ಸಾರಾಂಶ
- ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟೀಯ ಪೌಷ್ಟಿಕ ಆಹಾರ ಸಪ್ತಾಹ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ್‌ಗೌಡ ಕರೆ ನೀಡಿದರು.
ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ರೋಟರಿ ಕ್ಲಬ್, ಪುಷ್ಪ ನರ್ಸಿಂಗ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಜಂಗ್ ಫುಡ್ ತೆಗೆದುಕೊಳ್ಳುವ ಪ್ರಮಾಣವೂ ಹೆಚ್ಚಾಗಿರು ವುದರಿಂದ ಸಾರ್ವಜನಿಕರಿಗೆ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹಳೆಯ ಆಹಾರ ಪದ್ಧತಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಅಪೌಷ್ಟಿಕತೆ ತಡೆಗಟ್ಟಲು ಎಲ್ಲರೂ ಶ್ರಮಿಸಬೇಕು ಎಂದರು.ಭ್ರೂಣದಲ್ಲಿರುವ ಮಗುವಿನಿಂದ ಹಿಡಿದು ಎಲ್ಲರಿಗೂ ಕಾನೂನಿನ ರಕ್ಷಣೆ ಇದೆ. ಕಾನೂನಿನ ಅರಿವು ಎಲ್ಲರೂ ಪಡೆದುಕೊಳ್ಳಬೇಕು. ಬಾಲ್ಯ ವಿವಾಹ ಹದಿಹರೆಯದ ಗರ್ಭಧಾರಣೆ, ಅತ್ಯಾಚಾರ ಪ್ರಕರಣಗಳು ಮರುಕಳಿಸಿದಂತೆ ಎಲ್ಲರೂ ಕ್ರಮ ತೆಗೆದುಕೊಳ್ಳಬೇಕೆಂದರು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಕೆ.ಒ.ನರಸಿಂಹಮೂರ್ತಿ ಮಾತನಾಡಿ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿ, ಸೆಪ್ಟೆಂಬರ್ ಒಂದರಿಂದ ಏಳರವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮದ ಮೂಲಕ ಪೌಷ್ಟಿಕ ಆಹಾರದ ಮಹತ್ವ ತಿಳಿಸುವುದು, ಪೌಷ್ಟಿಕತೆ ದೂರವಾಗಿಸಲು ಕಾರ್ಯಕ್ರಮ ರೂಪಿಸುವುದು ಸಾರ್ವಜನಿಕರಲ್ಲಿ, ಆಹಾರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಾವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಮಿನರಲ್ಸ್, ವಿಟಮಿನ್, ಕೊಬ್ಬಿನ ಅಂಶಗಳಿದ್ದು ಈ ಅಂಶಗಳು ಆರೋಗ್ಯಕ್ಕೆ ತೀರ ಬೇಕಾಗಿರುವ ಈ ಪೋಷಕಾಂಶಗಳು ಹೆಚ್ಚಾಗಿ ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು, ಏಕದಳ ಮತ್ತು ದ್ವಿದಳ ಧಾನ್ಯಗಳು, ಹಾಲು, ಮೊಟ್ಟೆ, ಮಾಂಸಾಹಾರಿ ಪದಾರ್ಥಗಳಲ್ಲಿ ಇರುತ್ತದೆ ಎಂದು ತಿಳಿಸಿದರು.
ಮೈದಾ ಸಕ್ಕರೆ ಅಂಶಗಳನ್ನು ಕಡಿಮೆ ಸೇವಿಸಿ, ನೈಸರ್ಗಿಕವಾಗಿ ಮನೆಯಲ್ಲೇ ಬೆಳೆಯುವ ಆಹಾರ ಪದಾರ್ಥ ಸೇವಿಸಬೇಕು. ಗರ್ಭಿಣಿಯರು ಬಾಣಂತಿಯರು ಹದಿ ಹರೆಯದ ಮಕ್ಕಳು ವಯಸ್ಕರು ಅಪೌಷ್ಟಿಕತೆಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.ರೋಟರಿ ಸಂಸ್ಥೆ ಅಧ್ಯಕ್ಷ ಕಣಿವೆವಿನಯ್ ಮಾತನಾಡಿ, ಹಿಂದಿನವರು 100 ವರ್ಷಗಳಷ್ಟು ಬಾಳಿ ಬದುಕಿದ ಇತಿಹಾಸವಿದೆ. ತಮ್ಮ ಆಹಾರ ಪದ್ಧತಿ, ಹಿತ,ಮಿತವಾದ ಆಹಾರದ ಬಳಕೆ, ಚಟುವಟಿಕೆಯಿಂದ ಇರುವುದು, ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಆರೋಗ್ಯವಾಗಿದ್ದರು. ಇಂದಿನ ದಿನಗಳಲ್ಲಿ ಆಹಾರ ಪದ್ಧತಿ ಬದಲಾಗುತ್ತಾ ಹೋದಂತೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಪೌಷ್ಟಿಕ ಆಹಾರದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಯಪ್ರಕಾಶ್, ಸಹಾಯಕ ಸರ್ಕಾರಿ ಅಭಿಯೋಜಕ ಗದಿಗೆಪ್ಪ ನೇಕಾರ್, ಆಸ್ಪತ್ರೆ ವೈದ್ಯರಾದ ಡಾ.ಸುಧಾ, ಡಾ.ಪ್ರಭು, ಡಾ.ಲಿಂಗರಾಜ್, ಡಾ.ಶ್ರೀನಿವಾಸ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಲೋಕೇಶ್, ಕಾರ್ತಿಕೇಯನ್, ಡೈಸಿ, ಶೈನಿ, ನಾಗಲತಾ, ಶಿಲ್ಪ, ಹಾಜರಿದ್ದರು.