ದೇಶದಲ್ಲಿ ಸೇವಾ ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬಸ್ಥರಿಗೆ ಯಾವುದೇ ಅಡೆ-ತಡೆಗಳಿಲ್ಲದೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಅನುಕೂಲವಾಗುವಂತೆ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ಇಸಿಎಚ್‌ಎಸ್‌) ಅಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳ ಕ್ಲೈಮ್‌ಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವುದಕ್ಕೆ ರಕ್ಷಣಾ ಸಚಿವಾಲಯ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ‘ನಿಯಮ 377’ರಡಿ ಒತ್ತಾಯಿಸಿದ್ದಾರೆ.

ಮಂಗಳೂರು: ದೇಶದಲ್ಲಿ ಸೇವಾ ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬಸ್ಥರಿಗೆ ಯಾವುದೇ ಅಡೆ-ತಡೆಗಳಿಲ್ಲದೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಅನುಕೂಲವಾಗುವಂತೆ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ಇಸಿಎಚ್‌ಎಸ್‌) ಅಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳ ಕ್ಲೈಮ್‌ಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವುದಕ್ಕೆ ರಕ್ಷಣಾ ಸಚಿವಾಲಯ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ‘ನಿಯಮ 377’ರಡಿ ಒತ್ತಾಯಿಸಿದ್ದಾರೆ.

ಸದನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಸಂಸದರು, ಇಸಿಎಚ್‌ಎಸ್‌ ಯೋಜನೆ ನೋಂದಾಯಿತ ಆಸ್ಪತ್ರೆಗಳ ನೆಟ್‌ವರ್ಕ್ ಅನ್ನು ಅವಲಂಬಿಸಿದೆ. ಆದರೆ, ಈ ಆಸ್ಪತ್ರೆಗಳು ಸಲ್ಲಿಸುವ ಮರುಪಾವತಿ ಕ್ಲೈಮ್‌ ಸಕಾಲಕ್ಕೆ ವಿಲೇವಾರಿಯಾಗದೆ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಅಲ್ಲದೆ ನಿಗದಿತ ಕಾರಣಗಳಿಲ್ಲದೆ ಅನಗತ್ಯವಾದ ಮಾಹಿತಿ ಕೇಳಲಾಗುತ್ತಿದೆ. ಇದರಿಂದ ಆಸ್ಪತ್ರೆಗಳು ಆರ್ಥಿಕ ತೊಂದರೆಗಳಿಗೆ ಒಳಗಾಗುತ್ತಿದ್ದು, ಈ ಕಾರಣಕ್ಕೆ ಸೀಮಿತ ರೋಗಿಗಳಿಗಷ್ಟೇ ಚಿಕಿತ್ಸೆ ನೀಡಲು ಮುಂದಾಗುತ್ತಿರುವುದು ಹಾಗೂ ಈ ಯೋಜನೆಯಿಂದಲೇ ಹಿಂದೆ ಸರಿಯುತ್ತಿರುವುದು ಅರ್ಹ ಫಲಾನುಭವಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಚಾರದಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ತಕ್ಷಣವೇ ಮಧ್ಯಪ್ರವೇಶಿಸಿ, ರಾಷ್ಟ್ರೀಯ ಮಟ್ಟದಲ್ಲಿ ಕಾಲಮಿತಿಯ ಕ್ಲೈಮ್ ವಿಲೇವಾರಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಕ್ಲೈಮ್‌ಗಳ ಆರಂಭಿಕ ಪರಿಶೀಲನೆ, ವೈದ್ಯಕೀಯ ಆಡಿಟ್, ಆಕ್ಷೇಪಣೆ ಸಲ್ಲಿಕೆ, ಆಸ್ಪತ್ರೆಯ ಸ್ಪಷ್ಟನೆ, ಅಂತಿಮ ಅನುಮೋದನೆ ಹಾಗೂ ಪಾವತಿಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು ಎಂದು ಅವರು ರಕ್ಷಣಾ ಸಚಿವಾಲಯವನ್ನು ಒತ್ತಾಯಿಸಿದ್ದಾರೆ. ಒಂದೇ ಕ್ಲೈಮ್‌ಗೆ ಪದೇ ಪದೇ ಹಂತ - ಹಂತವಾಗಿ ಆಕ್ಷೇಪಣೆ ಎತ್ತುವುದನ್ನು ಕೂಡ ಸಂಪೂರ್ಣವಾಗಿ ಕೈಬಿಡಬೇಕು. ಇದಲ್ಲದೆ, ಪ್ರತಿಯೊಂದು ವೈದ್ಯ ವೆಚ್ಚದ ಬಿಲ್‌ನ ಸ್ಥಿತಿಗತಿ, ಬಾಕಿಯಿರುವ ಸಮಯ, ಕಡತವು ಯಾವ ಅಧಿಕಾರಿಯ ಬಳಿಯಿದೆ ಹಾಗೂ ಕ್ಲೈಮ್‌ ತಡೆಹಿಡಿಯಲು ಕಾರಣವೇನು ಎಂಬಿತ್ಯಾದಿ ವಿಚಾರಗಳಲ್ಲಿ ಪಾರದರ್ಶಕತೆ ತರುವುದಕ್ಕೆ ಪ್ರತ್ಯೇಕ ಎಲೆಕ್ಟ್ರಾನಿಕ್ ಡ್ಯಾಶ್‌ಬೋರ್ಡ್ ವ್ಯವಸ್ಥೆಯನ್ನು ಕೂಡ ಜಾರಿಗೆ ತರಬೇಕು ಎಂದು ಕ್ಯಾ.ಚೌಟ ಅವರು ಮನವಿ ಮಾಡಿದ್ದಾರೆ.