ಕನ್ನಡಪ್ರಭ ವಾರ್ತೆ ಸಾಲಿಗ್ರಾಮಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ನಾಲ್ಕು ದಿನವಾದರೂ ನಮ್ಮ ಬೆಳೆಯನ್ನು ಖರೀದಿಸದೆ ನಿತ್ಯ ರಸ್ತೆಯಲ್ಲಿ ಬವಣೆ ಪಡುವಂತಾಗಿದೆ ಎಂದು ಆರೋಪಿಸಿ ರೈತರು ಮಂಗಳವಾರ ದಿಡೀರ್ ರಸ್ತೆ ತಡೆ ನಡೆಸಿದರು.50ಕ್ಕೂ ಹೆಚ್ಚು ರೈತರು ರಾಗಿ ತುಂಬಿದ ಟ್ರ್ಯಾಕ್ಟರ್ ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಸಾಲಿಗ್ರಾಮ- ಭೇರ್ಯ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ರಾಗಿ ಖರೀದಿಗೆಂದು ಖರೀದಿ ಕೇಂದ್ರದ ಅಧಿಕಾರಿಗಳು ನಾಲ್ಕು ದಿನದ ಹಿಂದೆ ಟೋಕನ್ ನೀಡಿದ್ದು, ಇದುವರೆಗೂ ಖರೀದಿ ಮಾಡಿಲ್ಲ. ನಾವು ರಸ್ತೆ ಬದಿಯಲ್ಲಿ ದಿನ ದೂಡುವಂತಾಗಿದೆ. ರಾಗಿ ತುಂಬಿರುವ ವಾಹನ ಮಾಲೀಕರಿಗೆ ಒಂದು ದಿನಕ್ಕೆ ಎರಡರಿಂದ ಎರಡೂವರೆ ಸಾವಿರ ರು. ಬಾಡಿಗೆ ನೀಡಬೇಕಾಗಿದೆ. ರಾಗಿಯ ಲಾಭವೆಲ್ಲ ವಾಹನದ ಬಾಡಿಗೆಗೆ ಕಟ್ಟುವಂತಾಗಿದೆ ಎಂದು ಅಳಲು ತೋಡಿಕೊಂಡರು.ಮಧ್ಯವರ್ತಿಗಳಿಗೆ ಮೊದಲು ಆದ್ಯತೆ ನೀಡುವ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ನಮಗೆ ಟೋಕನ್ ನೀಡಿ ನಾಲ್ಕೈದು ದಿನ ಕಳೆದರು ಖರೀದಿಸದೆ ನಮ್ಮನ್ನು ಬಿಸಿಲಲ್ಲಿ ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ನಮ್ಮ ಬೆಳೆಯನ್ನು ಹಗಲು ರಾತ್ರಿ ಕಾಯುತ್ತ ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿದರು. ತಹಸೀಲ್ದಾರ್ ಭೇಟಿ- ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರುಕಿಯ ಬೇಗಂ ಅವರು ರೈತರನ್ನು ಸಮಾಧಾನಪಡಿಸಿ ಚುರುಕಾಗಿ ರಾಗಿ ಖರೀದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ರೈತರು ತಂದಿದ್ದ ರಾಗಿ ಪರಿಶೀಲಿಸಿದ ತಹಸೀಲ್ದಾರ್ ಅವರು ನಿಯಮಾನುಸಾರ ಗುಣಮಟ್ಟದ ರಾಗಿ ಖರೀದಿ ಮಾಡಬೇಕು. ಇಲ್ಲವಾದರೆ ಎಫ್ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಹಿಂದೆ ತಂದಿದ್ದ ರಾಗಿಯನ್ನು ಕ್ವಿಂಟಾಲ್ ಗೆ ನಾಲ್ಕು ಕೆ.ಜಿ. ಹೆಚ್ಚುವರಿ ಖರೀದಿಸುತ್ತಿದ್ದರು. ಈಗ ಏಕಾಏಕಿ ರಾಗಿಯನ್ನು ಜರಡಿ ಮಾಡಿ ಖರೀದಿಸುತ್ತಿದ್ದಾರೆ. ಮೊದಲಿನಂತೆಯೇ ಖರೀದಿಸಿ ಎಂದು ರೈತರು ಪಟ್ಟುಹಿಡಿದರು. ಇದನ್ನು ನಯವಾಗಿ ತಿರಸ್ಕರಿಸಿದ ತಹಸೀಲ್ದಾರ್ ಜಿಲ್ಲಾಧಿಕಾರಿಗಳ ಸೂಚನೆಯಂತೆ ನಿಯಮಾನುಸಾರ ರಾಗಿ ಖರೀದಿ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದರು.ಈ ವೇಳೆ ರಾಗಿ ತುಂಬುವ ಕಾರ್ಮಿಕರಿಗೆ ಕ್ವಿಂಟಲ್ ಗೆ 52 ರು. ಕೊಡುತ್ತಿದ್ದೇವೆ ಎಂದು ರೈತರು ತಿಳಿಸಿದರು.ತುಂಬಿದ್ದ ಚೀಲಗಳನ್ನು ತೂಕ ಹಾಕಿಸಿದ ತಹಸೀಲ್ದಾರ್ ಚೀಲದಲ್ಲಿ ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ರಾಗಿ ಇದ್ದದ್ದನ್ನು ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು.
ರೈತರಿಂದ ದಿಢೀರ್ ರಸ್ತೆ ತಡೆ
50ಕ್ಕೂ ಹೆಚ್ಚು ರೈತರು ರಾಗಿ ತುಂಬಿದ ಟ್ರ್ಯಾಕ್ಟರ್ ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.