ಸಿಂಧನೂರು: ಪಿಒಪಿ ಗಣೇಶ ಮೂರ್ತಿಗಳನ್ನು ಬಿಟ್ಟು, ನಾವೆಲ್ಲರೂ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಸೌಹಾರ್ದತೆಯಿಂದ ಹಬ್ಬ ಆಚರಿಸೋಣ ಎಂದು ಮುಖ್ಯಶಿಕ್ಷಕ ಶಂಕರ ದೇವರು ಹಿರೇಮಠ ಹೇಳಿದರು.

ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆ ಹಾಗೂ ಚಿಕ್ಕಯ್ಯ ಪಂಡಿತ್ ಕ್ಲಬ್ ಘಟಕ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಸರಸ್ನೇಹಿ ಗಣೇಶ ತಯಾರಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆಯಲ್ಲಿ ನದಿಗಳ ಹಾಗೂ ಜಲಮೂಲಗಳ ಸಂರಕ್ಷಣೆಯು ಮಹತ್ವದಾಗಿದೆ. ನೀರಿನ ಮೂಲಗಳು ಕಲುಷಿತವಾಗದಂತೆ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಣ್ಣಗಳಿಂದ ಕೂಡಿದ ವಿಷಕಾರಿ ಅಲಂಕಾರಿಕ ಬಣ್ಣಗಳ ಲೇಪನ ಮಾಡಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು. ನೈಸರ್ಗಿಕ ಬಣ್ಣವನ್ನು ಬಳಸಿ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಮನವಿ ಮಾಡಿದರು.ಗಣೇಶ ಮೂರ್ತಿಗಳನ್ನು ತಯಾರಿಸುವ ವಿಧಾನಗಳನ್ನು ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ವಿದ್ಯಾರ್ಥಿಗಳು ಗಣೇಶ ಮೂರ್ತಿಗಳನ್ನು ಆಸಕ್ತಿಯಿಂದ ತಯಾರಿಸಿದರು. ಗ್ರಾಮದಲ್ಲಿ ಜಾಥಾ ಮಾಡಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಲು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಅತಿಥಿ ಶಿಕ್ಷಕ ಪ್ರದೀಪ್ ಕುಮಾರ್, ಅಂಗನವಾಡಿ ಶಿಕ್ಷಕಿ ಭಾಗ್ಯಶ್ರೀ, ಮುಖ್ಯ ಅಡುಗೆಯವರಾದ ರೇಣುಕಾ, ಹನುಮಮ್ಮ ಪಾಲ್ಗೊಂಡಿದ್ದರು.