆಗೆ ಮಾತ್ರ ಮೈಕ್ ಉಪಯೋಗಿಸುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ತಡರಾತ್ರಿ ವರೆಗೆ ಮೈಕ್ ಬಳಕೆ ಸೂಕ್ತವಲ್ಲ. ಸಂಪ್ರದಾಯ ಪಾಲನೆ ಮಾಡುವ ದೃಷ್ಟಿಯಿಂದ ಕೋಳಿ ಅಂಕಗಳಿಗೆ ಅನುಮತಿ ನೀಡಲಾಗುತ್ತದೆ. ಇದನ್ನು ಜೂಜು ರೀತಿ ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.