ಹಿಂದಿನ ಸಿನಿಮಾಗಳು ಬದುಕುವ ಆದರ್ಶಗಳನ್ನು ಬಿತ್ತುತ್ತಿದ್ದವು

| Published : Jan 23 2025, 12:48 AM IST

ಸಾರಾಂಶ

ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಶ್ರೀ ಭ್ರಮರಾಂಬ ಚಿತ್ರಮಂದಿ ೭೫ನೇ ವಾರ್ಷಿಕೋತ್ಸವ ಸಮಾರಂಭವನ್ನು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ್ ಉದ್ಘಾಟಿಸಿದರು.

50ರ ದಶಕದಲ್ಲಿ ಬರುತ್ತಿದ್ದ ಸಿನಿಮಾಗಳು ಜೀವನವನ್ನು ರೂಪಿಸಿಕೊಳ್ಳುವ ಹಾಗೂ ಬಡವನು ಸಹ ನ್ಯಾಯ ಕೇಳಬಹುದು ಮತ್ತು ನೆಮ್ಮದಿಯಿಂದ ಜೀವನ ನಡೆಸಬಹುದು ಎಂಬುದನ್ನು ತೋರಿಸುತ್ತಿದ್ದವು. ಈಗ ಭಾವುಕ ಮತ್ತು ಭ್ರಮೆಯಲ್ಲಿ ತೇಲುವ ಚಿತ್ರಗಳು ಮೂಡಿಬರುತ್ತಿವೆ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ್ ತಿಳಿಸಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಶ್ರೀ ಭ್ರಮರಾಂಬ ಚಿತ್ರಮಂದಿದ ೭೫ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಇತ್ತೀಚಿನ ಸಿನಿಮಾಗಳನ್ನು ನೋಡಿ, ತಕ್ಷಣವೇ ಶ್ರೀಮಂತನಾಗುತ್ತಾನೆ. ಕಣ್ಮುಚ್ಚಿ ಬಿಡುವುದಲ್ಲಿ ಆತನ ಬದುಕಿನ ಶೈಲಿ ಬದಲಾಗುತ್ತಿದೆ. ಇಂಥ ಸಿನಿಮಾಗಳಿಂದ ಸಮಾಜಕ್ಕೆ ಯಾವ ಮಾಹಿತಿ ರವಾನೆಯಾಗುತ್ತದೆ. ಹೀಗಾಗಿ ಜನರು ಚಿತ್ರಮಂದಿರಗಳತ್ತ ಬರುವುದನ್ನು ಕಡಿಮೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಂಬಳ್ಳಿ ಸಾಹುಕಾರ್ ರೇವಣ್ಣ ದೇವರು ಅವರು ಬಹಳ ಸಾರ್ಥಕ ಜೀವನ ನಡೆಸಿದವರು, ಜನರಿಗೆ ಮನರಂಜನೆ ಹಾಗೂ ಜನರಿಗೆ ಅಗತ್ಯತೆಯನ್ನು ಪೊರೈಸುವ ನಿಟ್ಟಿನಲ್ಲಿ ಚಿತ್ರಮಂದಿರವನ್ನು ಕಟ್ಟಿಸಿದರು. ಅದು ಸಾರ್ಥಕ ಸಹ ಆಗಿದೆ. ಅವರ ಮಕ್ಕಳು, ಮೊಮ್ಮಕ್ಕಳು ಇಂದಿಗೂ ಸಹ ಚಿತ್ರಮಂದಿರವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹೆಮ್ಮ ತಂದಿದೆ. ಇದೇ ರೀತಿ ಮುಂದೇ ಶತಮಾನೋತ್ಸವ ಆಚರಣೆ ಮಾಡಿಕೊಳ್ಳಲಿ ಎಂದು ಆಶಿಸಿದರು. ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ಭ್ರಮರಾಂಬ ಚಿತ್ರಮಂದಿರ ಅನೇಕ ಸವಾಲುಗಳ ನಡುವೆಯು ೭೫ ವರ್ಷಗಳನ್ನು ಪೂರೈಸಿದೆ. ಬಹಳಷ್ಟು ಚಿತ್ರಗಳು 100 ದಿನಗಳನ್ನು ಕಂಡಿವೆ. ಇಂಥ ಚಿತ್ರಮಂದಿರವನ್ನು ಕೊಟ್ಟ ಮಾಂಬಳ್ಳಿ ಸಾಹುಕಾರರು ಹಾಗೂ ಕುಟುಂಬಕ್ಕೆ ಜಿಲ್ಲೆಯ ಜನರು ಆಭಾರಿಯಾಗಿದ್ದಾರೆ. ಮುಂದೆ ಸಹ ಚಿತ್ರಮಂದಿರ ತುಂಬಿದ ಗೃಹಗಳಲ್ಲಿ ಪ್ರದರ್ಶನವಾಗಲಿ ಎಂದರು. ಬರಹಗಾರ ಎಸ್.ಲಕ್ಷ್ಮಿನರಸಿಂಹ ಮಾತನಾಡಿ, ಯಾವುದಾರರು ಒಂದು ಚಿತ್ರಮಂದಿರದ ಹೆಸರಿನಲ್ಲಿ ಬಡಾವಣೆ ನಿರ್ಮಾಣವಾಗಿದೆ ಎಂದರೆ, ಅದು ಚಾಮರಾಜನಗರದಲ್ಲಿ ಮಾತ್ರ. ಭ್ರಮರಾಂಬ ಬಡಾವಣೆಯೇ ರೂಪುಗೊಂಡಿತ್ತು. ಅವರ ಕುಟುಂಬಕ್ಕೆ ಭಗವಂತ ಒಳ್ಳೆಯದನ್ನು ಮಾಡಲಿ. ಬಾಲರಾಮನ ಪ್ರತಿಷ್ಠಾನೆ ಮಾಡಿದ ದಿನವೇ ಭ್ರಮರಾಂಭ ಚಿತ್ರಮಂದಿರ ಉದ್ಘಾಟನೆಯಾಗಿದೆ ಎಂಬುದು ವಿಶೇಷವಾಗಿದೆ ಎಂದರು.

