ರಂಗಪಟ್ಟಣ ತಾಲೂಕಿನಾದ್ಯಂತ ಪ್ರತಿ ಮನೆಗೆ ಇ-ಸ್ವತ್ತು ಎ-ಖಾತೆ : ರಮೇಶ್ ಬಂಡಿಸಿದ್ದೇಗೌಡ

| Published : Sep 08 2025, 01:00 AM IST

ರಂಗಪಟ್ಟಣ ತಾಲೂಕಿನಾದ್ಯಂತ ಪ್ರತಿ ಮನೆಗೆ ಇ-ಸ್ವತ್ತು ಎ-ಖಾತೆ : ರಮೇಶ್ ಬಂಡಿಸಿದ್ದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

1994ರಲ್ಲಿ ನಮ್ಮ ತಾಯಿ ಶಾಸಕರಾಗಿದ್ದಾಗ ಕೊಟ್ಟ ಹಕ್ಕು ಪತ್ರಗಳ ಸಮಸ್ಯೆ ಬಗೆಹರಿದಿರಲಿಲ್ಲ. ಕಳೆದ 50 ವರ್ಷಗಳಿಂದ ವಾಸವಿರುವ ಬಡವರಿಗೆ ನಿರ್ಗತಿಕರಿಗೆ 2 ತಿಂಗಳಲ್ಲಿ ನಿವೇಶನ ಕೊಡುತ್ತೇವೆ. ಮೂಲ ವಾಸವಿರುವವರಿಗೆ ಹಕ್ಕುಪತ್ರ ಕೊಡುತ್ತೇವೆ. ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಯಾರೂ ಆಶ್ರಮಿಸಬೇಡಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನಾದ್ಯಂತ ಬಡವರ ಪ್ರತಿ ಮನೆ ಮನೆಗೆ ಇ-ಸ್ವತ್ತು ಎ-ಖಾತೆ ಮಾಡಿಕೊಡುವುದಾಗಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ್‌ಬಾಬು ಬಂಡಿಸಿದ್ದೇಗೌಡ ತಿಳಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೊಗರಹಳ್ಳಿ ಗ್ರಾಮದ 250 ಮನೆಯ ಯಜಮಾನರಿಗೆ ಮನೆಯ ಒಡೆತನದ ಮೊದಲನೆ ನಮೂನೆ 9 ಮತ್ತು 11 ಎ ಖಾತೆ ಜೊತೆಗೆ ಬಾಗಿನ ನೀಡಿ, ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ, 2 ಕೋಟಿ ರು. ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿ ಉದ್ಘಾಟನೆ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೊಸ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

1994ರಲ್ಲಿ ನಮ್ಮ ತಾಯಿ ಶಾಸಕರಾಗಿದ್ದಾಗ ಕೊಟ್ಟ ಹಕ್ಕು ಪತ್ರಗಳ ಸಮಸ್ಯೆ ಬಗೆಹರಿದಿರಲಿಲ್ಲ. ಕಳೆದ 50 ವರ್ಷಗಳಿಂದ ವಾಸವಿರುವ ಬಡವರಿಗೆ ನಿರ್ಗತಿಕರಿಗೆ 2 ತಿಂಗಳಲ್ಲಿ ನಿವೇಶನ ಕೊಡುತ್ತೇವೆ. ಮೂಲ ವಾಸವಿರುವವರಿಗೆ ಹಕ್ಕುಪತ್ರ ಕೊಡುತ್ತೇವೆ. ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಯಾರೂ ಆಶ್ರಮಿಸಬೇಡಿ. ನಮ್ಮ ಕಾಂಗ್ರೆಸ್ ಸರ್ಕಾರ ಬಡವರಿಗೋಸ್ಕರ ಉಚಿತವಾಗಿ 10ಕೆಜಿ ಅಕ್ಕಿ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ, ತಿಂಗಳಿಗೆ 2 ಸಾವಿರ ರು. ಹಾಗೂ ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ ನೀಡುತ್ತಿದ್ದು, ಇದರಿಂದ ಬಡವರು ನೆಮ್ಮದಿಯಾಗಿದ್ದಾರೆ. ಆದ್ದರಿಂದ ನಿಮ್ಮ ಪ್ರೀತಿ, ವಿಶ್ವಾಸ, ನಂಬಿಕೆಗೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಿಮ್ಮ ಎಲ್ಲಾ ಕೆಲಸಗಳನ್ನು ಹಂತಹಂತವಾಗಿ ಮಾಡಿಕೊಡುತ್ತೇನೆ. ಈ ಕಾರ್ಯಕ್ರಮವನ್ನು ಪಿಡಿಒ ಶಶಿಕಲಾ ತಂಡ ಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಎಲ್ಲರೂ ಸೇರಿ ಯಶಸ್ವಿಗೊಳಿಸಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು ಎಂದರು.

ಸಮಾರಂಭದಲ್ಲಿ ತಹಸೀಲ್ದಾರ್ ಚೇತನಾಯಾದವ್, ಇಒ ವೇಣು, ಗ್ರಾ.ಪಂ. ಅಧ್ಯಕ್ಷ ಚೆಲುವರಾಜು, ಉಪಾಧ್ಯಕ್ಷೆ ಸುಮಿತ್ರ, ಪಿ.ಡಿ.ಓ. ಶಶಿಕಲಾ ಗಜೇಂದ್ರ ಹಾಗೂ ಗ್ರಾ.ಪಂ. ಸದಸ್ಯರು, ಮುಖಂಡರು ಹಾಜರಿದ್ದರು.