ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ರಾಸಾಯನಿಕಯುಕ್ತ ಜಂಕ್ ಆಹಾರಗಳನ್ನು ದೂರವಿಟ್ಟು ನಿಸರ್ಗದಲ್ಲಿ ಸ್ವಾಭಾವಿಕವಾಗಿ ಸಿಗುವ ತರಕಾರಿ ಕಾಯಿಪಲ್ಲೆಗಳನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಿರಿ ಎಂದು ಕೊಡಗಿನ ಪ್ರಥಮ ಪಾಕಶಾಸ್ತ್ರ ಕೈಪಿಡಿಯ ಲೇಖಕಿ ಚೆಟ್ಟಳ್ಳಿಯ ಆಶಾ ತಿಮ್ಮಪ್ಪಯ್ಯ ಸಲಹೆ ನೀಡಿದ್ದಾರೆ.ಅರಮೇರಿ ಕಳಂಚೇರಿ ಮಠದ ಲಿಂಗರಾಜೇಂದ್ರ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊಂಬೆಳಕು ಮಾಸಿಕ ತತ್ವ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಉತ್ತಮ ಆಹಾರದ ಮೂಲಮಂತ್ರಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವ್ಯಾಪಾರೀಕರಣ ಇಂದು ವ್ಯಾಪಕವಾಗಿ ಹರಡುತ್ತಿದೆ, ಈ ದಿನಗಳಲ್ಲಿ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಮಾರುಹೋಗಿ ದೇಹಕ್ಕೆ ಅಗತ್ಯವಿಲ್ಲದ ತಿನಿಸುಗಳನ್ನು ತಿನ್ನುವುದು ತಪ್ಪಬೇಕು ಎಂದ ಅವರು, ಪ್ರಕೃತಿಯು ಕಾಲಕಾಲಕ್ಕೆ ನಮಗೆ ಪೂರೈಸುವ ಎಲ್ಲ ರೀತಿಯ ಆಹಾರ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ. ಹಾಗೆಯೇ ಕಣಿಲೆ, ಬಾಳೆ ದಿಂಡು, ಹಲಸು ಮೊದಲಾದ ತಿನಿಸುಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರ ಆರೋಗ್ಯ ಸಂರಕ್ಷಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.ಮಹಿಳೆಯರು ಪರಸ್ಪರ ಸಂಭಾಷಿಸುವಾಗ ಆಹಾರ ಹಾಗೂ ಅಡುಗೆಯ ವಿಚಾರವಾಗಿ ಸಾಕಷ್ಟು ಕಲಿಯಬಹುದಾಗಿದೆ. ಸಾತ್ವಿಕವಾದ ಆಹಾರಗಳನ್ನು ತಯಾರಿಸುವಲ್ಲಿ ಮಹಿಳೆಯರು ಹೆಚ್ಚು ಗಮನಹರಿಸಬೇಕು ಎಂದರು.ಚೆಟ್ಟಳ್ಳಿಯ ಕಾಫಿ ಬೆಳೆಗಾರ ಎಚ್.ಎಸ್. ತಿಮ್ಮಪ್ಪಯ್ಯ ಮಾತನಾಡಿ, ಮನುಷ್ಯ ಆಲಸ್ಯ ಹಾಗೂ ಸೋಮಾರಿತನ ಬಿಟ್ಟು ಬಸವಣ್ಣನವರ ಲೋಕ ಸಂದೇಶದಂತೆ ಕಾಯಕವೇ ಕೈಲಾಸ ಎಂಬಂತೆ ದುಡಿದು ತಿನ್ನುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದು ಎಂದರು.
ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಶರೀರ ಸದೃಢವಾಗಿರಲು ಆಹಾರದ ಮಹತ್ವ ಬಹಳ ಮುಖ್ಯ. ಮನುಷ್ಯ ಧಾವಂತದ ಬದುಕಿನಲ್ಲಿ ಸಂಪತ್ತಿನ ಹಿಂದೆಯೇ ಓಡುತ್ತಿದ್ದಾನೆ, ಹಿಂದಿನ ಕಾಲದ ರೀತಿಯಲ್ಲಿ ಸೌದೆಯಿಂದ ಬೇಯಿಸಿದ, ಚಕ್ಕಲಬಕ್ಕಲ ಹಾಕಿ ನೆಲದಲ್ಲಿ ಕುಳಿತು ಇತಿ ಮಿತಿಯಾಗಿ ಶ್ರದ್ಧೆಯಿಂದ ಸೇವಿಸುವ ಜೀವನ ಶೈಲಿ ಮರುಕಳಿಸಬೇಕಿದೆ ಎಂದರು.ಪಕ್ಷಿತಜ್ಞ ವಿರಾಜಪೇಟೆಯ ಡಾ. ನರಸಿಂಹನ್ ಅಡುಗೆ ಮನೆಯಿಂದ ಸಕ್ಕರೆಯನ್ನು ಮಹಿಳೆಯರು ಮೊದಲು ದೂರವಿಡಬೇಕು. ತಿನಿಸುಗಳಲ್ಲಿ ಬಳಸುವ ಟೇಸ್ಟಿಂಗ್ ಪೌಡರ್, ಅಜಿನೋಮಟ್ಟು ಮೊದಲಾದ ಮಾರಕ ಅಂಶಗಳು ಮಾಡುವ ಅನಾರೋಗ್ಯ ಹಾಗು ಬೇಕರಿ ತಿನಿಸುಗಳಿಂದ ಮಕ್ಕಳನ್ನು ದೂರವಿಡಬೇಕು. ಸಸ್ಯಜನ್ಯ ಎಣ್ಣೆಗಳನ್ನು ಬಳಸುವ ಮೂಲಕ ಸ್ವಾಸ್ಥರಾಗಲು ಸಾಧ್ಯ ಎಂದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಾಹಿತಿ ಕಿಗ್ಗಾಲು ಗಿರೀಶ್, ನಿವೃತ್ತ ಮೇಜರ್ ಗಿರಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಬಿ. ನಟರಾಜು, ನಿರ್ದೇಶಕ ಪರಮೇಶ್ ಹಾಜರಿದ್ದರು.