ಸಾರ್ವಜನಿಕರಿಗೆ ಕಬ್ಬಿಣದ ಕಡಲೆಯಾಗಿರುವ ಇ-ಸ್ವತ್ತು ದಾಖಲೆ

| Published : Dec 31 2023, 01:30 AM IST

ಸಾರ್ವಜನಿಕರಿಗೆ ಕಬ್ಬಿಣದ ಕಡಲೆಯಾಗಿರುವ ಇ-ಸ್ವತ್ತು ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯಲ್ಲಿ ಇ-ಸ್ವತ್ತು ಮಾಡಿಕೊಡಲು ಸುಕಾಸುಮ್ಮನೆ ಸಾರ್ವಜನಿಕರನ್ನು ಓಡಾಡಿಸುತ್ತಿದ್ದು, ಇದನ್ನು ಗಮನಿಸಿದ ಶಾಸಕ ರಘುಮೂರ್ತಿ ಆದಷ್ಟು ಬೇಗ ಇ-ಸ್ವತ್ತು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಚಳ್ಳಕೆರೆ: ನಗರ ಸಭೆಯ ಆಡಳಿತಕ್ಕೆ ಚುರುಕು ನೀಡುವುದಲ್ಲದೆ, ಪಾರದರ್ಶಕತೆ ಕಾಪಾಡುತ್ತಾ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕೆನ್ನುವ ಒತ್ತಾಸೆಯಿಂದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಆಗಾಗ ಜನಸಂಪರ್ಕ ಸಭೆ ನಡೆಸಿ ನಗರಸಭೆ ಪೌರಾಯುಕ್ತರೂ ಸೇರಿದಂತೆ ಸಿಬ್ಬಂದಿ ವರ್ಗವನ್ನು ಸರಿದಾರಿಯಲ್ಲಿ ನಡೆಸುವ ಎಲ್ಲಾ ಪ್ರಾಮಾಣಿಕ ಯತ್ನ ಮಾಡುತ್ತಾ ಬಂದಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ 5 ಜನಸಂಪರ್ಕ ಸಭೆ ನಡೆದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಒಂದು ಹಂತದಲ್ಲಿ ಶಾಸಕರು ಪೌರಾಯುಕ್ತ ಸಿ.ಚಂದ್ರಪ್ಪನವರ ವಾದವನ್ನು ಬಲವಾಗಿ ಖಂಡಿಸಿದ ಘಟನೆ ನಡೆಯಿತು.

ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಶಾಸಕರ ಸಮಕ್ಷಮದಲ್ಲಿ ವಿವರಿಸುವಂತೆ ಪೌರಾಯುಕ್ತರು ವಿನಂತಿಸಿದರು.

ಈ ಮಧ್ಯೆ ಸಾರ್ವಜನಿಕರು ನಗರ ಸಭೆಯಲ್ಲಿ ಎಲ್ಲಾ ದಾಖಲಾತಿಗಳಿದ್ದರೂ ಸಹ ಇ-ಸ್ವತ್ತು ನೀಡುತ್ತಿಲ್ಲ, ಇ-ಸ್ವತ್ತು ನೀಡುವಲ್ಲಿ ವಿಳಂಬದ ಜೊತೆಗೆ ಹಣವನ್ನು ಸಹ ಕೇಳುತ್ತಿದ್ದಾರೆ. ನವೀಕರಣಕ್ಕೂ ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿದ್ದಾರೆ. ಸಾರ್ವಜನಿಕರಿಗೆ ಇಲ್ಲಿನ ನಗರಸಭೆ ಆಡಳಿತ ಇ-ಸ್ವತ್ತು ನೀಡುವ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ. ಹಣಕೊಟ್ಟವರಿಗೆ ಇ-ಸ್ವತ್ತು ಕೂಡಲೇ ಲಭ್ಯವಿದೆ ಎಂದು ಶಾಸಕರ ಸಮ್ಮುಖದಲ್ಲಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶುಲ್ಕ ಪಾವತಿಸಿದ ಇ-ಸ್ವತ್ತು ದಾಖಲಾತಿಗೆ ಕೂಡಲೇ ನೀಡಬೇಕು. ಹೊಸದಾಗಿ ಇ-ಸ್ವತ್ತು ನೀಡಲು ನಿಯಮಗಳನ್ನು ಅನುಸರಿಸಿ ತ್ವರಿತಗತಿಯಲ್ಲಿ ನೀಡಿ. ಅನಗತ್ಯವಾಗಿ ಜನರಿಗೆ ತೊಂದರೆ ನೀಡಬೇಡಿ ಕಾನೂನು ಪ್ರಕಾರ ದಾಖಲಾತಿ ಸಲ್ಲಿಸಿದಲ್ಲಿ ಪರಿಶೀಲನೆ ನಡೆಸಿ ಇ-ಸ್ವತ್ತು ನೀಡಿ. ಯಾವುದೇ ಕಾರಣಕ್ಕೂ ಇ-ಸ್ವತ್ತು ನೀಡಿಕೆಯಲ್ಲಿ ವಿಳಂಬವಾಗಬಾರದು ಎಂದರು.

ಈ ಮಧ್ಯೆ ಶಾಸಕ ಟಿ.ರಘುಮೂರ್ತಿಯವರು ಜಿಲ್ಲಾಧಿಕಾರಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪೌರಾಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಆದರೂ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ಎಲ್ಲಾ ದಾಖಲಾತಿಗಳಿದ್ದಲ್ಲಿ ಇ-ಸ್ವತ್ತು ನೀಡಲು ತೊಂದರೆ ಇಲ್ಲ ಎಂದರು. ಇದಕ್ಕೆ ಕೂಡಲೇ ಶಾಸಕರು ಪೌರಾಯುಕ್ತ ಸಿ.ಚಂದ್ರಪ್ಪನವರಿಗೆ ಜಿಲ್ಲಾಧಿಕಾರಿಗಳ ಆದೇಶವನ್ನು ನೀವು ಪಾಲಿಸಬೇಕು ಎಂದರು ಎಚ್ಚರಿಸಿದರು.

ಸಭೆಯಲ್ಲಿ ತಹಸೀಲ್ದಾರ್ ರೇಹಾನ್ ಪಾಷ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯ ಬಿ.ಟಿ.ರಮೇಶ್‌ ಗೌಡ, ಆರ್.ರುದ್ರನಾಯಕ, ಎಸ್.ಜಯಣ್ಣ, ಟಿ.ಮಲ್ಲಿಕಾರ್ಜುನ್, ಕವಿತಾ, ಸುಜಾತ, ಸುವ, ಹೊಯ್ಸಳ ಗೋವಿಂದ, ಜಯಲಕ್ಷ್ಮಿ, ಎಇಇ ಕಾವ್ಯ, ದಯಾನಂದ, ರಾಜು, ಅರಣ್ಯಾಧಿಕಾರಿ ಬಹುಗುಣ, ಬಿಸಿಎಂ ಅಧಿಕಾರಿ ದಿವಾಕರ, ಸಿಡಿಪಿಒ ಹರಿಪ್ರಸಾದ್, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಠಾಣಾ ಇನ್ಸ್ಪೆಕ್ಟರ್ ಆರ್.ಎಫ್.ದೇಸಾಯಿ, ವ್ಯವಸ್ಥಾಪಕ ಲಿಂಗರಾಜು, ಎಇಇ ಕೆ.ವಿನಯ್, ನರೇಂದ್ರಬಾಬು, ಜೆಇ ಲೋಕೇಶ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.