ವಕೀಲ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಜನರ ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತಿದ್ದ ಚಿತ್ರಮಮಂದಿರ ೭೫ ವರ್ಷಗಳನ್ನು ಪೂರ್ಣ ಮಾಡಿ, ಇನ್ನು ಸಹ ಚಿತ್ರಮಂದಿರವಾಗಿ ಉಳಿದುಕೊಂಡಿರುವುದು ಹೆಮ್ಮೆ ತಂದಿದೆ. ಮಾಂಬಳ್ಳಿ ಶಿವಬಸವಸ್ವಾಮಿ ಮತ್ತು ಸಹೋದರರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಾಂಬಳ್ಳಿ ಶಿವಬಸವಸ್ವಾಮಿ ಮತ್ತು ಕುಟುಂಬದವರು ಭ್ರಮರಾಂಬ ಚಿತ್ರ ಮಂದಿರವು ನಮ್ಮ ಕುಟುಂಬಕ್ಕೆ ಬರುವಲ್ಲಿ ವಕೀಲರು ಆದ ಸಮಾಜ ಸೇವಕ ಕೊಳ್ಳೇಗಾಲದ ಎಸ್.ಟಿ. ಪಶುಪತಿ ಸೇವೆಯನ್ನು ಸ್ಮರಿಸಿದರು. ಅವರ ಪಾಂಡಿತ್ಯ ಮತ್ತು ಜೀವಮಾನವನ್ನು ಧಾರೆ ಎರೆದಿದ್ದಾರೆ ಎಂದು ಗುಣಗಾನ ಮಾಡಿದರು.

ಚಿತ್ರಮಂದಿರದ ಮಾಲೀಕ ಸುಂದರೇಶ್‌ಮೂರ್ತಿ ಪ್ರಸ್ತಾವಿಕ ಮಾತನಾಡಿ, ಅಂದು ಚಿತ್ರ ಮಂದಿರ ಉದ್ಘಾಟನೆಗೆ ಬಂದಿದ್ದ ಮೈಸೂರು ಸಂಸ್ಥಾನದ ಗೃಹ ಮತ್ತು ಆಹಾರ ಸಚಿವರಾಗಿದ್ದ ಟಿ.ಮರಿಯಪ್ಪ ಅವರಿಗೆ ಅವರ ತಂದೆ ಎಂ.ಎಸ್.ರೇವಣ್ಣ ದೇವರು ಅವರು ಬರೆದಿದ್ದ ಪತ್ರವನ್ನು ಓದುವ ಮೂಲಕ ಸ್ಮರಣೆ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಸತೀಶ್ ಗಣ್ಯರನ್ನು ಸನ್ಮಾನಿಸಿಸಿದರು. ಮಾಂಬಳ್ಳಿ ಸಾಹುಕಾರ್ ಎಂ. ಎಸ್. ರೇವಣ್ಣ ದೇವರು ಅವರ ಕುಟುಂಬ ಮತ್ತು ಸ್ನೇಹಿತರು ಉಪಸ್ಥಿತರಿದ್ದರು.