ಸಾರಾಂಶ
ಹಿರಿಯೂರು: ಸಮಗ್ರ ಕೃಷಿ ಪದ್ಧತಿಯನ್ನು ರೈತರು ಅನುಸರಿಸುವುದರಿಂದ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬನೆಯ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.
ಹಿರಿಯೂರು ತಾಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಪ್ರಸ್ತುತ ಹವಾಮಾನ ವೈಪರಿತ್ಯದಿಂದ ಕೃಷಿ ಒಂದೇ ನಂಬಿ ಆರ್ಥಿಕವಾಗಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ. ಕೃಷಿಗೆ ಪೂರಕವಾದ ತೋಟಗಾರಿಕೆ ಬೆಳೆಗಳು, ಜೇನು ಸಾಕಾಣಿಕೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಕುರಿ, ಮೇಕೆ ಸಾಕಾಣಿಕೆಯನ್ನು ಕೈಗೊಳ್ಳುವುದರಿಂದ ಒಂದರಲ್ಲಿ ನಷ್ಟವಾದರೆ ಇನ್ನೊಂದು ಕೃಷಿ ಪೂರಕ ಚಟುವಟಿಕೆಯಿಂದ ಲಾಭ ನಿರೀಕ್ಷಿಸಬಹುದು ಎಂದರು.ಪಶುಸಂಗೋಪನಾ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಭಾರತದಲ್ಲಿ ಮಾಂಸಹಾರ ಸೇವನೆಗೆ ಅತೀ ಹೆಚ್ಚು ಕುರಿ ಮತ್ತು ಮೇಕೆ ಮಾಂಸ ಉಪಯೋಗವಾಗಲಿದೆ. ಕುರಿ ಮತ್ತು ಮೇಕೆಯಿಂದ ಹಾಲು, ಉಣ್ಣೆ, ಚರ್ಮ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಲು ಉತ್ತಮ ಗೊಬ್ಬರ ದೊರೆಯುತ್ತದೆ. ಕುರಿ ಮತ್ತು ಮೇಕೆ ಸಾಕಣಿಕೆಯಲ್ಲಿ ರೈತರಲ್ಲಿ ಆಸಕ್ತಿ ಮೂಡಿಸಲು ಬಿ.ಜಿ.ಕೆರೆ ವೀರಭದ್ರಪ್ಪ, ಶಿರಾ ತಾಲೂಕಿನ ದೊಡ್ಡಜ್ಜಿ, ಸುಬ್ಬಾರೆಡ್ಡಿ, ವೀರಕೆಂಪಣ್ಣರ ಯಶೋಗಾಥೆಯನ್ನು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯು ಸಾಂಪ್ರದಾಯಿಕವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಪ್ರಸಿದ್ಧಿಯಾಗಿದ್ದು, ಸಾಕಾಣಿಕೆಯ ವೈಜ್ಞಾನಿಕ ಜ್ಞಾನ, ಬದ್ಧತೆ ಹಾಗೂ ಶಿಸ್ತು ರೂಢಿಸಿಕೊಂಡರೆ ಉತ್ತಮ ಲಾಭವನ್ನು ನಿರೀಕ್ಷಿಸಲು ಸಾಧ್ಯ. ಜಿಲ್ಲೆಯಲ್ಲಿ ಕುರಿ ಸಾಕಾಣಿಕೆಯ ರೈತರು ಒಟ್ಟುಗೂಡಿ ಕುರಿ ಫೆಡರೇಷನ್ ಮಾಡಿಕೊಳ್ಳುವುದರಿಂದ ಎಲ್ಲರೂ ಸಮಗ್ರವಾಗಿ ಮುನ್ನೆಡೆಯಲು ಅನುಕೂಲಕರವಾಗಿದೆ ಎಂದು ಸಲಹೆ ನೀಡಿದರು.ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಸಹಾಯಕ ನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕುರಿ (13.50 ಲಕ್ಷ) ಮತ್ತು ಮೇಕೆಗಳ (3.85 ಲಕ್ಷ) ಸಂಖ್ಯೆಯಿದ್ದು, ಕುರಿ ಮತ್ತು ಮೇಕೆ ಮಾಂಸಕ್ಕೆ ಅತೀ ಹೆಚ್ಚು ಬೇಡಿಕೆ ಹಾಗೂ ಅವುಗಳ ಸಾಕಾಣಿಕೆ ಉತ್ತಮ ಅವಕಾಶಗಳಿವೆ. ಇವು ಸದಾ ಕಾಲ ಸಣ್ಣ ಮತ್ತು ಅತೀ ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ತಂದುಕೊಡುವಂತಾಗಿವೆ. ಕುರಿಗಳಲ್ಲಿ ಡೆಕನಿ, ಬನ್ನೂರು ಮತ್ತು ಬಳ್ಳಾರಿ ತಳಿಗಳು ಉತ್ತಮವಾಗಿದ್ದು ಮೇಕೆಯಲ್ಲಿ ನಂದಿದುರ್ಗ ತಳಿಯು ಹೆಸರುವಾಸಿಯಾಗಿದೆ. 25-30 ಕುರಿಗಳಿಗೆ ಒಂದು ಟಗರನ್ನು ಸಾಕುವುದರಿಂದ ಗಣನೀಯವಾಗಿ ಅವುಗಳ ವಂಶಾಭಿವೃದ್ಧಿ ಹೆಚ್ಚಿಸಬಹುದು ಎಂದರು.
ಕೃಷಿ ಅಧಿಕಾರಿ ಎಂ.ಜೆ.ಪವಿತ್ರಾ ಮಾತನಾಡಿ, ರೈತರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಪಹಣಿ ಮತ್ತು ಆಧಾರ್ ನೊಂದಿಗೆ ನೋಂದಾಯಿಸುವುದರಿಂದ ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸರ್ಕಾರದ ಹಲವು ಯೋಜನೆಗಳಲ್ಲಿ ಡಿಬಿಟಿ ಮೂಲಕ ಸಹಾಯಧನ ಪಡೆಯಲು ಸಹಕಾರಿಯಾಗಿದೆ ಎಂದರು.