ಸಾರಾಂಶ
ಸಂಡೂರಿನ ಕೃಷಿ ಇಲಾಖೆ ಆವರಣದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ನಡೆಯಿತು. ಶಾಸಕ ಈ. ತುಕಾರಾಮ್ ಭಾಗವಹಿಸಿದ್ದರು. ಸಾಧಕರ ರೈತರನ್ನು ಗೌರವಿಸಲಾಯಿತು.
ಸಂಡೂರು: ದೇಶದ ಆಹಾರ ಭದ್ರತೆಯನ್ನು ಕಾಪಾಡುವಲ್ಲಿ ರೈತರ ಪಾತ್ರ ಮಹತ್ವದ್ದಾಗಿದೆ. ರೈತರು ದೇಶದ ಬೆನ್ನೆಲುಬು. ರೈತರು ಸಾವಯವ, ಸಮಗ್ರ ಕೃಷಿ ಹಾಗೂ ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸಿದರೆ, ಅವರು ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಈ. ತುಕಾರಾಮ್ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕರು ರಾಜ್ಯ ಸರ್ಕಾರ ಮರು ಜಾರಿಗೊಳಿಸಿರುವ ಕೃಷಿ ಭಾಗ್ಯ ಯೋಜನೆಗೆ ಚಾಲನೆ ನೀಡಿ, ‘ಸ್ವಾತಂತ್ರ್ಯಾನಂತರದಲ್ಲಿ ೨೦ ಅಂಶಗಳ ಕಾರ್ಯಕ್ರಮದ ಅನುಷ್ಠಾನ ಹಾಗೂ ಹಸಿರು ಕ್ರಾಂತಿಯ ಮೂಲಕ ದೇಶವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ರಾಜ್ಯ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಮರು ಜಾರಿ ಮಾಡಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು. ರಾಘಾಪುರದಲ್ಲಿ ಕೃಷಿ ಸಂಶೋಧನಾ ಕೇಂದ್ರ: ತಾಲೂಕಿನ ರಾಘಾಪುರದಲ್ಲಿನ ತೋಟಗಾರಿಕೆ ಫಾರಂನಲ್ಲಿ ಕೃಷಿ ಹಾಗೂ ತೋಟಗಾರಿಕಾ ಸಂಶೋಧನೆ ಹಾಗೂ ತರಬೇತಿ ಕೇಂದ್ರ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಪಟ್ಟಣದಲ್ಲಿನ ಎಪಿಎಂಸಿ ಈಗ ಸ್ವತಂತ್ರವಾಗಿದೆ. ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಡಲಾಗುವುದು. ಹಾಪ್‌ಕಾಮ್ಸ್ ಮಳಿಗೆ ತೆರೆಯಲು ಕ್ರಮಕೈಗೊಳ್ಳಲಾಗುವುದು. ತಾಲೂಕಿನಲ್ಲಿರುವ ೧೨ ಸಾವಿರ ಎಕರೆ ಇನಾಂ ಭೂಮಿಯ ಸರ್ವೇ ಕಾರ್ಯ ಮುಗಿದಿದ್ದು, ಫಾರಂ ೫೭ ಮೂಲಕ ಅವರಿಗೆ ಪಟ್ಟಾ ನೀಡುವ ಕಾರ್ಯವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದರು. ಪ್ರಗತಿಪರ ರೈತರಾದ ಕನಕರೆಡ್ಡಿ ಹಾಗೂ ಬಿ. ದುರ್ಗಪ್ಪ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರ ಕ್ರಿಮಿನಾಶಕಗಳನ್ನು ಬಳಸದೆ, ಸಾವಯವ ಕೃಷಿ ಕೈಗೊಳ್ಳಬೇಕಿದೆ. ಇದರಿಂದ ಶೂನ್ಯ ಬಂಡವಾಳದ ಕೃಷಿ ಸಾಧ್ಯ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಮಾತನಾಡಿ, ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿ ಮಾಡಿದೆ. ಈ ಯೋಜನೆ ಅಡಿಯಲ್ಲಿ ಈ ವರ್ಷ ತಾಲೂಕಿಗೆ ೭೦ ಕೃಷಿ ಹೊಂಡಗಳ ನಿರ್ಮಾಣದ ಗುರಿ ನೀಡಲಾಗಿದೆ. ಕೃಷಿ ಹೊಂಡ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ. ೯೦ ಹಾಗೂ ಇತರೆಯವರಿಗೆ ಶೇ. ೮೦ರಷ್ಟು ಸಬ್ಸಿಡಿ ದೊರೆಯಲಿದೆ. ಈಗಾಗಲೆ ತಾಲೂಕಿನಲ್ಲಿ ೨,೫೩೫ ಕೃಷಿ ಹೊಂಡಗಳು ನಿರ್ಮಾಣವಾಗಿವೆ. ರೈತರು ಬೆಳೆ ವಿಮೆ ಮಾಡಿಸಬೇಕು. ತಾಲೂಕಿನಲ್ಲಿ ಎಫ್‌ಐಡಿ ನೊಂದಣಿಯಲ್ಲಿ ಶೇ. ೮೦ರಷ್ಟು ಸಾಧನೆಯಾಗಿದೆ. ೨೬,೬೦೦ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಬರದಿಂದಾಗಿ ಹಾನಿಯಾಗಿರುವುದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ರಣಜಿತ್‌ಪುರದ ರೈತ ಮಹಿಳೆಯರು ತಮ್ಮ ಜಮೀನುಗಳಿಗೆ ತೆರಳಲು ಅಲ್ಲಿರುವ ಆರ್‌ಐಪಿಎಲ್ ಕಂಪನಿಯವರು ಅಡ್ಡಿಪಡಿಸುತ್ತಿದ್ದಾರೆ. ಹೊಲಗಳಿಗೆ ತೆರಳದಂತೆ ಗೇಟ್ ಅಳವಡಿಸಿದ್ದಾರೆ. ಆದ್ದರಿಂದ ತಮ್ಮ ಹೊಲಗಳಿಗೆ ತೆರಳಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಪ್ರಗತಿಪರ ರೈತರಾದ ಕನಕರೆಡ್ಡಿ, ಮೇಕೆ ಈರಣ್ಣ, ಎ. ರಾಮಚಂದ್ರಪ್ಪ, ರಫೀಕ್, ಜಿ. ಬಸವರಾಜ, ತೆಕ್ಕಲಕೋಟೆ ಕೊಟ್ರಪ್ಪ, ಎಸ್.ಎನ್. ಹೂಲೆಮ್ಮ ಅವರಿಗೆ ಶ್ರೇಷ್ಟ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಳೆ ಸಮೀಕ್ಷೆಗೆ ನೆರವಾಗುವ ಖಾಸಗಿ ನಿವಾಸಿಗಳನ್ನು ಸನ್ಮಾನಿಸಲಾಯಿತು. ಕೃಷಿ ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹನುಮಪ್ಪ ನಾಯಕ, ವಲಯ ಅರಣ್ಯಾಧಿಕಾರಿ ದಾದಾ ಖಲಂದರ್, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಲಿಬಾಷಾ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಜಾಫರ್ ಸಾಬ್, ಅಧ್ಯಕ್ಷ ನಾಗಪ್ಪ, ಖಜಾಂಚಿ ದೊಡ್ಡ ಮಲ್ಲಯ್ಯ, ಸದಸ್ಯರಾದ ಎಚ್.ಎಂ. ಬಕ್ಕಪ್ಪಯ್ಯ, ಬೊಮ್ಮಜ್ಜ, ರೈತ ಮುಖಂಡರಾದ ಚಂದ್ರಶೇಖರ ಮೇಟಿ, ಧರ್ಮಾನಾಯ್ಕ್, ಬಿ.ಎಂ. ಉಜ್ಜಿನಯ್ಯ, ವಿ.ಜೆ. ಶ್ರೀಪಾದಸ್ವಾಮಿ, ಕೆ. ಸತ್ಯಪ್ಪ, ಎ. ವೀರಣ್ಣ, ಪುರಸಭೆ ಸದಸ್ಯರಾದ ಎಲ್.ಎಚ್. ಶಿವಕುಮಾರ್, ಪೊಂಪಣ್ಣ, ಹಲವು ರೈತರು ಉಪಸ್ಥಿತರಿದ್ದರು.