ನಾನು, ನನ್ನದು ಎಂಬ ಅಹಂಕಾರವನ್ನು ತೊರೆದು ಎಲ್ಲರೂ ಒಂದೇ ಎಂಬ ಸಮಾನತೆಯ ಭಾವನೆಯನ್ನು ಬೆಳೆಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ನಾನು, ನನ್ನದು ಎಂಬ ಅಹಂಕಾರವನ್ನು ತೊರೆದು ಎಲ್ಲರೂ ಒಂದೇ ಎಂಬ ಸಮಾನತೆಯ ಭಾವನೆಯನ್ನು ಬೆಳೆಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.ಅವರು ನಗರದ ಕೋಟೆ ಏರಿಯಾದ ಮಿಲಾಪ್ ಶಾದಿಮಹಲ್‌ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಸ್ವಾಗತ ಸಮಿತಿ ವತಿಯಿಂದ ಶನಿವಾರ ನಡೆದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)’ ರಾಜ್ಯವ್ಯಾಪಿ ಸೀರತ್ ಅಭಿಯಾನದ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇವಲ ಬಾಯಲ್ಲಿ ನುಡಿಯುವುದಷ್ಟೇ ಅಲ್ಲ, ನುಡಿದಂತೆ ನಡೆಯುವುದೇ ನಿಜವಾದ ಭಕ್ತಿ ಮಾರ್ಗ. ನಮ್ಮ ನಡೆ ಮತ್ತು ನುಡಿ ಒಂದಾದಾಗ ಮಾತ್ರ ಪರಮಾತ್ಮನ ಕೃಪೆಗೆ ಪಾತ್ರರಾಗಲು ಸಾಧ್ಯ. ನುಡಿಯಲ್ಲಿ ಶುದ್ಧತೆ, ನಡೆಯಲ್ಲಿ ಭಕ್ತಿ ಇದ್ದಾಗ ಭಗವಂತ ನಮ್ಮನ್ನು ಮೆಚ್ಚುತ್ತಾನೆ ಎಂದು ಹೇಳಿದರು.
ಜಗತ್ತಿನಲ್ಲಿ ಮನುಷ್ಯನು ಕೇವಲ ಮಾನವನಾಗಿ ಉಳಿಯದೆ ಸದ್ಗುಣಗಳಿಂದ ಮಹಾದೇವನಾಗಬೇಕು. ವಿಶ್ವಗುರು ಬಸವಣ್ಣನವರು ಸಾರಿದ ‘ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ'''''''' ಎಂಬ ವಿಶಾಲವಾದ ಭಾವನೆ ಪ್ರತಿಯೊಬ್ಬರ ಮನದಲ್ಲಿ ಮೂಡಿದಾಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು, ದೇಶದಲ್ಲಿ ಪ್ರಸ್ತುತ ಮಳೆ ಅಭಾವ ಹಾಗೂ ಬರಗಾಲದಿಂದಾಗಿ ಅನ್ನದಾತ ರೈತನ ಬದುಕು ಕಷ್ಟಕರವಾಗಿದೆ. ಸರ್ವರಿಗೂ ಶಾಂತಿ, ನೆಮ್ಮದಿ, ಸಮೃದ್ಧಿ ಕರುಣಿಸಲಿ ಹಾಗೂ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.ನಂತರ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ದೇವರು ಒಬ್ಬನೇ, ನಾಮ ಹಲವು. ದೇವರೆಡೆಗೆ ಹೋಗುವ ದಾರಿಗಳು ಮತ್ತು ಪ್ರಾರ್ಥನಾ ವಿಧಾನಗಳು ಬೇರೆ ಬೇರೆಯಾಗಿರಬಹುದು. ಆದರೆ ಆರಾಧನೆಯ ಅಂತಿಮ ಉದ್ದೇಶ ಒಂದೇ. ನಾವು ರುದ್ರಾಕ್ಷಿ ಹಿಡಿದು ಜಪಿಸಿದರೆ, ಮುಸ್ಲಿಂ ಬಾಂಧವರು ತಸ್ಬೀಹ್ ಹಿಡಿದು ಪ್ರಾರ್ಥಿಸುತ್ತಾರೆ. ಜಗತ್ತಿನಲ್ಲಿ ಜಾತಿ-ಮತಗಳಿಗಿಂತ ಮಿಗಿಲಾದ ಒಂದೇ ಒಂದು ಧರ್ಮವಿದೆ, ಅದೇ ಮಾನವ ಧರ್ಮ ಎಂದು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಂಞ ಮಾತನಾಡಿ, ಭಾರತ ದೇಶವು ನೂರಾರು ಭಾಷೆ, ಸಂಸ್ಕೃತಿ ಮತ್ತು ಧರ್ಮಗಳ ವೈವಿಧ್ಯಮಯ ಸಂಗಮವಾಗಿದೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಬದುಕಬೇಕಾಗಿದೆ. ನಾವೆಲ್ಲರೂ ಉಸಿರಾಡುವ ಗಾಳಿ ಒಂದೇ, ನಮ್ಮೆಲ್ಲರ ದೇಹದಲ್ಲಿ ಹರಿಯುವ ರಕ್ತದ ಬಣ್ಣವೂ ಕೆಂಪೇ. ಹೀಗಿರುವಾಗ ನಾನು ಮೇಲು, ನೀನು ಕೀಳು ಎಂಬ ತಾರತಮ್ಯದ ಭಾವನೆ ಬಿಟ್ಟು ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿ ಮಾತನಾಡಿದರು. ಮುಖಂಡರಾದ ಬಾಬಾರ್‌ಪಾಷಾ ಜಾಗೀರದಾರ್, ಕೆ.ಮರಿಯಪ್ಪ, ಸೈಯ್ಯದ್ ಜಾಫರ್‌ಅಲಿ ಜಾಗೀರದಾರ್, ರಾಜೇಶ ಹಿರೇಮಠ, ಸೈಯ್ಯದ್ ಹಾರೂನ್‌ಪಾಷಾ ಜಾಗೀರದಾರ್, ಟಿ.ಹುಸೇನ್‌ಸಾಬ್, ಕೆ.ಜಿಲಾನಿಪಾಷಾ, ಮಹೆಬೂಬ್ ಖಾನ್ಸಾಬ್, ವೆಂಕಣ್ಣಾಚಾರ್ ಜೋಶಿ, ಜಾವೀದ್ ಖಾದ್ರಿ, ನಬೀಸಾಬ್, ಸೈಯ್ಯದ್ ಮಿಟ್ಟಿಮನಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಹುಸೇನಬಾಷಾ ನಿರೂಪಿಸಿದರು.