ಅಮೆರಿಕಾದಲ್ಲಿ ಪರಿಸರ ಸ್ನೇಹಿ ಸಾಮೂಹಿಕ ಗಣೇಶನ ಪೂಜೆ!

| Published : Aug 30 2025, 01:00 AM IST

ಅಮೆರಿಕಾದಲ್ಲಿ ಪರಿಸರ ಸ್ನೇಹಿ ಸಾಮೂಹಿಕ ಗಣೇಶನ ಪೂಜೆ!
Share this Article
  • FB
  • TW
  • Linkdin
  • Email

ಸಾರಾಂಶ

ಅಮೇರಿಕಾದ ಮ್ಯಾಂಚೇಸ್ಟರ್‌ನ ಮಿಸ್ಸೋರಿಯ ಗಣೇಶ ದೇವಸ್ಥಾನದಲ್ಲಿ 20ಕ್ಕೂ ಹೆಚ್ಚು ಭಾರತೀಯ ಕುಟುಂಬದ ಸದಸ್ಯರು ಕೂಡಿ ಸಂಭ್ರಮದಿಂದ ಗಣೇಶನನ್ನು ಪ್ರತಿಷ್ಟಾಪಿಸಿದ್ದಾರೆ

ಧಾರವಾಡ: ಭಾರತೀಯರು ವಿದೇಶಕ್ಕೆ ಹೋದ ಬಳಿಕ ಭಾರತೀಯ ಸಂಸ್ಕೃತಿ, ಹಬ್ಬ-ಹರಿದಿನ ಮರೆತು ಪಾಶ್ಚಾತ್ಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಾರೆ ಎಂಬ ವಾದ ಬಹಳಷ್ಟು ಮಂದಿಯದ್ದು. ಆದರೆ, ಹಾಗೇನಿಲ್ಲ, ನಾವು ಯಾವುದೇ ದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿ ಹಾಗೂ ಹಬ್ಬ ಹರಿದಿನಗಳನ್ನು ಕಿಂಚಿತ್‌ ಮರೆಯದೇ ತಪ್ಪದೇ ಆಚರಿಸುತ್ತೇವೆ ಎನ್ನುತ್ತಾರೆ ಈ ಅನಿವಾಸಿ ಭಾರತೀಯರು.

ಧಾರವಾಡ ಮೂಲದ ಅಯ್ಯಪ್ಪಯ್ಯ ಹಿರೇಮಠ ಕುಟುಂಬವು ಅನೇಕ ವರ್ಷಗಳಿಂದ ಅಮೇರಿಕಾಕ್ಕೆ ಹೋಗಿ ನೆಲೆಸಿದ್ದು, ಪ್ರತಿ ವರ್ಷ ಅಲ್ಲಿಯ ಭಾರತೀಯ ಸ್ನೇಹಿತರ ಕುಟುಂಬಗಳೊಂದಿಗೆ ಹಬ್ಬಗಳನ್ನು ಆಚರಿಸುತ್ತಾರೆ. ಇದೀಗ ಗಣೇಶ ಹಬ್ಬವನ್ನು ಶಾಸ್ತ್ರೋಸ್ತಕವಾಗಿ ಹಾಗೂ ಸಾಮೂಹಿಕವಾಗಿ ಆಚರಿಸಿದ್ದಾರೆ.

ಅಮೇರಿಕಾದ ಮ್ಯಾಂಚೇಸ್ಟರ್‌ನ ಮಿಸ್ಸೋರಿಯ ಗಣೇಶ ದೇವಸ್ಥಾನದಲ್ಲಿ 20ಕ್ಕೂ ಹೆಚ್ಚು ಭಾರತೀಯ ಕುಟುಂಬದ ಸದಸ್ಯರು ಕೂಡಿ ಸಂಭ್ರಮದಿಂದ ಗಣೇಶನನ್ನು ಪ್ರತಿಷ್ಟಾಪಿಸಿದ್ದಾರೆ. ವಿಶೇಷ ಎಂದರೆ, ಅವರು ಸ್ಥಾಪಿಸಿರುವ ಎಲ್ಲ ಗಣೇಶ ಮೂರ್ತಿಗಳು ಮಣ್ಣಿನವು. ದೇವಸ್ಥಾನದ ಆವರಣದಲ್ಲಿಯೇ ಸಾಮೂಹಿಕವಾಗಿ ಮೂರ್ತಿಗಳನ್ನು ಸ್ಥಾಪಿಸಿ ದೇವಸ್ಥಾನ ಆವರಣದಲ್ಲಿ ಪೂಜಾರಿ ಕಡೆಯಿಂದ ಮೂರ್ತಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಪ್ರತಿಷ್ಟಾಪಿಸಲಾಗಿದೆ. ಬರೀ ಹಿರಿಯರು ಮಾತ್ರವಲ್ಲದೇ ಮಕ್ಕಳಿಗೂ ಈ ಹಬ್ಬದ ಮಹತ್ವ ಗೊತ್ತಿರಲಿ ಎಂದು ಈ ಕಾರ್ಯದಲ್ಲಿ ಮಕ್ಕಳು ಸಹ ಒಳಗೊಂಡಿದ್ದು ವಿಶೇಷ.

ಭಾರತದಲ್ಲಿದ್ದಾಗ ಎಷ್ಟರ ಮಟ್ಟಿಗೆ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದೇವೋ ಗೊತ್ತಿಲ್ಲ. ಅಮೇರಿಕಾದಲ್ಲಿ ಮಾತ್ರ ತುಂಬು ಮನಸ್ಸಿನಿಂದ ಹಬ್ಬಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿಯೇ ಆಚರಿಸುತ್ತಿದ್ದೇವೆ. ಒಂದೂ ಹಬ್ಬ ಬಿಡದೇ ಕುಟುಂಬದ ಸದಸ್ಯರೆಲ್ಲರೂ ಆಚರಿಸುತ್ತಿದ್ದು, ಇದೀಗ ಗಣೇಶ ಹಬ್ಬವನ್ನು ನಮ್ಮೂರಿನ ರೀತಿಯಲ್ಲಿಯೇ ಐದು ದಿನಗಳ ಕಾಲ ಪ್ರತಿಷ್ಟಾಪಿಸಿ ವಿಸರ್ಜನೆ ಮಾಡುತ್ತೇವೆ. ಹೂವು-ಹಣ್ಣು, ಸಿಹಿ ತಿಂಡಿಗಳನ್ನು ಮಾಡಿ ಸಾಮೂಹಿಕ ಪೂಜೆ, ಭೋಜನ ಮಾಡುತ್ತೇವೆ ಎಂದು ಅಯ್ಯಪ್ಪಯ್ಯ ಹಿರೇಮಠ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.