ಆರ್ಥಿಕ ಸಬಲತೆಗೆ ಹಣ ಗಳಿಸು, ಉಳಿಸು, ಬಳಸು

| Published : Sep 25 2025, 01:00 AM IST

ಸಾರಾಂಶ

ಪ್ರಸ್ತುತ ಅವಸರದ ಜೀವನದಲ್ಲಿ ಹಣ ಗಳಿಕೆಗೆ ಪ್ರತಿಯೊಬ್ಬರು ಹೆಣಗಾಡುತ್ತಿದ್ದಾರೆ. ಹಗಲು-ರಾತ್ರಿ ಎನ್ನದೇ ದುಡಿಯುವ ಸ್ಥಿತಿ ಇದೆ. ಹಣ ಗಳಿಸಲು ಸಾಕಷ್ಟು ಮಾರ್ಗಗಳಿವೆ. ಆದರೆ, ಆರೋಗ್ಯ ಗಳಿಸಲು ಯಾವುದೇ ಮಾರ್ಗಗಳಿಲ್ಲ. ಆದ್ದರಿಂದ ಯಾರೊಬ್ಬರು ತಮ್ಮ ಆರೋಗ್ಯ ನಿರ್ಲಕ್ಷಿಸಿ ಹಣ ಗಳಿಸಲು ಮುಂದಾಗಬಾರದು.

ಧಾರವಾಡ:

ಪ್ರತಿಯೊಬ್ಬರು ಉದ್ಯೋಗದ ಮೂಲಕ ಪ್ರಾಮಾಣಿಕವಾಗಿ ಹಣ ಗಳಿಸಿ, ಸರಿಯಾದ ಪ್ರಮಾಣದಲ್ಲಿ ಉಳಿಸಿ ಹಾಗೂ ಜೀವನ ನಿರ್ವಹಣೆಗೆ ಅದನ್ನು ಸಮರ್ಪಕವಾಗಿ ಬಳಸಿದರೆ ಮಾತ್ರ ಆರ್ಥಿಕ ಸಬಲರಾಗಬಹುದು ಎಂದು ಅಮ್ಮಿನಬಾವಿಯ ಶಾಂತಲಿಂಗ ಶಿವಾಚಾರ್ಯರು ಹೇಳಿದರು.

ಇಲ್ಲಿಯ ಆಲೂರು ವೆಂಕಟರಾವ್‌ ಭವನದಲ್ಲಿ ನೂತನ ಧಾರವಾಡ ಅಥರ್ವ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಅವಸರದ ಜೀವನದಲ್ಲಿ ಹಣ ಗಳಿಕೆಗೆ ಪ್ರತಿಯೊಬ್ಬರು ಹೆಣಗಾಡುತ್ತಿದ್ದಾರೆ. ಹಗಲು-ರಾತ್ರಿ ಎನ್ನದೇ ದುಡಿಯುವ ಸ್ಥಿತಿ ಇದೆ. ಹಣ ಗಳಿಸಲು ಸಾಕಷ್ಟು ಮಾರ್ಗಗಳಿವೆ. ಆದರೆ, ಆರೋಗ್ಯ ಗಳಿಸಲು ಯಾವುದೇ ಮಾರ್ಗಗಳಿಲ್ಲ. ಆದ್ದರಿಂದ ಯಾರೊಬ್ಬರು ತಮ್ಮ ಆರೋಗ್ಯ ನಿರ್ಲಕ್ಷಿಸಿ ಹಣ ಗಳಿಸಲು ಮುಂದಾಗಬಾರದ ಎಂಬ ಸಲಹೆಯನ್ನು ಸ್ವಾಮೀಜಿ ನೀಡಿದರು.

