ಸಾರಾಂಶ
ಕಾರವಾರ: ಜಿಲ್ಲೆಯ ಶಿರಸಿ, ಸಿದ್ದಾಪುರ ಹಾಗೂ ಕುಮಟಾ ತಾಲೂಕಿನ ಕೆಲವೆಡೆ ಭಾನುವಾರ ಭಾರಿ ಸ್ಫೋಟದ ಸದ್ದಿನೊಂದಿಗೆ ಭೂಕಂಪ ಉಂಟಾಗಿ, ಜನತೆ ಬೆಚ್ಚಿಬೀಳುವಂತಾಯಿತು. ಯಾವುದೇ ಅವಘಡವಾಗಿಲ್ಲ.ಬೆಳಗ್ಗೆ 11.50ರ ಸುಮಾರಿಗೆ ಭಾರಿ ಸದ್ದು ಕೇಳಿಬಂತು. ನಂತರ 2- 3 ಸೆಕೆಂಡುಗಳ ಕಾಲ ಭೂಮಿ ಅದುರಿತು. ಜನತೆ ಭಯಗೊಂಡು ಮನೆಯಿಂದ ಹೊರಕ್ಕೆ ಬಂದರು. ಹಿಂದೂ ಮಹಾಸಾಗರದ 10 ಕಿಮೀ ಆಳದಲ್ಲಿ ಭೂಕಂಪನ ಆಗಿದ್ದು, ಅದರ ಪರಿಣಾಮವಾಗಿ ಪಶ್ಚಿಮ ಘಟ್ಟದಲ್ಲಿ ಭೂಮಿ ಕಂಪಿಸಿರಬಹುದು ಎಂದು ತಜ್ಞರು ಊಹಿಸಿದ್ದಾರೆ.
ಸಿದ್ದಾಪುರ ತಾಲೂಕಿನ ಕಾನಸೂರ, ಹೆಗ್ಗರಣಿ, ಹೇರೂರು, ಗೋಳಿಮಕ್ಕಿ, ಶಿರಸಿ ತಾಲೂಕಿನ ಮತ್ತಿಘಟ್ಟ, ಸಂಪಖಂಡ, ಹೆಗಡೆಕಟ್ಟಾ, ಖಸಗೆ, ಬಂಡಲ, ರಾಗಿಹೊಸಳ್ಳಿ, ಯಲ್ಲಾಪುರ ತಾಲೂಕಿನ ಚವತ್ತಿ, ಕುಮಟಾ ತಾಲೂಕಿನ ಕತಗಾಲ, ಭಂಡಿವಾಳ, ದೇವಿಮನೆ ಮತ್ತಿತರ ಕಡೆಗಳಲ್ಲಿ ಭೂಮಿ ಕಂಪಿಸಿದೆ. ಇದರೊಂದಿಗೆ ಭಾರಿ ಸದ್ದು ಕೇಳಿಬಂದಿದ್ದರಿಂದ ಜನತೆ ಭಯಭೀತರಾದರು. ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸುತ್ತಿದ್ದಂತೆ ಜನತೆ ಮನೆಯಿಂದ ಹೊರಗೋಡಿ ಬಂದರು. ಕುಳಿತಿದ್ದ ಕುರ್ಚಿ, ಸೋಫಾ ಕೂಡ ಅಲುಗಾಡಿತು. 2- 3 ಸೆಕೆಂಡುಗಳ ಕಾಲ ಕಂಪನದ ತರುವಾಯ ಸಹಜ ಸ್ಥಿತಿಗೆ ಬಂತು.ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಸಾಮಾಜಿಕ ಜಾಲತಾಣದಲ್ಲೂ ಭೂಕಂಪದ್ದೆ ಮಾತು. ತಮ್ಮ ತಮ್ಮ ಊರಿನಲ್ಲಿ ಭೂಕಂಪವಾಗಿದೆ ಎಂಬ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ನಿಗೂಢ ಸದ್ದು ಉಂಟಾಗಿದೆ. ಭೂಕಂಪನವಾಗಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿದೆ.
ಹೊರಗೋಡಿ ಬಂದೆವು: ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿತು. ಇದರಿಂದ ಭಯ ಉಂಟಾಯಿತು. ಮನೆಯಿಂದ ಹೊರಗೋಡಿ ಬಂದೆವು. ಕುಮಟಾ- ಶಿರಸಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗಾಗಿ ಬಂಡೆಗಳನ್ನು ಸಿಡಿಸಿರಬೇಕೆಂದು ಅಂದುಕೊಂಡೆವು ಎಂದು ದೇವಿಮನೆ ಸಮೀಪದ ನಿವಾಸಿ ರಾಮ ಭಟ್ ತಿಳಿಸಿದರು.ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ
ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕಂಪದ ಬಗ್ಗೆ ಯಾವುದೇ ಸಂದೇಶ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಇದರಿಂದ ಸಾರ್ವಜನಿಕರು ಯಾವುದೆ ಆತಂಕಕ್ಕೆ ಒಳಗಾಗಬಾರದು. ಇಂತಹ ಯಾವುದೆ ಕಂಪನಗಳು ಅನುಭವಕ್ಕೆ ಬಂದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ 1077 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.