ತೀವ್ರ ಬರದ ಛಾಯೆ, ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯ ನಡುವೆ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜಿಲ್ಲೆಯು ಸಜ್ಜುಗೊಂಡಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ತೀವ್ರ ಬರದ ಛಾಯೆ, ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯ ನಡುವೆ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜಿಲ್ಲೆಯು ಸಜ್ಜುಗೊಂಡಿದೆ.ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ-ಮನೆಗಳಲ್ಲಿ ಹಾಗೂ ಪ್ರಮುಖ ವೃತ್ತ, ರಸ್ತೆ, ಬಡಾವಣೆ ಹಾಗೂ ಸ್ಥಳಗಳಲ್ಲಿ ಚಿಕ್ಕದಾದ ಗಣೇಶ ಮೂರ್ತಿಯಿಂದ ಹಿಡಿದು ಎತ್ತರದ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗಾಗಿ ಜನರು ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.
ಹಬ್ಬಕ್ಕೆ ಅಗತ್ಯವಾದ ಗೌರಿ-ಗಣೇಶ ಮೂರ್ತಿಗಳು ಹಾಗೂ ಪೂಜಾ ಸಾಮಗ್ರಿಗಳು, ಹೂವು-ಹಣ್ಣುಗಳ ಖರೀದಿಯು ಜೋರಾಗಿ ಸಾಗಿದ್ದು, ಸೋಮವಾರ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ, ಮಾರುಕಟ್ಟೆ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ವಿವಿಧ ಬಗೆಯ ಗಣೇಶ ಮೂರ್ತಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಸಣ್ಣ ಗಾತ್ರದಿಂದ ಹಿಡಿದು ಬೃಹತ್ ಮೂರ್ತಿಗಳವರೆಗೆ ಹಲವು ವಿನ್ಯಾಸಗಳಲ್ಲಿ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ವಿವಿಧ ಬಣ್ಣ, ವಿನ್ಯಾಸ ಹಾಗೂ ಅಲಂಕಾರಗಳಿಂದ ಕೂಡಿದ ಮೂರ್ತಿಗಳು ಮಕ್ಕಳಿಂದ ಹಿಡಿದು ಹಿರಿಯರ ಗಮನ ಸೆಳೆಯುತ್ತಿವೆ.ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನ ತೋರಣ, ಪೂಜಾ ಸಾಮಗ್ರಿಗಳು, ಕರ್ಪೂರ, ಅಗರಬತ್ತಿ, ಅರಿಶಿನ, ಕುಂಕುಮ, ತೆಂಗಿನಕಾಯಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟವೂ ಹೆಚ್ಚಾಗಿದೆ. ಗೌರಿ ಹಬ್ಬಕ್ಕೆ ಅಗತ್ಯವಿರುವ ಸಾಂಪ್ರದಾಯಿಕ ಸಾಮಗ್ರಿಗಳ ಖರೀದಿಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಹಬ್ಬದ ದಿನ ಸಮೀಪಿಸುತ್ತಿದ್ದಂತೆ ವ್ಯಾಪಾರ ವಹಿವಾಟು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಇದರೊಂದಿಗೆ ನಗರದ ವಿವಿಧ ಬಡಾವಣೆಗಳು ಹಾಗೂ ಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು ಅಲಂಕಾರಿಕ ಸಿದ್ಧತೆಗಳು ಭರದಿಂದ ಸಾಗಿವೆ. ಬಣ್ಣಬಣ್ಣದ ವಿದ್ಯುತ್ ದೀಪಗಳು, ತೋರಣಗಳು ಹಾಗೂ ವಿಶೇಷ ಅಲಂಕಾರಗಳಿಂದ ಪ್ರಮುಖ ರಸ್ತೆಗಳು ಹಾಗೂ ಗಣೇಶ ಮಂಟಪಗಳು ಕಂಗೊಳಿಸಲು ಆರಂಭಿಸಿವೆ. ಯುವಕರು ಮತ್ತು ಸಂಘ-ಸಂಸ್ಥೆಗಳ ಸದಸ್ಯರು ಮಂಟಪಗಳ ನಿರ್ಮಾಣ ಹಾಗೂ ಅಲಂಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪ್ರಮುಖ ಮಾರುಕಟ್ಟೆ, ಗಣೇಶ ಮಂಟಪಗಳು, ಸೂಕ್ಷ್ಮ ಪ್ರದೇಶಗಳು ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಣ, ವಾಹನಗಳ ಸುಗಮ ಸಂಚಾರ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಸಿಬ್ಬಂದಿಯನ್ನು ನಿಯೋಜಿಸುವ ಸಿದ್ಧತೆ ನಡೆದಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಧ್ವನಿವರ್ಧಕ ಬಳಕೆ, ಸಂಚಾರ ನಿಯಮ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ.ಪರಿಸರ ಸ್ನೇಹಿ ಮಣ್ಣಿನ ಗಣೇಶ ತಯಾರಿ ಕಾರ್ಯಾಗಾರ
ರಾಯಚೂರು: ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ಮತ್ತು ಗ್ರೀನ್ ರಾಯಚೂರು ಅವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ಪರಿಸರ ಸ್ನೇಹಿ ಬೀಳವುಳ್ಳ ಮಣ್ಣಿನ ಗಣೇಶ ತಯಾರಿಗಾಗಿ ಒಂದು ದಿನದ ಕಾರ್ಯಗಾರ ಭಾನುವಾರ ನಡೆಯಿತು.ಈ ವೇಳೆ ಮಾತನಾಡಿದ ಗಣ್ಯರು, ಉಚಿತವಾಗಿ ಪರಿಸರ ಸ್ನೇಹಿ ಹಾಗೂ ಬೀಜವುಳ್ಳ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸುವ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಳೆದ ಎರಡು-ಮೂರು ವರ್ಷಗಳಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿ, ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ವಲಯ ಆಯುಕ್ತ ಜಯಪಾಲರೆಡ್ಡಿ, ಸಂಸ್ಥೆ ಮುಖ್ಯಸ್ಥೆ ಸರಸ್ವತಿ ಕಿಲಕಿಲೆ, ಕಾರ್ಯದರ್ಶಿ ರಾಜೇಂದ್ರ ಶಿವಾಳೆ, ಉಪಾಧ್ಯಕ್ಷ ಸಿ.ವಿ. ಪಾಟೀಲ್, ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಾಗರ ಮಾಸ್ಟರ್, ಬಂಡೇಶ ವಲ್ಕಂದಿನ್ನಿ ಸೇರಿ ಮಕ್ಕಳು, ಪಾಲಕರು, ಸಾರ್ವಜನಿಕರು ಇದ್ದರು.