ನೂತನ ಸಂಘ ಉದ್ಘಾಟಿಸಿದ ಶಾಸಕ ಎನ್‌.ಎಚ್‌. ಕೋನರಡ್ಡಿ, ಧಾರವಾಡದ ಗ್ರಾಹಕ ವಸ್ತುಗಳ, ಕಿರಾಣಿ ಸೇರಿದಂತೆ ಎಲ್ಲ ವರ್ತಕರು ಸೇರಿಕೊಂಡು ರಚಿಸಿಕೊಂಡಿರುವ ಸೊಸೈಟಿಗೆ ಬೇಕಾದ ಅನುಕೂಲತೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಹೊಸಯಲ್ಲಾಪೂರ ಹಿರೇಮಠದ ಗದಿಗಯ್ಯ ಸ್ವಾಮೀಜಿ ಹಾಗೂ ಶಶಾಂಕ ಸ್ವಾಮೀಜಿ ಮಾತನಾಡಿ, ಇಡೀ ನಮ್ಮ ಸಮಾಜ ಸಹಕಾರ ತತ್ವದ ಮೇಲೆ ನಿಂತಿದ್ದು ನೂತನ ಸಂಘವು ಜನರ ಸಹಕಾರ ಪಡೆದು ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿಸಿದರು.

ರಾಜ್ಯ ಸೌಹಾರ್ದ ಸಹಕಾರಿ ಮಹಾಮಂಡಳದ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ ಮಾತನಾಡಿ, ರಾಜ್ಯದಲ್ಲಿ 6500 ಸಹಕಾರಿಗಳು ನೋಂದಣಿಯಾಗಿದ್ದು, ಈ ಕ್ಷೇತ್ರದಲ್ಲಿ 75 ಲಕ್ಷಕ್ಕೂ ಹೆಚ್ಚು ಸದಸ್ಯರು ತೊಡಗಿಸಿಕೊಂಡಿದ್ದಾರೆ. ಒಟ್ಟು ಶೇರು ಬಂಡವಾಳ ₹ 1630 ಕೋಟಿ ಇದ್ದು, ₹ 44,793 ಕೋಟಿ ಠೇವಣಿ ಇದೆ. ₹ 35,757 ಕೋಟಿ ಸಾಲ ವಿತರಿಸಿದ್ದು 75 ಸಾವಿರ ಜನರಿಗೆ ಈ ಕ್ಷೇತ್ರ ಉದ್ಯೋಗ ನೀಡಿದೆ. ಅಂತೆಯೇ, ಧಾರವಾಡ ಜಿಲ್ಲೆಯಲ್ಲಿ 54ನೇ ಸಹಕಾರಿಯಾಗಿ ಅರ್ಥವ ಪಾದಾರ್ಪಣೆ ಮಾಡಿದ್ದು, ಯಶಸ್ಸು ಕಾಣಲಿ ಎಂದರು.

ಮೇಯರ್‌ ಅಶ್ವಿನಿ ಪಾಟೀಲ, ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಮಾಜಿ ಶಾಸಕರಾದ ಎ.ಬಿ. ದೇಸಾಯಿ, ಸೀಮಾ ಮಸೂತಿ, ಹಿರಿಯ ನ್ಯಾಯವಾದಿ ಪ್ರಕಾಶ ಉಡಿಕೇರಿ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಶಿವಮೂರ್ತಿ ಕೋಟೂರ, ಪಾಲಿಕೆ ಸದಸ್ಯರಾದ ಶಂಭುಗೌಡ ಸಾಲಮನಿ, ಪ್ರಕಾಶ ನಾಝರೆ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಪ್ಪ ಹೂಸೂರ ಮಾತನಾಡಿದರು.

ಇದೇ ವೇಳೆ ಹಿರಿಯ ವ್ಯಾಪಾರಸ್ಥರಾದ ಭೂರಸಿಂಗ್‌ ರಾಜಪುರೋಹಿತ, ಸುಭಾಸ ಆಕಳವಾಡಿ, ಚಂದ್ರಶೇಖರ ಭೈರಪ್ಪನವರ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಅಥರ್ವ ಸಹಕಾರಿ ಅಧ್ಯಕ್ಷ ಮಂಜುನಾಥ ಹಿರೇಮಠ ಪ್ರಥಮ ಸರ್ವ ಸಾಧಾರಣೆ ಸಭೆಯ ವರದಿ ವಾಚಿಸಿದರು. ಸಹಕಾರಿ ಸಿಇಒ ಶ್ವೇತಾ ಹಿರೇಮಠ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಸಂಘದ ನಿರ್ದೇಶಕರುಗಳು, ಸ್ಥಳೀಯ ವ್ಯಾಪಾರಸ್ಥರು ಇದ್ದರು.