ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರತಿಯೊಬ್ಬರು ಪೌಷ್ಟಿಕ ಆಹಾರ ಸೇವನೆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಡಿ.ರೂಪ ತಿಳಿಸಿದರು.ಪಟ್ಟಣದ ಅಂಬೇಡ್ಕರ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯಿಂದ ಪೌಷ್ಟಿಕಾಂಶ ದಿನಾಚರಣೆ ಹಾಗೂ ಪೋಷಣ್ ಮಾಸಾಚರಣೆ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯ. ದಿನನಿತ್ಯ ಸೇವಿಸುವ ಆಹಾರದಲ್ಲಿ ಸೊಪ್ಪು, ತರಕಾರಿ, ಮೊಳಕೆ ಕಾಳು, ಬೇಳೆ ಕಾಳು, ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಉತ್ತಮ ಪೌಷ್ಟಿಕಾಂಶಗಳು ದೊರೆಯುವರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಡಿ.ಟಿ.ಮಂಜುನಾಥ್ ಮಾತನಾಡಿ, ಹೆಣ್ಣುಮಕ್ಕಳು ಮತ್ತು ಮಹಿಳೆಯರು ದೇಶದ ಆಸ್ತಿ, ಪುರುಷರಿಗೆ ಸರಿ ಸಮಾನವಾದ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ರಕ್ತಹೀನತೆ ಅಲಕ್ಷ ಮಾಡದೆ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ ಹಾಗೂ ಮಕ್ಕಳಿಗೆ ಪಾಸ್ಟ್ ಫುಡ್ ಕೊಡಿಸಬೇಡಿ ಮನೆಯಲ್ಲೇ ತಯಾರಿಸಿದ ತಿಂಡಿ ಪದಾರ್ಥಗಳನ್ನು ಕೊಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಪೌಷ್ಟಿಕಾಂಶ ದಿನಾಚರಣೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಲ್.ಧನಲಕ್ಷ್ಮಿಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಸಿ, ವಿವಿಧ ಬಗೆಯ ಪೌಷ್ಟಿಕ ಆಹಾರದ ಪದಾರ್ಥಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಹನುಮಂತರಾಯಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಎನ್ ಮಂಜುನಾಥ, ಜಂಟಿ ಕಾರ್ಯದರ್ಶಿ ಡಿ.ಕೃಷ್ಣೇಗೌಡ, ಉಪ ಆರಕ್ಷಕ ನಿರೀಕ್ಷಕಿ ಶಾಂತ ಕುಮಾರಿ, ಹಿರಿಯ ಮೇಲ್ವಿಚಾರಕಿ ಅಮೃತ ಕರಣಿ, ಮೇಲ್ವಿಚಾರಕಿ ಆಶಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ಪ್ರಥಮ ದರ್ಜೆ ಸಹಾಯಕ ಕಿರಣರಾಜೆ ಅರಸ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹಾದೇವಮ್ಮ ಸೇರಿದಂತೆ ಗರ್ಭಿಣಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇದ್ದರು.