ಪಿತ್ರಾರ್ಜಿತ ಆಸ್ತಿ ಹಕ್ಕು ವರ್ಗಾವಣೆಗೆ ಇ-ಪೌತಿ

| Published : Jul 07 2025, 11:48 PM IST

ಸಾರಾಂಶ

ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಗದಿದ್ದರೆ ಅಂತಹ ಜಮೀನು ಸ್ವಾಧೀನ ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲ ಸೌಕರ್ಯ ದೊರೆಯುವುದಿಲ್ಲ. ಬೆಳೆಹಾನಿಯಾದ ವೇಳೆ ಪರಿಹಾರ ಪಡೆಯಲು ದುಸ್ತರವಾಗುತ್ತಿದೆ.

ಕೊಪ್ಪಳ:

ಪಿತ್ರಾರ್ಜಿತ ಆಸ್ತಿ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ಪ್ರಕ್ರಿಯೆ ಸರಳೀಕೃತಗೊಳಿಸಲು ಕಂದಾಯ ಇಲಾಖೆಯಿಂದ ಇ-ಪೌತಿ ಆಂದೋಲನ ನಡೆಸಲಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಇ-ಪೌತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಗದಿದ್ದರೆ ಅಂತಹ ಜಮೀನು ಸ್ವಾಧೀನ ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲ ಸೌಕರ್ಯ ದೊರೆಯುವುದಿಲ್ಲ. ಬೆಳೆಹಾನಿಯಾದ ವೇಳೆ ಪರಿಹಾರ ಪಡೆಯಲು ದುಸ್ತರವಾಗುತ್ತಿದೆ. ಹೀಗಾಗಿ ಆಸ್ತಿ ಹಕ್ಕು ವರ್ಗಾವಣೆಗೆ ಇ-ಪೌತಿ ಆಂದೋಲನ ಆರಂಭಿಸಲಾಗಿದೆ ಎಂದರು.

ಇ-ಪೌತಿ ಮಾಡಿಸಿಕೊಳ್ಳಲು ಸಂಬಂಧಿಸಿದವರು ಮೃತರ ಮರಣ ಪ್ರಮಾಣ ಪತ್ರ, ಗಣಕೀಕೃತ ವಂಶವೃಕ್ಷ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌ನ್ನು ಗ್ರಾಮಾಡಳಿತಾಧಿಕಾರಿಗಳಿಗೆ ಸಲ್ಲಿಸಬೇಕು. ಅವರು ಕಾನೂನು ಬದ್ಧ ವಾರಸುದಾರರ ಆಧಾರ್‌ ಇ-ಕೆವೈಸಿ ಮಾಡುತ್ತಾರೆ. ಉತ್ತರಾಧಿಕಾರಿ ಇದ್ದರೆ ಫೋಟೋ ತೆಗೆದು ಆ್ಯಪ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ. ಮೃತರ ಇನ್ನಿತರ ಯಾವುದೇ ಸರ್ವೇ ನಂಬರ್‌ ಇದ್ದರೂ ಸೇರ್ಪಡೆ ಮಾಡುತ್ತಾರೆ ಎಂದು ತಿಳಿಸಿದರು.

ಕೆಲ ಪ್ರಕರಣದಲ್ಲಿ ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆ ಮಾಡಲು ಒಪ್ಪಿರುವುದಿಲ್ಲ ಎಂದು ಪಹಣಿ ಕಾಲಂ 11ರಲ್ಲಿ ನಮೂದಿಸಲಾಗುತ್ತದೆ. ಹೀಗಾಗಿ ಇ-ಪೌತಿ ಖಾತಾಗೆ ಬೇಕಾದ ವಂಶವೃಕ್ಷ, ಮರಣ ಪ್ರಮಾಣದಂತಹ ಇತರ ದಾಖಲೆ ಸಿದ್ಧಪಡಿಸಿಕೊಂಡು ಆಂದೋಲನ ಯಶಸ್ವಿಗೆ ಜಿಲ್ಲೆಯ ರೈತರು ಸಹಕರಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬಹುದು ಸಚಿವರು ಹೇಳಿದರು.

ಇದೇ ವೇಳೆ ಕೃಷಿ ಇಲಾಖೆಯ ಮುಂಗಾರು ಭತ್ತದಲ್ಲಿ ಕಣೆ ಹುಳು ಬಾಧೆ ಮತ್ತು ಸಮಗ್ರ ನಿರ್ವಹಣೆ ಹಾಗೂ ಮೆಕ್ಕೆಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಮತ್ತು ಯೂರಿಯಾ ಬಳಕೆಯಿಂದ ಮಾನವನ ಆರೋಗ್ಯ, ಮಣ್ಣು ಮತ್ತು ಪರಿಸರದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಕುರಿತ ಕರಪತ್ರವನ್ನು ಸಚಿವರು ಬಿಡುಗಡೆ ಮಾಡಿದರು.

ಸಂಸದ ರಾಜಶೇಖರ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ್, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಿಂಗರಾಜು ಟಿ. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.