ಮಕ್ಕಳಿಂದ ಪರಿಸರ ಸ್ನೇಹಿ ಇಟ್ಟಿಗೆ ತಯಾರಿ: ರವೀಂದ್ರ ರುದ್ರವಾಡಿ

| Published : Jul 22 2025, 12:17 AM IST

ಸಾರಾಂಶ

ನಂದಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣಾ ದಿನ ಮತ್ತು ನೆಲ್ಸನ್ ಮಂಡೆಲಾ ದಿನವನ್ನು ಆಚರಿಸಲಾಯಿತು. ಶಾಲೆಯ ಇಕೊ ಕ್ಲಬ್ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರಸ್ನೇಹಿ ಇಟ್ಟಿಗೆಗಳನ್ನು ತಯಾರಿಸುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ನಡೆಸಿದರು.

ಕನ್ನಡಪ್ರಭ ವಾರ್ತೆ ಆಳಂದ

ನಂದಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣಾ ದಿನ ಮತ್ತು ನೆಲ್ಸನ್ ಮಂಡೆಲಾ ದಿನವನ್ನು ಆಚರಿಸಲಾಯಿತು. ಶಾಲೆಯ ಇಕೊ ಕ್ಲಬ್ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರಸ್ನೇಹಿ ಇಟ್ಟಿಗೆಗಳನ್ನು ತಯಾರಿಸುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ನಡೆಸಿದರು.

ಸಂಪನ್ಮೂಲ ಶಿಕ್ಷಕ ರವೀಂದ್ರ ರುದ್ರವಾಡಿ, ಪರಿಸರದ ಹಾಳಾಗುವಿಕೆಯ ಪೋಸ್ಟರ್‌ಗಳ ಮೂಲಕ ಪರಿಸರ ಸಂರಕ್ಷಣೆ, ಏಕ ಬಳಕೆಯ ಪ್ಲಾಸ್ಟಿಕ್ ನಿರ್ವಹಣೆ, ಮತ್ತು ದೈನಂದಿನ ತ್ಯಾಜ್ಯ ವಿಲೇವಾರಿಯ ಕುರಿತು ಪ್ರಾಯೋಗಿಕವಾಗಿ ಪ್ಲಾಸ್ಟಿಕ್ ಕಣಗಳು ಆಹಾರ ಮತ್ತು ಕುಡಿಯುವ ನೀರಿನಲ್ಲಿ ಸೇರುವ ಆತಂಕಕಾರಿ ಬೆಳವಣಿಗೆಗಳ ಬಗ್ಗೆಯೂ ತಿಳಿಸಿದರು.

ವಿದ್ಯಾರ್ಥಿಗಳು ಶಾಲಾರಂಭಕ್ಕೂ ಮುಂಚೆ ಗ್ರಾಮ ಸ್ವಚ್ಛತೆಯಲ್ಲಿ ಭಾಗವಹಿಸಿ, ಏಕ ಬಳಕೆಯ ಪ್ಲಾಸ್ಟಿಕ್‍ನ್ನು ಸಂಗ್ರಹಿಸಿ, ಅವುಗಳನ್ನು ಬಾಟಲಿಗಳಲ್ಲಿ ತುಂಬಿ ಪರಿಸರ ಸ್ನೇಹಿ ಇಕೊ ಬ್ರಿಕ್ಸ್ ತಯಾರಿಸಿದರು. ಈ ಇಟ್ಟಿಗೆಗಳನ್ನು ಶಾಲೆಯ ವಿಶ್ರಾಂತಿ ಕಟ್ಟೆ, ವಾಚನ ಕಟ್ಟೆ, ಮತ್ತು ಕೈ ತೋಟದ ತಡೆಗೋಡೆ ನಿರ್ಮಾಣಕ್ಕೆ ಬಳಸಲಾಗುತ್ತದೆ.

ರವೀಂದ್ರ ರುದ್ರವಾಡಿ ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆಯ ಚೀಲಗಳನ್ನು ಬಳಸುವಂತೆ ಸಲಹೆ ನೀಡಿದರು. ಈ ಸಲಹೆಯನ್ನು ಪಾಲಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಆಯ್ಕೆಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಹಿಂದೆ, ಶಾಲೆಯ ಮಕ್ಕಳು ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಕಾರ್ಖಾನೆಗಳಿಗೆ ಒಪ್ಪಿಸುತ್ತಿದ್ದರು, ಆದರೆ ಈಗ ಈ ವಿನೂತನ ಇಕೊ ಬ್ರಿಕ್ಸ್‌ ಯೋಜನೆಯ ಮೂಲಕ ಪರಿಸರ ಸಂರಕ್ಷಣೆಗೆ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನೆಲ್ಸನ್ ಮಂಡೆಲಾ ದಿನವನ್ನು ಸಹ ಕೊಂಡಾಡಲಾಯಿತು. ಮಾನವ ಹಕ್ಕುಗಳ ಹೋರಾಟಗಾರರಾದ ನೆಲ್ಸನ್ ಮಂಡೆಲಾರ ಜೀವನ, ಸಾಧನೆ, ಮತ್ತು ಕೊಡುಗೆಗಳನ್ನು ಸ್ಮರಿಸಲಾಯಿತು. ಸಮಾಜ ವಿಜ್ಞಾನ ಶಿಕ್ಷಕ ಬಸವರೆಡ್ಡಿ ಪಾಟೀಲ್ ಮತ್ತು ಮುಖ್ಯ ಶಿಕ್ಷಕ ಪಂಪಾಪತಿ ಗಾಣಿಗೇರ ಮಕ್ಕಳಿಗೆ ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರೇರಣೆ ನೀಡಿದರು.

ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.