ಸಾರಾಂಶ
ಬಲ್ಲಮಾವಟಿ: ಶಾಸಕರ ಅಭಿನಂದನಾ ಸಭೆ, ಅಭಿವೃದ್ಧಿ ಕಾರ‍್ಯಗಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ ನಾಪೋಕ್ಲುರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿಯನ್ನೂ ಸಾಧಿಸಲಾಗುತ್ತಿವೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬಲ್ಲಮಾವಟಿ ವಲಯ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಅಭಿನಂದನಾ ಸಭೆ ಹಾಗೂ ಅಭಿವೃದ್ಧಿ ಕಾರ‍್ಯಗಳಿಗೆ ಚಾಲನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಹಿಂದಿನ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ‍್ಯಗಳು ಸ್ಥಗಿತಗೊಂಡಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ‍್ಯಗಳನ್ನು ಕೈಗೆತ್ತಿಕೊಂಡಿದೆ. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ‍್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದರು.ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಕೋಟಿ ೨೦ ಲಕ್ಷ ರು.ಗಳ ಕೆಲಸ ಆಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ೩೫ ಕೋಟಿ ರು. ಗಳ ಅನುದಾನ ನೀಡಲಾಗಿದೆ. ವಿಶೇಷ ಅನುದಾನ ೨೦ ಕೋಟಿ ರು., ವಿರಾಜಪೇಟೆ ಕ್ಷೇತ್ರದಲ್ಲಿ ಆರು ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆ ಹಾನಿ ಅನುದಾನ ೧೦ ಕೋಟಿ ರು. ಒದಗಿಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನ ೨೫ ಕೋಟಿ ರು. ನೀಡಲಾಗಿದ್ದು, ಅದರಲ್ಲಿ ೧೭ ಕೋಟಿ ರು. ಹಣವನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರಾ ಧರ್ಮಜ ಉತ್ತಪ್ಪ ಮಾತನಾಡಿ, ಕುಡಿಯುವ ನೀರು, ಗ್ರಾಮೀಣ ರಸ್ತೆಗಳು, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಮೂಲಸೌಕರ‍್ಯಗಳನ್ನು ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿದೆ. ಮತ್ತಷ್ಟು ಅಭಿವೃದ್ಧಿ ಕಾರ‍್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭ ಶಾಸಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.ಬಲ್ಲಮಾವಟಿ ವಲಯ ಕಾಂಗ್ರೆಸ್ ಅಧ್ಯಕ್ಷ ತಾಪಂಡ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಜರುಗಿದ ಕಾರ‍್ಯಕ್ರಮದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ನೆಲಜಿ ಕಾಂಗ್ರೆಸ್ ಬೂತ್ ಅಧ್ಯಕ್ಷ ಕೈಬುಳಿರ ಸಾಬು ಗಣಪತಿ, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ನಿರ್ದೇಶಕ ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ, ಬಲ್ಲಮಾವಟ್ಟಿ ಬೂತ್ ಅಧ್ಯಕ್ಷ ಚೆಂಗೇಟಿರ ಕುಶಾಲಪ್ಪ, ಪೇರೂರು ಬೂತ್ ಅಧ್ಯಕ್ಷ ಪಾಲೆಯಂಡ ಅಯ್ಯಪ್ಪ, ಹಿರಿಯ ಕಾಂಗ್ರೆಸಿಗರಾದ ಮೂವೆರ ಹ್ಯಾರಿ ಸುಬ್ರಮಣಿ, ಮನವಟ್ಟಿರ ಪಾಪು ಚಂಗಪ್ಪ, ಕಾಂಗ್ರೆಸ್ ಪದಾಧಿಕಾರಿಗಳು, ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಮನವಟ್ಟಿರ ದಯಾ ಕುಟ್ಟಪ್ಪ ಪ್ರಸ್ತಾವಿಸಿ, ನಿರೂಪಿಸಿ, ವಂದಿಸಿದರು.ನಂತರ ಬಲ್ಲಮಾವಟಿ, ಪೇರೂರು, ದೊಡ್ಡ ಪುಲಿಕೋಟು, ನೆಲಜಿ ಗ್ರಾಮದ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ, ಬೊಳ್ಯಬ್ಬೆ ರಸ್ತೆ ಕಾಮಗಾರಿ, ಬಲ್ಲಮಾವಟಿಗೆ ವಿದ್ಯುತ್ ಪರಿವರ್ತಕ, ಪಂದೇಟುವಿಗೆ ವಿದ್ಯುತ್ ಪರಿವರ್ತಕ,ನುಚ್ಚು ಮಣಿಯಂಡ ಐನ್‌ಮನೆಗೆ ತೆರಳುವ ರಸ್ತೆ, ಬಲ್ಲಮಾವಟಿ ಭಗವತಿ ದೇವಸ್ಥಾನ ರಸ್ತೆ, ಪೆಬ್ಬಟ್ಟಿರ ಕುಟುಂಬಸ್ಥರ ಐನ್ ಮನೆಗೆ ತೆರಳುವ ಮಾರ್ಗದ ತಡೆ ಗೋಡೆ, ಪೊನ್ನುಕಂಡ ಕುಟುಂಬಸ್ಥರ ರಸ್ತೆ, ಪೇರೂರು ಇಗ್ಗುತ್ತಪ್ಪ ದೇವಸ್ಥಾನ ರಸ್ತೆ, ನೆಲಜಿ ಕಕ್ಕಬ್ಬೆ ಮುಖ್ಯ ರಸ್ತೆ ಡಾಂಬರೀಕರಣ, ನಾಪನೆರವಂಡ ಐನ್ ಮನೆ ರಸ್ತೆ, ಚೀಯಕಪೂವಂಡ ಐನ್ ಮನೆಗೆ ತೆರಳುವ ರಸ್ತೆಕಾಮಗಾರಿ ವೀಕ್ಷಣೆ ಹಾಗೂ ಭೂಮಿಪೂಜೆ ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು.