ಸತ್ತವರು ದೇವರ ಸನ್ನಿಧಾನ ಸೇರುತ್ತಾರೆ, ಅವರ ಸಮಾಧಿ ಕುಟುಂಬಸ್ಥರಿಗೆ ದೇವಸ್ಥಾನಕ್ಕೆ ಸಮನಾಗಿರುತ್ತದೆ, ಅವರು ಇಲ್ಲದ ಕೊರಗನ್ನು ಸಮಾಧಿಗೆ ಪೂಜಿಸಿ ನೆನಪನ್ನು ಮಾಡಿಕೊಳ್ಳುತ್ತಾರೆ, ಕೆಲವರಿಗೆ ಅದು ಪವಿತ್ರ ಸ್ಥಾನವೂ ಆಗಿರುತ್ತದೆ. ಬೇರೆಯವರ ನಂಬಿಕೆ, ಪ್ರೀತಿ ಹಾಗೂ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಯಾರೂ ಊಹಿಸಲಾಗದಂತಹ ದಂಧೆಯು ಹಲವು ವರ್ಷಗಳಿಂದ ರಾಯಚೂರಿನಲ್ಲಿ ನಡೆಯುತ್ತಾ ಬಂದಿದ್ದು, ಇದೀಗ ಆ ಕರಾಳ ದಂಧೆಯ ಮುಖವು ಬಟಾಬಯಲಾಗಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಸತ್ತವರು ದೇವರ ಸನ್ನಿಧಾನ ಸೇರುತ್ತಾರೆ, ಅವರ ಸಮಾಧಿ ಕುಟುಂಬಸ್ಥರಿಗೆ ದೇವಸ್ಥಾನಕ್ಕೆ ಸಮನಾಗಿರುತ್ತದೆ, ಅವರು ಇಲ್ಲದ ಕೊರಗನ್ನು ಸಮಾಧಿಗೆ ಪೂಜಿಸಿ ನೆನಪನ್ನು ಮಾಡಿಕೊಳ್ಳುತ್ತಾರೆ, ಕೆಲವರಿಗೆ ಅದು ಪವಿತ್ರ ಸ್ಥಾನವೂ ಆಗಿರುತ್ತದೆ. ಬೇರೆಯವರ ನಂಬಿಕೆ, ಪ್ರೀತಿ ಹಾಗೂ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಯಾರೂ ಊಹಿಸಲಾಗದಂತಹ ದಂಧೆಯು ಹಲವು ವರ್ಷಗಳಿಂದ ರಾಯಚೂರಿನಲ್ಲಿ ನಡೆಯುತ್ತಾ ಬಂದಿದ್ದು, ಇದೀಗ ಆ ಕರಾಳ ದಂಧೆಯ ಮುಖವು ಬಟಾಬಯಲಾಗಿದೆ.

ರಾಯಚೂರು ನಗರದ ವಾರ್ಡ್‌ ನಂ.13ರ ವ್ಯಾಪ್ತಿಗೆ ಬರುವ ಮಾರುತಿ ನಗರದಲ್ಲಿರುವ ಸ್ಮಶಾನದಲ್ಲಿ ಹೂತಿಟ್ಟ ಶವಗಳನ್ನು ಹೊರ ತೆಗೆದು ಬುರುಡೆ, ಎಲುಬು ಹಾಗೂ ಅಂಗಾಂಗಳನ್ನು ಮಾರಾಟ ಮಾಡುತ್ತಿದ್ದ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತಾಜಿನಗರ ಠಾಣೆಯಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಈರೇಶ್‌, ಹುಲಿಗೆಪ್ಪ, ನವೋದಯ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆ ನವೋದಯ ವೈದ್ಯಕೀಯ ಕಾಲೇಜಿನ ರಾಜು ಮತ್ತು ಆಪ್ಸರ್‌ ಸೇರಿ ಒಟ್ಟು ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ರಾಜು, ಆಪ್ಸರ್‌ ಹಾಗೂ ವೀರೇಶ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಪ್ರಕರಣ ಬಯಲಾಗಿದ್ದು ಹೇಗೆ: ಹಲವು ದಿನಗಳಿಂದ ಸ್ಮಶಾನದಲ್ಲಿ ಶವಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಸುತ್ತಲಿನ ನಿವಾಸಿಗಳು ಗಮನಿಸಿದ್ದು, ಕೆಲವರು ವಿಡಿಯೋ ಮಾಡಿ ಪೊಲೀಸರಿಗೆ ಸಾಕ್ಷಿ ಸಮೇತ ದೂರು ನೀಡಿದ್ದು, ಇದನ್ನಾಧರಿಸಿದ ಪೊಲೀಸರು ಸ್ಮಶಾನ ಕೆಲಸದ ಸಹಾಯಕ ಹಾಗೂ ನವೋದಯ ಕಾಲೇಜಿನ ಸಿಬ್ಬಂದಿಯು ಸ್ಮಶಾನದಲ್ಲಿಯೇ ಇದ್ದಾಗ ದಾಳಿ ನಡೆಸಿ ಹಿಡಿದಿದ್ದಾರೆ. ವಿಚಾರಣೆ ವೇಳೆ ನವೋದಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪ್ರಾಯೋಗಿಕ ವಿದ್ಯಾಭ್ಯಾಸಕ್ಕಾಗಿ ಸತ್ತ ಮನುಷ್ಯನ ಅಸ್ತಿಪಂಜರ, ಅಂಗಾಗಗಳನ್ನು ನೀಡುತ್ತಿದ್ದೆವು ಎಂದು ಸ್ಮಶಾನ ಕೆಲಸಗಾರರು ಒಪ್ಪಿಕೊಂಡಿದ್ದು, ಅದೇ ರೀತಿ ಹಲವು ವರ್ಷಗಳಿಂದ ಮೃತದೇಹಗಳನ್ನು ಪಡೆಯುತ್ತಿದ್ದೆವು ಎಂದು ಕಾಲೇಜಿನ ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾರೆ.

ಒಂದೊಂದಕ್ಕೂ ದರ ನಿಗದಿ: ಸ್ಮಶಾನದಲ್ಲಿ ಹೂತ ಮೃತದೇಹಗಳ ಮಾರಾಟ ದಂಧೆಯ ಕರಾಳ ಮುಖವು ಮಾನವೀಯತೆಯನ್ನು ಮರೆಯಾಗಿಸುವಂತಿದೆ. ಒಂದೊಂದು ಮೃತದೇಹಕ್ಕೆ ಒಂದೊಂದು ರೇಟ್‌ ನಿಗದಿ ಮಾಡಲಾಗಿತ್ತು, ಎನ್ನುವ ವಿಷಯ ಇದೀಗ ಬಹಿರಂಗವಾಗಿದೆ.ವಿಶೇಷ ತಂಡ ರಚನೆ: ಅಮಾನವೀಯ ದಂಧೆಯ ಹಿಂದೆ ಬೆಚ್ಚಿಬೀಳಿಸುವಂತಹ ಮಾಹಿತಿ ಬಯಲಾಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆಗಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ. ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಂಡು ಈ ದಂಧೆಯ ಹಿಂದೆ ಯಾರೇ ಇದ್ದರು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಎರಡು ಸಾವಿರ ಅಸ್ತಿಪಂಜರಗಳ ಮಾರಾಟ!: ಮೃತಪಟ್ಟು ವಾರ ಕಳೆದ ಶವಕ್ಕೆ ಒಂದು ದರ, ಐದಾರು ತಿಂಗಳ ಹಳೆಯ ಮೃತದೇಹಕ್ಕೆ ಮತ್ತೊಂದು ದರ, ಬುರುಡೆ, ಎಲುಬು, ಕೈ-ಕಾಲು ಹೀಗೆ ಒಂದೊಂದಕ್ಕೂ 400ರಿಂದ 3 ಸಾವಿರ ರು. ಹಣವನ್ನು ನೀಡುತ್ತಿದ್ದರು ಎನ್ನುವ ವಿಷಯವನ್ನು ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ ವೀರೇಶ ತಿಳಿಸಿದ್ದು, ಹಲವು ವರ್ಷಗಳಿಂದ ನಡೆಯುತ್ತಿರುವ ಈ ದಂಧೆಯಲ್ಲಿ ಸುಮಾರು ಎರಡು ಸಾವಿರ ಅಸ್ತಿಪಂಜರಗಳನ್ನು ಮಾರಾಟ ಮಾಡಲಾಗಿದೆ ಎನ್ನುವ ಆತಂಕಕಾರಿ ಸಂಗತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಸ್ಮಶಾನದಲ್ಲಿ ಮೃತದೇಹಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ತನಿಖೆಗೆ ತಂಡವನ್ನು ರಚನೆ ಮಾಡಲಾಗಿದೆ ಎಂದು ರಾಯಚೂರು ಎಸ್ಪಿ ಅರುಣಾಂಗ್ಷು ಗಿರಿ ಹೇಳಿದರು.