ಕನ್ನಡಪ್ರಭವಾರ್ತೆ ಬೆಳ್ತಂಗಡಿ

ಕಾಡಂಚಿನ ಬಾಂಜಾರುಮಲೆ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಬೆಳ್ತಂಗಡಿ ಯಕ್ಷಭಾರತಿ ತಂಡದಿಂದ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯಕ್ಷಭಾರತಿ ಶತಾಬ್ದಿ ಅಂಗವಾಗಿ ಇತ್ತೀಚೆಗೆ ಬಾಂಜಾರುಮಲೆಯಲ್ಲಿ ಆಯೋಜಿಸಿದ್ದ ಮಲೆ ಶಂಕರ ಪ್ರಸಂಗದ ತಾಳಮದ್ದಳೆ ಪ್ರದರ್ಶನ ಗ್ರಾಮಸ್ಥರಿಗೆ ಹೊಸ ಅನುಭವ ನೀಡಿತು.

ನೆರಿಯ ಗ್ರಾಮದ ವ್ಯಾಪ್ತಿಯಲ್ಲಿರುವ ಬಾಂಜಾರುಮಲೆಯಲ್ಲಿ ಸುಮಾರು 50 ಕುಟುಂಬಗಳು ವಾಸವಾಗಿವೆ. ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಇಲ್ಲಿನ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಪ್ರದೇಶಗಳಲ್ಲಿ ಕಲಾ ಕಾರ್ಯಕ್ರಮಗಳು ನಡೆಯುವುದು ಅಪರೂಪ. ಪಟ್ಟಣಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವ ಅವಕಾಶವೂ ಇಲ್ಲಿನ ಜನರಿಗೆ ಸುಲಭವಾಗಿ ಸಿಗುವುದಿಲ್ಲ. ಈ ವಾಸ್ತವವನ್ನು ಅರಿತು ಯಕ್ಷಭಾರತಿಯ ತಂಡವೇ ಗ್ರಾಮಕ್ಕೆ ತೆರಳಿ ತಾಳಮದ್ದಳೆ ಆಯೋಜಿಸಿತು. ಕಲೆಯನ್ನು ಜನರ ಬಳಿಗೆ ಕೊಂಡೊಯ್ಯುವ ಈ ಪ್ರಯತ್ನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

ಶೇ.100 ಮತದಾನದಿಂದ ಗಮನ ಸೆಳೆದ ಗ್ರಾಮ


ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ದಾಖಲಿಸುವ ಮೂಲಕ ಬಾಂಜಾರುಮಲೆ ದೇಶದ ಗಮನ ಸೆಳೆದಿತ್ತು. ಭೌಗೋಳಿಕ ಸವಾಲುಗಳು ಮತ್ತು ಮೂಲಸೌಕರ್ಯಗಳ ಕೊರತೆಯ ನಡುವೆಯೂ ಪ್ರಜಾಪ್ರಭುತ್ವದ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ ಗ್ರಾಮವಿದು.

ಮಲೆ ಶಂಕರ ಪ್ರಸಂಗದ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ, ಚಂಡೆ-ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ ಹಾಗೂ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಅರ್ಜುನನಾಗಿ ಹರಿದಾಸ್ ಗಾಂಭೀರ್ಯ ಧರ್ಮಸ್ಥಳ, ಋಷಿಗಳಾಗಿ ಈಶ್ವರ ಪ್ರಸಾದ ನಿಡ್ಲೆ, ಶಂಕರನಾಗಿ ಸುರೇಶ್ ಕುದ್ರೆಂತ್ತಾಯ, ಶಂಕರಿಯಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ಹಾಗೂ ಗಣಪನಾಗಿ ರವೀಂದ್ರ ಶೆಟ್ಟಿ ಬಳಂಜ ಪಾತ್ರ ನಿರ್ವಹಿಸಿದರು. ಕಲಾವಿದರ ಮಾತಿನ ವೈಖರಿ, ಪ್ರಸಂಗದ ನಿರೂಪಣೆ ಮತ್ತು ಪೌರಾಣಿಕ ಕಥನ ಗ್ರಾಮಸ್ಥರಿಗೆ ಯಕ್ಷಗಾನದ ವಿಶಿಷ್ಟ ಅನುಭವ ನೀಡಿತು. ಕಾರ್ಯಕ್ರಮದಲ್ಲಿ ಯಕ್ಷಭಾರತಿ ಕಾರ್ಯಪ್ರಮುಖ ಸುದರ್ಶನ್ ಕೆ.ವಿ. ಹಾಗೂ ಟ್ರಸ್ಟಿ ಹರೀಶ್ ಕೊಳ್ತಿಗೆ ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯಕ್ರಮದ ಸಂಘಟನೆಯಲ್ಲಿ ವಿಶೇಷವಾಗಿ ನೆರವಾದ ನವೀನ್ ಬಾಂಜಾರು ಅವರನ್ನು ಗೌರವಿಸಲಾಯಿತು.