ರೈತರು ಉತ್ಪನ್ನಗಳ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆ ಹಾಗೂ ವರ್ತಕರನ್ನು ಅವಲಂಬಿಸುವುದರಿಂದ ಹಲವು ಸಂದರ್ಭಗಳಲ್ಲಿ ಮಧ್ಯವರ್ತಿಗಳಿಂದ ನಷ್ಟ ಅನುಭವಿಸುತ್ತಿದ್ದಾರೆ.

ಅಂತರ್ಜಾಲ ಮಾರುಕಟ್ಟೆ ವ್ಯವಸ್ಥೆ, ಸಾವಯವ ಕೃಷಿ ಕುರಿತು ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಡಾ. ಅಂಜನ್ ಕುಮಾರ್ ಸಲಹೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರೈತರು ಸ್ಥಳೀಯ ಮಾರುಕಟ್ಟೆ ಹಾಗೂ ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ಅಂತರ್ಜಾಲ ಮಾರುಕಟ್ಟೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆದು ಹೆಚ್ಚಿನ ಆದಾಯ ಗಳಿಸಬೇಕು ಎಂದು ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಕೃಷಿ ವ್ಯವಹಾರ ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಂಜನ್ ಕುಮಾರ್ ತಿಳಿಸಿದರು.

ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಸಂಯುಕ್ತ ಆಶ್ರಯದಲ್ಲಿ ನಂದಿ ಕ್ರಾಸ್ ಬಳಿಯ ರೈತ ಉತ್ಪನ್ನ ಕೇಂದ್ರದಲ್ಲಿ ಆತ್ಮ ಯೋಜನೆಯಡಿ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಅಂತರ್ಜಾಲ ಮಾರುಕಟ್ಟೆ ವ್ಯವಸ್ಥೆ ಹಾಗೂ ಸಾವಯವ ಕೃಷಿ ಕುರಿತು ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಉತ್ಪನ್ನಗಳ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆ ಹಾಗೂ ವರ್ತಕರನ್ನು ಅವಲಂಬಿಸುವುದರಿಂದ ಹಲವು ಸಂದರ್ಭಗಳಲ್ಲಿ ಮಧ್ಯವರ್ತಿಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಮಾರಾಟ ವಾಹಿನಿ,ಇ-ಎನ್ಎಎಂ ಹಾಗೂ ಭಾರತ್ ವಿಸ್ತಾರ್ ಮೊಬೈಲ್ ಆ್ಯಪ್‌ನಂತಹ ಅಂತರ್ಜಾಲ ವೇದಿಕೆಗಳನ್ನು ಬಳಸಿಕೊಂಡು “ನನ್ನ ಉತ್ಪನ್ನ, ನನ್ನ ಹಕ್ಕು” ಎಂಬ ಮನೋಭಾವದಿಂದ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಉತ್ಪನ್ನಗಳ ಸಂಗ್ರಹಣೆ, ವಿಂಗಡಣೆ ಹಾಗೂ ಪ್ಯಾಕಿಂಗ್ ವ್ಯವಸ್ಥೆ ಮಾಡಿಕೊಂಡಲ್ಲಿ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಗೆ ರಫ್ತು ಮಾಡಲು ಅವಕಾಶವಿದೆ. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ರೈತರು ಒಗ್ಗೂಡಿ ಉತ್ಪನ್ನಗಳನ್ನು ಮಾರುಕಟ್ಟೆಗೊಳಿಸುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದರು

ಸಹಾಯಕ ಕೃಷಿ ನಿರ್ದೇಶಕ ಮುನಿರಾಜು ಮಾತನಾಡಿ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ದ್ರಾಕ್ಷಿ, ದಾಳಿಂಬೆ, ಮಾವು, ತರಕಾರಿ ಹಾಗೂ ಹೂ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ರೈತರು ಅಂತರ್ಜಾಲ ಮಾರುಕಟ್ಟೆ ವ್ಯವಸ್ಥೆ ಬಳಸಿಕೊಳ್ಳುವ ಅಗತ್ಯವಿದೆ ಎಂದರು. ಬದಲಾಗುತ್ತಿರುವ ಕೃಷಿ ಪದ್ಧತಿಗಳಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದ್ದು, ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಪರಿಕರ ಬಳಕೆ ಮಾಡುವುದರಿಂದ ಮಣ್ಣು ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದು ತಿಳಿಸಿದರು.

ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಬೇಸಾಯ ಶಾಸ್ತ್ರಜ್ಞ ಡಾ. ಸಂಜಯ್ ಅವರು ಸಾವಯವ ಕೃಷಿ ಕುರಿತು ಮಾಹಿತಿ ನೀಡಿದರು. ಟ್ರೈಕೋಡರ್ಮಾ, ರೈಜೋಬಿಯಂ, ಅಜಟೋಬ್ಯಾಕ್ಟರ್ ಹಾಗೂ ಫಾಸ್ಫೇಟ್ ಕರಗಿಸುವ ಬ್ಯಾಕ್ಟೀರಿಯಾಗಳಂತಹ ಉಪಯುಕ್ತ ಸೂಕ್ಷ್ಮಜೀವಿಗಳನ್ನು ಬಳಸುವುದರಿಂದ ಮಣ್ಣಿನ ಆರೋಗ್ಯ ಹಾಗೂ ಬೆಳೆಗಳ ಬೆಳವಣಿಗೆ ಸುಧಾರಿಸುತ್ತದೆ ಎಂದರು. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಜೀವಾಮೃತ, ಪಂಚಗವ್ಯ ಹಾಗೂ ಜೈವಿಕ ಕೀಟ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕೃಷಿ ಉಪ ನಿರ್ದೇಶಕಿ ದೀಪಶ್ರೀ ಮಾತನಾಡಿ, ರಾಸಾಯನಿಕ ಪರಿಕರಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅನುಷ್ಠಾನಗೊಳಿಸಲಾಗಿದ್ದು, ಕೀಟನಾಶಕ ಹಾಗೂ ಶಿಲೀಂಧ್ರನಾಶಕಗಳನ್ನು ತಜ್ಞರ ಸಲಹೆಯಂತೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಾತ್ರ ಬಳಸಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಅಬಿದ್ ಅವರು ಸಾವಯವ ಹಾಗೂ ಪರಿಸರ ಸ್ನೇಹಿ ಕೃಷಿಗೆ ಆದ್ಯತೆ ನೀಡುವಂತೆ ರೈತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಂ. ಶಿವಣ್ಣ, ತಾಲೂಕು ಅಧ್ಯಕ್ಷ ಎನ್. ಸೊಣ್ಣೇಗೌಡ, ತೋಟಗಾರಿಕೆ ಇಲಾಖೆ ಅಧಿಕಾರಿ ನಿತಿನ್ ಇದ್ದರು. ಸಿಕೆಬಿ-2 ನಂದಿ ಕ್ರಾಸ್ ಬಳಿಯ ರೈತ ಉತ್ಪನ್ನ ಕೇಂದ್ರದಲ್ಲಿ ಆತ್ಮ ಯೋಜನೆಯಡಿ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಅಂತರ್ಜಾಲ ಮಾರುಕಟ್ಟೆ ವ್ಯವಸ್ಥೆ ಹಾಗೂ ಸಾವಯವ ಕೃಷಿ ಕುರಿತು ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಡಾ. ಅಂಜನ್ ಕುಮಾರ್ ಮಾತನಾಡಿದರು.